ರಾಜ್ಯ

ಮಹಾರಾಷ್ಟ್ರದಿಂದ ಬಂದವರಿಗೆ ಮಾತ್ರ ೭ ದಿನ ಸಾಂಸ್ಥಿಕ ಕ್ವಾರಂಟೈನ್

ಧಾರವಾಡ prajakiran.com  : ಸರಕಾರದ ಹೊಸ ನಿಯಮದಂತೆ ಮಹಾರಾಷ್ಟ್ರದಿಂದ ಬಂದವರಿಗೆ ಮಾತ್ರ ೭ ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

ಅವರು ಸೋಮವಾರ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, ಉಳಿದ ರಾಜ್ಯಗಳಿಂದ ಬರುವವರಿಗೆ ಹೊಮ್‌ಕ್ವಾರಂಟೈನ್ ಮಾಡಲಾಗುತ್ತಿದೆ. ರೋಗಲಕ್ಷಣ ಇರುವವರಿಗೆ ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದರು.  

ಜಿಲ್ಲೆಯಲ್ಲಿ ಇಲ್ಲಿವರೆಗೆ ೨೧,೧೧೨ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ೧೨೧ ಕರೊನಾ ವೈರಸ್ ಪ್ರಕರಣಗಳು ಪತ್ತೆ ಆಗಿದ್ದು, ಇದರಲ್ಲಿ ೫೦ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎರಡು ಸಾವು ಸಂಭವಿಸಿವೆ ಎಂದರು.   

ಸಾರ್ವಜನಿಕರು ಅನಗತ್ಯ ತಿರುಗಾಟ, ಪ್ರವಾಸಗಳನ್ನು ನಿಲ್ಲಿಸಬೇಕು. ೧೦ ವರ್ಷದೊಳಗಿನ ಮಕ್ಕಳು ೬೦ ವರ್ಷಕ್ಕಿಂತ ಹೆಚ್ಚು ವಯಸ್ಸಾದವರು, ಗರ್ಭಿಣಿಯರು ಮನೆಯಿಂದ ತೀರಾ ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ಹೊರಗೆ ಬರಬಾರದೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.



ಪ್ರತಿದಿನ ದೆಹಲಿ ಮತ್ತು ಮಹಾರಾಷ್ಟ್ರದ ಒಂದು ರೈಲು ಬರುತ್ತಿದೆ.  ಅದರಲ್ಲಿ ಜಿಲ್ಲೆಗೆ ಬರುವವರನ್ನು ಸಾಂಸ್ಥಿಕ ಮತ್ತು ಹೊಮ್ ಕ್ವಾರಂಟೈನಗೆ ಒಳಪಡಿಸಲಾಗುತ್ತಿದೆ.

೫ ಹಾಸ್ಟೆಲ್‌ಗಳಲ್ಲಿ ೧೨೫ ಜನ ಇದ್ದಾರೆ. ೯ ಹೊಟೆಲ್‌ಗಳಲ್ಲಿ ೪೫ ಜನ ತಮ್ಮದೇ  ವೆಚ್ಚದಲ್ಲಿ ಕ್ವಾರಂಟೈನ್ ಆಗಿದ್ದಾರೆ ಎಂದು ಅವರು ತಿಳಿಸಿದರು.

ಸಾರ್ವಜನಿಕರು ಹೋಮ್ ಕ್ವಾರಂಟೈನ್‌ಗೆ ಪ್ರಾಮುಖ್ಯತೆ ನೀಡಬೇಕು. ಹೋಮ್ ಕ್ವಾರಂಟೈನ್‌ನಲ್ಲಿ ಇರುವವರನ್ನು ಗ್ರಾಮ ಆರೋಗ್ಯ ಕಾರ್ಯಪಡೆ ಮುಖಾಂತರ ಮತ್ತು ಪಟ್ಟಣ, ನಗರ ಪ್ರದೇಶದಲ್ಲಿ ನಿವಾಸಿಗಳ ಸಂಘ, ಅಧಿಕಾರಿಗಳ ಮೂಲಕ ನಿರಂತರವಾಗಿ ನಿಗಾವಹಿಸಲಾಗುತ್ತಿದೆ.

ಸರಕಾರದ ಮಾರ್ಗಸೂಚಿ ಪ್ರಕಾರ ಹೋಮ್ ಕ್ವಾರಂಟೈನ್ ಆದವರ ಮನೆಗೆ ಪೋಸ್ಟರ್ ಅಂಟಿಸಿ, ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಲಾಗುತ್ತಿದೆ. ಕ್ವಾರಂಟೈನ್ ಆದವರು ಪ್ರತಿದಿನ ಸೆಲ್ಫಿ ತೆಗೆದು ಅಪ್‌ಲೋಡಮಾಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

 ಹೋಮ್‌ಕ್ವಾರಂಟೈನ್‌ದಲ್ಲಿರುವವರು ಹೊರಗೆ ಬಂದು ಸುತ್ತಾಡಿದರೆ ಸಾರ್ವಜನಿಕರು ೧೦೭೭ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು.




 ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ೫ ಜನರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ.

ಸಾಕಷ್ಟು ಸೂಚನೆ ನೀಡಿದರೂ ಕೂಡ ಹೋಮ್ ಕ್ವಾರಂಟೈನ್ ಮೊಹರು ಹಾಕಿರುವ ವ್ಯಕ್ತಿಗಳು ಹೊರಗೆ ಸುತ್ತಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಬರುವುದು ಮಾಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಅವರು ಎಚ್ಚರಿಸಿದರು.

ಕೆಮ್ಮು, ನೆಗಡಿ, ಜ್ವರ ಬಂದರೆ ಯಾವುದೇ ನಿರ್ಲಕ್ಷ ಮಾಡದೇ ಸಾರ್ವಜನಿಕರು ತಕ್ಷಣ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿ ಆರಂಭಿಸಿರುವ ಫೀವರ್ ಕ್ಲಿನಿಕ್‌ದಲ್ಲಿ ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕು.

ಈಗ ವರದಿಯಾಗುತ್ತಿರುವ ಬಹುತೇಕ ಕೋವಿಡ್ ಪ್ರಕರಣಗಳು ಹೊರರಾಜ್ಯದಿಂದ ಬಂದವರು ಮತ್ತು ಈಗಾಗಲೇ ಕ್ವಾರಂಟೈನ್‌ದಲ್ಲಿದ್ದವರೇ ಆಗಿದ್ದಾರೆ. ಜನರು ಯಾವುದೇ ರೀತಿಯ ಭಯ, ಆತಂಕಕ್ಕೆ ಒಳಗಾಗದೇ, ಸಾಮಾಜಿಕ ಅಂತರ ಪಾಲನೆ ಮತ್ತು ಸದಾ ಮಾಸ್ಕ್ ಧಾರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಮಾಧ್ಯಮಗೋಷ್ಠಿಯಲ್ಲಿ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರಠಾಣಿ, ಕಿಮ್ಸ್ ವಿವಿಧ ವಿಭಾಗಗಳ ಮುಖ್ಯಸ್ಥರಾದ ಪ್ರೊ. ಶೈಲೇಂದ್ರ, ಪ್ರೊ. ಈಶ್ವರ ಹಸಬಿ ಮತ್ತಿತರರು ಸುದ್ದಿಗೋಷ್ಟಿಯಲ್ಲಿ ಇದ್ದರು.

 

 




PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *