ರಾಜ್ಯ

ಗದಗ ಜಿಲ್ಲೆಯ ಶೇ.೯೬ ರಷ್ಟು ಆಟೊ ಚಾಲಕರಿಗಿಲ್ಲ ನೆರವು…!

೧೬ ಸಾವಿರ ಆಟೋ ಚಾಲಕರಲ್ಲಿ ೪೨೩ ಜನಕ್ಕಷ್ಟೇ ನೆರವು

ದಾಖಲಾತಿ, ಮಾಹಿತಿ ಕೊರತೆ

 ಸರ್ಕಾರದ ೫೦೦೦ ಪರಿಹಾರ ಧನ ನಾಮಕಾವಾಸ್ತೆ

ಮಂಜುನಾಥ ಎಸ್.ರಾಠೋಡ

ಗದಗ prajakiran.com : ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಆಟೊ ಚಾಲಕರಿಗೆ ರಾಜ್ಯ ಸರ್ಕಾರ ಘೋಷಿಸಿದ ಪರಿಹಾರ ಧನದ ಪ್ರಯೋಜನ ಗದಗ ಜಿಲ್ಲೆಯ ಬಹುತೇಕ ಆಟೊ ಚಾಲಕರಿಗೆ ಸಿಕ್ಕಿಲ್ಲ.

ರಾಜ್ಯ ಸರ್ಕಾರವು ಪ್ರತಿ ಆಟೊ ಚಾಲಕನಿಗೆ ,೦೦೦ ಪರಿಹಾರ ಧನ ಘೋಷಿಸಿತ್ತು. ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಲು ಜು. ೩೧ ಕಡೆಯ ದಿನವಾಗಿತ್ತು.

ಗದಗ ನಗರದಲ್ಲಿಯೇ ೫೫೦೦ ಆಟೋ ಚಾಲಕರಿದ್ದಾರೆ. ಅದರಲ್ಲಿ ೧೨೦ ಜನರಿಗೆ ಪರಿಹಾರ ಸಿಕ್ಕಿದೆ. ಗದಗ ಜಿಲ್ಲೆಯ ಒಟ್ಟು ೧೬೦೦೦ ಆಟೊ ಚಾಲಕರ ಪೈಕಿ ೪೨೩ ಜನರಿಗಷ್ಟೇ ಅರ್ಜಿ ಸಲ್ಲಿಸಲು ಸಾಧ್ಯವಾಗಿದ್ದು, ಅಷ್ಟೇ ಜನರಿಗೆ ಪರಿಹಾರದ ಮೊತ್ತ ಸಿಕ್ಕಿದೆ. ಮಿಕ್ಕುಳಿದವರು ಅದರಿಂದ ವಂಚಿತ ರಾಗಿದ್ದಾರೆ.

ಸೇವಾ ಸಿಂಧೂ ಆ್ಯಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಚಾಲಕರ ವಾಹನ ಪರವಾನಗಿ, ಚಾಲನಾ ಪರವಾನಗಿ ಪತ್ರ, ಆಧಾರ್ ಸಂಖ್ಯೆಯ ವಿವರಗಳು ಒಂದಕ್ಕೊಂದು ಹೋಲಿಕೆಯಾಗದೆ ಆ್ಯಪ್ನಲ್ಲಿ ದಾಖಲೆಗಳು ಅಪ್ಲೋಡ್ ಆಗದ ಕಾರಣ ಹೆಚ್ಚಿನವರು ಸರ್ಕಾರದ ಪರಿಹಾರದಿಂದ ವಂಚಿತರಾಗಿದ್ದಾರೆ ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ ಅಗಸಿಮನಿ ತಿಳಿಸಿದರು.

ಸೇವಾ ಸಿಂಧೂ ಆ್ಯಪ್ ತಾಂತ್ರಿಕ ದೋಷದಿಂದ ಕೂಡಿದೆ. ದಾಖಲೆಗಳೇ ಅದರಲ್ಲಿ ಸರಿಯಾಗಿ ಅಪ್‌ಲೋಡ್ ಆಗುತ್ತಿರಲಿಲ್ಲ. ಈ ಕುರಿತು ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) ಅಧಿಕಾರಿಗಳನ್ನು ಪ್ರಶ್ನಿಸಿದರೆ, “ಅದಕ್ಕೂ ನಮಗೂ ಸಂಬಂಧವಿಲ್ಲ. ನಮ್ಮ ದಾಖಲೆಗಳಿಗೆ ಸಂಬಂಧಿಸಿದಂತೆ ಏನಾದರೂ ಇದ್ದರೆ ತಿಳಿಸಿ, ಸರಿಪಡಿಸಿ ಕೊಡಲಾಗುವುದು” ಎಂದು ಜಾರಿಕೊಂಡಿದ್ದಾರೆ.

ಹೀಗಾಗಿ ಹೆಚ್ಚಿನ ಆಟೊ ಚಾಲಕರಿಗೆ ಪರಿಹಾರ ಧನ ಸಿಕ್ಕಿಲ್ಲ” ಎಂದು ಆಟೋ ಚಾಲಕರ ಸಂಘದ ಕಾರ್ಯದರ್ಶಿ ಬಸವರಾಜ ಮನಗುಂಡಿ ತಿಳಿಸಿದರು.

“ಬಹುತೇಕ ಆಟೋ ಚಾಲಕರು ಅನಕ್ಷರಸ್ಥರಿದ್ದಾರೆ. ಹೊಟ್ಟೆ ತುಂಬಿಸಿ ಕೊಳ್ಳಲು ಆಟೋ ಓಡಿಸುತ್ತಿದ್ದಾರೆ. ದಾಖಲೆಗಳಲ್ಲಿ ಕೆಲವರ ಹೆಸರು ಹೆಚ್ಚು ಕಮ್ಮಿಯಾಗಿದೆ. ಮತ್ತೆ ಕೆಲವರ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಯಾಗಿಲ್ಲ.

ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಅಂತಹವರಿಗೆ ಪರಿಹಾರ ಸಿಕ್ಕಿಲ್ಲ. ಎಲ್ಲ ಆಟೊ ಚಾಲಕರ ಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಪರಿಹಾರ ಘೋಷಿಸಿದೆ.

ಆದರೆ, ಹೆಚ್ಚಿನವರಿಗೆ ಅದು ತಲುಪದಿದ್ದರೆ ಪರಿಹಾರ ಘೋಷಿಸಿ ಪ್ರಯೋಜನವೇನು? ಬರೀ ಘೋಷಣೆಗಷ್ಟೇ ಸೀಮಿತವಾಗಿದೆ ಎಂದು ಗದಗ ಜಿಲ್ಲಾ ಜೈ ಭೀಮ ಆಟೋ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ವಿಜಯ ಕಲ್ಮನಿ ಆರೋಪಿಸಿದ್ದಾರೆ.

“ಮಾರ್ಚ್‌ನಿಂದ ಇದುವರೆಗೆ ಆಟೊ ಚಾಲಕರು ಸಂಕಷ್ಟದಲ್ಲೇ ಜೀವನ ನಡೆಸುತ್ತಿದ್ದಾರೆ. ಲಾಕ್‌ಡೌನ್ ತೆರವುಗೊಳಿಸಿದರೂ ಪರಿಸ್ಥಿತಿ ಮೊದಲಿನಂತೆ ಇಲ್ಲ. ಸಾರ್ವಜನಿಕರು ಆಟೊ ಹತ್ತಲು ಬಹಳ ಯೋಚಿಸುತ್ತಿದ್ದಾರೆ.

ನಿತ್ಯ ನಾಲ್ಕೈದು ಜನ ಆಟೊದಲ್ಲಿ ಬಂದರೆ ಹೆಚ್ಚು ಎಂಬಂತಾಗಿದೆ. ಅದರಿಂದ ಬರುವ ಅಷ್ಟು ಹಣದಲ್ಲಿ ಮನೆ ನಡೆಸುವುದು, ಬ್ಯಾಂಕಿನ ಸಾಲ ತುಂಬುವುದಾದರೂ ಹೇಗೆ?” ಎಂದು ಪ್ರಶ್ನಿಸಿದ್ದಾರೆ.

ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿ, ಸೇವಾ ಸಿಂಧೂ ಆ್ಯಪ್ ಸರಿಪಡಿಸಬೇಕು. ಆರು ತಿಂಗಳವರೆಗೆ ಎಲ್ಲ ಆಟೊ ಚಾಲಕರಿಗೆ ಮಾಸಿಕ ರೂ ೭,೫೦೦ ಪರಿಹಾರ ಕೊಡಬೇಕು” ವಿಜಯ ಕಲ್ಮನಿ, ಅಧ್ಯಕ್ಷರು, ಗದಗ ಜಿಲ್ಲಾ ಆಟೋ ಚಾಲಕರ, ಮಾಲಕರ ಸಂಘ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *