ಆಧ್ಯಾತ್ಮ

ದೇಶದೆಲ್ಲೆಡೆ ಆ. 25ರಂದು ಶ್ರೀವೀರಭದ್ರೇಶ್ವರ ಜಯಂತಿ

ಧಾರವಾಡ prajakiran.com  : ಶಿವನ ಮಾನಸಪುತ್ರನೆಂದು ಕರೆಯಲ್ಪಡುವ, ಶಿವನ ಅಂಶವೇ ಆದ ಆರಾಧ್ಯ ದೈವ, ರಂಭಾಪುರಿ ಜಗದ್ಗುರು ಪೀಠದ ಗೋತ್ರಪುರುಷನಾಗಿರುವ ಶ್ರೀವೀರಭದ್ರಸ್ವಾಮಿಯ ಜಯಂತಿ ಮಹೋತ್ಸವವನ್ನು ಭಾದ್ರಪದ ತಿಂಗಳ ಮೊದಲ ಮಂಗಳವಾರದ ದಿನ (ಆಗಷ್ಟ-೨೫ ರಂದು) ದೇಶದೆಲ್ಲೆಡೆ ಆಚರಿಸಲು ಅಖಿಲ ಭಾರತ ವೀರಶೈವ-ಲಿಂಗಾಯತ ಸಂಘಟನೆ ಕರೆ ನೀಡಿದೆ.

ಭೂಮಿಯ ಮೇಲೆ ಶ್ರೀವೀರಭದ್ರಸ್ವಾಮಿಯ ಮೊದಲ ಅವತಾರವೆಂದೇ ಖ್ಯಾತಿ ಪಡೆದಿರುವ ಆಂಧ್ರಪ್ರದೇಶ ರಾಜ್ಯದ ಕಡಪಾ ಜಿಲ್ಲೆಯ ರಾಯಚೋಟಿಯ ಶ್ರೀವೀರಭದ್ರಸ್ವಾಮಿ ಸನ್ನಿಧಿಯ ಕ್ಷೇತ್ರದಲ್ಲಿ ಆಗಷ್ಟ-೨೫ ರಂದು ಶ್ರೀವೀರಭದ್ರಸ್ವಾಮಿಯ  ಜಯಂತಿ ಮಹೋತ್ಸವವನ್ನು ಅತ್ಯಂತ ಶೃದ್ಧಾ ಭಕ್ತಿಗಳಿಂದ ವಿದ್ಯುಕ್ತವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಪ್ರತಿವರ್ಷ ಭಾದ್ರಪದ ಮಾಸದ ಮೊದಲ ಮಂಗಳವಾರದ ದಿನ ರಾಷ್ಟ್ರದಾದ್ಯಂತ ಆಚರಿಸಲು ನಿರ್ಧಾರ ಕೈಕೊಂಡಿರುವುದು ಅತ್ಯಂತ ಸಂತಸದ ವಿಷಯ. ಶ್ರೀವೀರಭದ್ರ ಸ್ವಾಮಿ ಅಖಿಲ ಭಾರತ ಅಷ್ಟೇ ಅಲ್ಲ ಭಾರತದ ಆಚೆಗೂ ಪೂಜೆಗೊಳ್ಳುತ್ತಿರುವ ದೇವರಾಗಿದ್ದು, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ವೀರಭದ್ರನ ದೇವಸ್ಥಾನಗಳಿವೆ.

ಲಕ್ಷ ಲಕ್ಷ ಸಂಖ್ಯೆಯಲ್ಲಿ ವೀರಭದ್ರನ ಭಕ್ತರಿದ್ದಾರೆ. ಅಸಂಖ್ಯಾತ ಭಕ್ತರ ಮನೆದೇವರಾಗಿ, ವೀರಭದ್ರ ಶೋಭಿಸಿದ್ದಾನೆ. ಶಿವ ದೇವಾಲಯಗಳು ಇದ್ದಲ್ಲೆೆಲ್ಲ ಶ್ರೀವೀರಭದ್ರ ಸ್ವಾಮಿಯೂ ಸಹ  ನೆಲೆಸಿರುವುದು ವಾಡಿಕೆ.

ಮುಖ್ಯವಾಗಿ ವೀರಭದ್ರನು ಶಿವಧರ್ಮ ರಕ್ಷಕನಾದ ಪ್ರಾಗೈತಿಹಾಸಿಕ ದ್ರಾವಿಡ ವೀರದೇವತೆ. ಹಿಮಾಲಯದ ಹರಿದ್ವಾರ ಬಳಿಯ ಗಂಗೋತ್ರಿ ಪರ್ವತಶ್ರೇಣಿಯಲ್ಲಿ ಶಿವ ಮತ್ತು ವೀರಭದ್ರರ ಐತಿಹಾಸಿಕ ಸ್ಥಾನಗಳನ್ನು ಈಗಲೂ ತೋರಿಸುತ್ತಾರೆ. 

ಭಾರತದ ವಿವಿಧ ರಾಜ್ಯಗಳಲ್ಲಿ ವೀರಭದ್ರನ ಆರಾಧನೆ, ಆಚರಣೆಗಳು ವೈವಿಧ್ಯ ಮತ್ತು ವೈಶಿಷ್ಟ್ಯಪೂರ್ಣವಾಗಿವೆ.

ಶಿವಧರ್ಮ ರಕ್ಷಕನೆಂದು ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ, ಉರಿಲಿಂಗಪೆದ್ದಿ, ಅಕ್ಕಮಹಾದೇವಿ, ಸತ್ಯಕ್ಕ ಮುಂತಾದ ೧೨ನೇ ಶತಮಾನದ ಶಿವಶರಣರು ವೀರಭದ್ರನನ್ನು ಸ್ಮರಿಸಿದ್ದಾರೆ. ವೀರಭದ್ರನನ್ನು ಕುರಿತ ವಿಪುಲ ಸಾಹಿತ್ಯ ಬಹುಭಾಷೆಗಳಲ್ಲಿ ಸೃಷ್ಟಿಯಾಗಿದೆ.

ವಿಶೇಷವಾಗಿ ವೀರಭದ್ರನ ವೀರಗುಣವನ್ನು ಪ್ರತಿಬಿಂಬಿಸುವ ಆರಾಧನೆಯ ಕಟ್ಟುನಿಟ್ಟಿನ ಆಚರಣೆಗಳು ಬಹು ಪ್ರಾಚೀನ ಕಾಲದಿಂದಲೇ ಹಳ್ಳಿಯಿಂದ ನಗರ ಪಟ್ಟಣಗಳಲ್ಲಿ ಜರುಗುತ್ತ, ವೀರಭದ್ರನಲ್ಲಿ ಜನರ ಗಾಢಭಕ್ತಿ ಅಚಲ ವಿಶ್ವಾಸ ಅನೂಚಾನವಾಗಿ ಇಂದಿಗೂ ನಡೆದುಕೊಂಡು ಬಂದಿದೆ.

ದೀಪೋತ್ಸವ : ವೀರಭದ್ರೇಶ್ವರನನ್ನು ಮನೆದೇವರು ಉಳ್ಳ ಎಲ್ಲಾ ವೀರಶೈವ ಲಿಂಗಾಯತ ಬಾಂಧವರು, ಮತ್ತು ವೀರಭದ್ರನ ಬಗ್ಗೆ ಭಕ್ತಿಶ್ರದ್ಧೆಯುಳ್ಳ ಎಲ್ಲರೂ ಆಗಷ್ಟ-೨೫ ರಂದು ತಮ್ಮ ಮನೆಗಳಲ್ಲಿ ಶ್ರೀವೀರಭದ್ರಸ್ವಾಮಿಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಬೇಕು.

ದೇವರ ಮನೆಯಲ್ಲಿ ಹಾಗೂ ಮನೆಯ ಬಾಗಿಲ ಬಳಿ ಜ್ಯೋತಿಗಳನ್ನು ಮುಡಿಸಿ ದೀಪೋತ್ಸವ ಆಚರಿಸಬೇಕು. ಶ್ರೀವೀರಭದ್ರಸ್ವಾಮಿಯ ನೂರೆಂಟು ನಾಮಾವಳಿಯ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಬೇಕೆಂದು ಶ್ರೀವೀರಭದ್ರಸ್ವಾಮಿ ಪ್ರಸಾರ ಸಮಿತಿ ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯತ ಸಂಘಟನೆ   ತಿಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *