ರಾಜ್ಯ

ಶಿಕ್ಷಕರು ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ವಿದ್ಯಾರ್ಥಿಗಳನ್ನು ಸಂಪರ್ಕಿಸಿ

ಧಾರವಾಡ prajakiran.com : ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ಶಿಕ್ಷಕರು ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಮಾರ್ಗದರ್ಶನ ನೀಡಬೇಕು ಎಂದು ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣ ನಿರ್ದೇಶಕಿ ಮಮತಾ ನಾಯಕ ಹೇಳಿದರು.

 ಅವರು ಮಂಗಳವಾರ ನಗರದ ಡಯಟ್‌ನ ಡೆಪ್ಯೂಟಿ ಚೆನ್ನಬಸಪ್ಪ ಸಮಾವೇಶ ಭವನದಲ್ಲಿ ಜಿಲ್ಲಾ ಮಟ್ಟದ ವಿದ್ಯಾಗಮ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ವಿದ್ಯಾಗಮ ಯೋಜನೆಯು ಬೇರೆ ರಾಜ್ಯಗಳಲ್ಲಿಯೂ ಇದೀಗ ಅನುಷ್ಠಾನವಾಗುತ್ತಿರುವುದು ಬಹಳ ಹೆಮ್ಮೆಯ ವಿಷಯ ಎಂದರು.

ಪ್ರತೀ ವಾರ ಏನೇನು ಚಟುವಟಿಕೆಗಳನ್ನು ನಡೆಸಬೇಕೆನ್ನುವ ಕುರಿತು ಶಿಕ್ಷಕರು ತಮ್ಮದೇ ಆದ ವೇಳಾಪಟ್ಟಿಯನ್ನು ಹೊಂದುವ ಅಗತ್ಯವಿದೆ ಎಂದು ಅವರು ಹೇಳಿದರು.

ಕೋವಿಡ್-೧೯ದಂತಹ ಮಹಾಮಾರಿ ವೈರಸ್‌ದಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಶಾಲೆಗಳು ಮುಚ್ಚಿರುವ ಸಂದರ್ಭದಲ್ಲಿ ಮಕ್ಕಳ ಕಲಿಕಾ ಹಿನ್ನೆಡೆ ತಡೆಗಟ್ಟಲು ವಿದ್ಯಾಗಮ ಪೂರಕ ಯೋಜನೆಯಾಗಿದೆ.

ವಿದ್ಯಾರ್ಥಿಗಳು ತಮ್ಮ ಕಲಿಕಾ ಆಸಕ್ತಿಯನ್ನು ಕಳೆದುಕೊಳ್ಳದಂತೆ ಅಲ್ಲಿ ವ್ಯಾಸಂಗದ ಹಸಿರನ್ನು ಉಳಿಸಲು ವಿದ್ಯಾಗಮ ಒಂದು ಉಪಯುಕ್ತ ಯೋಜನೆಯಾಗಿದೆ.

ವಿದ್ಯಾಗಮವು ವಿದ್ಯಾರ್ಥಿಗಳನ್ನೇ ಕೇಂದ್ರೀಕರಿಸಿದ್ದರೂ ಸಹಿತ ಶಿಕ್ಷಕರ ಹಾಗೂ ಅಧಿಕಾರಿಗಳ ನಿರಂತರ ಮಾರ್ಗದರ್ಶನ ಅತೀ ಅಗತ್ಯವಾಗಿದೆ ಎಂದರು.

 ವಿದ್ಯಾಗಮದ ಮೂಲಕ ಶಿಕ್ಷಕ-ಶಿಕ್ಷಕಿಯರು ಪ್ರತೀ ಓಣಿ, ಬಡಾವಣೆಗಳಲ್ಲಿ ಸಂಚರಿಸಿ ವಿದ್ಯಾರ್ಥಿಗಳಿಗೆ ಪಾಠಗಳ ಮಾರ್ಗದರ್ಶನ ಮಾಡಲು ಮನೆಬಾಗಿಲಿಗೆ ಬರುತ್ತಿರುವುದು ಪಾಲಕ-ಪೋಷಕರಿಗೆ ಖುಷಿ ತಂದಿದೆ.

ಶಾಲೆಗಳು ಆರಂಭವಾಗುವರೆಗೂ ವಿದ್ಯಾಗಮವನ್ನು ಬಹಳ ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸುವುದು ಶಿಕ್ಷಣ ಇಲಾಖೆಯ ಎಲ್ಲ ಭಾಗೀದಾರರ ಕರ್ತವ್ಯವಾಗಿದೆ ಎಂದು ಸೂಚಿಸಿದರು.

ದೂರದರ್ಶನದ ಚಂದನ ವಾಹಿನಿಯ ಮೂಲಕ ಪ್ರಸಾರ ಮಾಡಲಾಗುತ್ತಿರುವ ಪಾಠಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ವೀಕ್ಷಣೆ ಮಾಡಿ ಅಲ್ಲಿಯ ಕಲಿಕಾ ಸಂಗತಿಗಳನ್ನು ದಾಖಲಿಸಿಕೊಳ್ಳಬೇಕು.

ರಾಜ್ಯ ಮಟ್ಟದಲ್ಲಿ ಸಾ.ಶಿ. ಇಲಾಖೆಯ ನಿರ್ದೇಶಕರ ಹುದ್ದೆಗೆ ಪದೋನ್ನತಿ ಹೊಂದಿರುವ ಮಮತಾ ನಾಯಕ ಅವರನ್ನು ಡಯಟ್ ಉಪನ್ಯಾಸಕಿಯರ ಪರವಾಗಿ ಗೌರವಿಸಲಾಯಿತು.

ಜಿಲ್ಲೆಯ ಅಭಿವೃದ್ಧಿ ಉಪನಿರ್ದೇಶಕ ಅಬ್ದುಲ್ ವಾಜೀದ್ ಖಾಜಿ, ಡಿಡಿಪಿಐ ಮೋಹನಕುಮಾರ ಹಂಚಾಟೆ ಮಾತನಾಡಿದರು.

ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರಿಕಟ್ಟಿ, ಅಶೋಕಕುಮಾರ ಸಿಂದಗಿ, ಉಮೇಶ ಬಮ್ಮಕ್ಕನವರ, ಎ.ಎ. ಖಾಜಿ, ಜಿ.ಎನ್. ಮಠಪತಿ, ಗಿರೀಶ ಪದಕಿ, ಉಮಾದೇವಿ ಬಸಾಪೂರ ಅವರು ತಮ್ಮ ತಾಲೂಕುಗಳ ವಿದ್ಯಾಗಮ ಪ್ರಗತಿ ವಿವರಿಸಿದರು.

ಡಯಟ್ ಹಿರಿಯ ಉಪನ್ಯಾಸಕರುಗಳಾದ ಉಮಾ ಬರಗೇರ, ವೈ.ಬಿ. ಬಾದವಾಡಗಿ, ಪಾರ್ವತಿ ವಸ್ತ್ರದ, ಶಿವಾನಂದ ಮಲ್ಲಾಡದ, ಜೆ.ಜಿ. ಸೈಯ್ಯದ, ಡಯಟ್ ಉಪನ್ಯಾಸಕಿ ವಿಜಯಲಕ್ಷ್ಮಿ ಹಂಚಿನಾಳ ಜಿಲ್ಲೆಯ ಬಿ.ಆರ್.ಸಿ. ಸಮನ್ವಯಾಧಿಕಾರಿಗಳು, ವಿಷಯ ಪರಿವೀಕ್ಷಕರು, ಡಯಟ್ ಉಪನ್ಯಾಸಕರು, ಬಿ.ಆರ್.ಪಿ., ಸಿ.ಆರ್.ಪಿ. ಇದ್ದರು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *