follow/like: facebook.com/prajakirannews
ಉಡುಪಿ prajakiran.com : ರಾಜ್ಯದಲ್ಲಿ ಈ ಹಿಂದೆ ಸೂಚಿಸಿರುವ ಜೂನ್ 25ರಿಂದ ಜುಲೈ 4ರವರೆಗೆ ನಿಗದಿಯಂತೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶಕುಮಾರ್ ತಿಳಿಸಿದ್ದಾರೆ.
ಅವರು ಮಂಗಳವಾರ ಉಡುಪಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಪೂರ್ವ ಸಿದ್ದತೆ ಕುರಿತು ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.
ಒಂದು ವೇಳೆ ಪರೀಕ್ಷೆ ವೇಳೆ ಕರೋನಾ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡರೆ ಅಥವಾ ಉಲ್ಬಣಿಸಿದರೆ ಪರ್ಯಾಯ ವ್ಯವಸ್ಥೆ ಕುರಿತು ಚಿಂತಿಸಲಾಗುವುದು.
ಸದ್ಯಕ್ಕೆ ರಾಜ್ಯದಲ್ಲಿ ಕರೋನಾ ವೈರಸ್ ಸೋಂಕು ನಿಯಂತ್ರಣದಲ್ಲಿದೆ. ಕೇವಲ ಹೊರ ರಾಜ್ಯದಿಂದ ಬಂದವರಿಗೆ ಮಾತ್ರ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಯಾರು ಆತಂಕಪಡಬೇಕಾದಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆಗಾಗಿ ಅಗತ್ಯ ಸಿದ್ದತೆಗಳು ನಡೆದಿವೆ. ಸದ್ಯದ ಪರಿಸ್ಥಿತಿಯಲ್ಲಿ ಪರೀಕ್ಷೆಯನ್ನು ರದ್ದು ಪಡಿಸುವ ಅಥವಾ ಮುಂದೂಡುವ ಚಿಂತನೆ ಇಲ್ಲ.
ಪರೀಕ್ಷೆ ಸಂದರ್ಭದಲ್ಲಿ ಅಂತಹ ಪರಿಸ್ಥಿತಿ ಏನಾದರೂ ಎದುರಾದರೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದಾಗಿವೆ. ಆದರೆ ರಾಜ್ಯದಲ್ಲಿ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಚಿವ ಸುರೇಶ ಕುಮಾರ್ ಹೇಳಿದರು.