ರಾಜ್ಯ

ಧಾರವಾಡದ ಕೆ ಇ ಎಸ್ ಅಧಿಕಾರಿ ಹಾಸಿಗೆ ಹಿಡಿದು 6 ವರ್ಷ ಕಳೆದರೂ ನೆರವಿಗೆ ಬಾರದ ಸರಕಾರ

ಮಹದೇವ ಮಾಳಗಿ ಕುಟುಂಬದ ದಯನೀಯ ಸ್ಥಿತಿ

ನಿರ್ಲಕ್ಷಿಸಿದ ಶಿಕ್ಷಣ ಇಲಾಖೆ, ಅಧಿಕಾರಿಗಳ ವಿರುದ್ದ ಹಿಡಿಶಾಪ

ಧಾರವಾಡ prajakiran.com : ಧಾರವಾಡ ಜಿಲ್ಲೆಯ ಈ ಹಿಂದಿನ ಕಲಘಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸದ್ಯ ಬೆಳಗಾವಿಯ ಡಯಟ್ ಹಿರಿಯ ಉಪನ್ಯಾಸಕ ಹುದ್ದೆಯಲ್ಲಿರುವ  ಗೆಜೆಟೆಡ್ ಅಧಿಕಾರಿ ಹಾಸಿಗೆ ಹಿಡಿದು ಆರು ವರ್ಷಗಳೇ ಕಳೆದರೂ ಅವರ ನೆರವಿಗೆ ಬರದೇ ಆಳುವ ಸರಕಾರಗಳು ನಿರ್ಲಕ್ಷ್ಯ ತೋರಿಸಿರುವುದು ಕುಟುಂಬದವರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ.

ಆರು ವರ್ಷದಿಂದ ಕೆ ಇ ಎಸ್ ಅಧಿಕಾರಿ ಮಹಾದೇವ ಮಾಳಗಿಯ ದಯನೀಯ ಸ್ಥಿತಿಗೆ ಮರುಕ ಪಡದವರೇ ಇಲ್ಲ.

ಇಷ್ಟೆಲ್ಲಾ ಆದರೂ ಸ್ಪಂದಿಸಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಸ್ಪಂದಿಸದಿರುವುದು ಹಾಗೂ ನಿರ್ಲಕ್ಷಿಸಿದ ಸರಕಾರದ ಧೋರಣೆಯಿಂದ  ಅವರ ಇಡೀ ಕುಟುಂಬ ಅಸಹಾಯಕತೆಯಿಂದ ಪರದಾಡುತ್ತಿದೆ.

ಮಹಾದೇವ ಮಾಳಗಿ ಅವರ ಕುಟುಂಬವು ಸದ್ಯ ರಾಜ್ಯ ಸರಕಾರದ ನೆರವಿನ ನಿರೀಕ್ಷೆಯಲ್ಲಿ ದಿನಗಳನ್ನು ದೂಡುತ್ತಿದೆ.ಮಹಾದೇವ ಮಾಳಗಿ ೧೯೯೯ ತಂಡದ ಕೆಇಎಸ್ ಅಧಿಕಾರಿಯಾಗಿದ್ದಾರೆ.

ಚಿಕ್ಕೋಡಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವೃತ್ತಿ ಪ್ರಾರಂಭಿಸಿದ ಅವರು, ನಂತರ ಕೊಪ್ಪಳ, ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕೆಲಸ ಮಾಡಿದ್ದರು.

ಕಲಘಟಗಿಯಲ್ಲಿ ಉತ್ತಮ ಕ್ಷೇತ್ರಶಿಕ್ಷಣಾಧಿಕಾರಿಯಾಗಿ ಪ್ರಶಸ್ತಿ ಪಡೆದು ಕಲಘಟಗಿಯಿಂದ ಮತ್ತೆ ಬೆಳಗಾವಿ ಡಯಟ್‌ನ ಹಿರಿಯ ಉಪನ್ಯಾಸಕರಾಗಿ ನೇಮಕಗೊಂಡಿದ್ದರು.

ಅವರು ಕರ್ತವ್ಯದಲ್ಲಿರುವಾಗಲೇ ಬ್ರೇನ್ ಸ್ಟ್ರೋಕ್ ಆಗಿ ಪ್ರಜ್ಞೆ ಕಳೆದುಕೊಂಡಿದ್ದರು. ಸುಮಾರು ಐದಾರು ತಿಂಗಳು ಕೋಮಾದಲ್ಲೇ ಇದ್ದ ಮಾಳಗಿ ಅವರಿಗೆ ಪ್ರಪಂಚದ ಜ್ಞಾನವೇ ಇರಲಿಲ್ಲ.

ಈಗಲೂ ಸಹ ಪ್ರಪಂಚದ ಅರಿವೇ ಇಲ್ಲದಂತೆ ಅವರು ಬದುಕು ಸಾಗಿಸುತ್ತಿದ್ದಾರೆ. ಆದರೆ, ತನ್ನ ಅಧಿಕಾರಿಯ ನೆರವಿಗೆ ಬರಬೇಕಿದ್ದ ಸರ್ಕಾರ ಇದುವರೆಗೂ ಅವರಿಗೆ ನಿವೃತ್ತಿ ನೀಡಲು ಮನಸ್ಸು ಮಾಡಿಲ್ಲ.

ಅಲ್ಲದೇ, ಆರು ವರ್ಷಗಳಿಂದ ಹಾಸಿಗೆ ಹಿಡಿದರೂ ವೈದ್ಯಕೀಯ ವೆಚ್ಚ ಭರಿಸಿಲ್ಲ ಇಲ್ಲವೇ ರಜೆ ನೀಡಿ ಅರ್ಧ ಸಂಬಳವನ್ನು ಸಹ ನೀಡದೇ ಮೌನವಹಿಸಿರುವುದು ಕುಟುಂಬವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಒಂದು ಸ್ವಂತ ಮನೆಯನ್ನೂ ಕೂಡ ಹೊಂದಿರದ ಮಹಾದೇವ ಮಾಳಗಿ ಅವರ ಪತ್ನಿ ಪ್ರಭಾವತಿ ತನ್ನ ಎರಡು ಹೆಣ್ಣು ಮಕ್ಕಳೊಂದಿಗೆ ತವರು ಮನೆಯಲ್ಲಿಯೇ ವಾಸಿಸುತ್ತಿದ್ದಾರೆ.

ಒಂದು ಕಡೆ ಹಣಕಾಸಿನ ತೊಂದರೆ, ಮತ್ತೊಂದು ಕಡೆ ಪತಿಯ ವೆಚ್ಚದ ಚಿಕಿತ್ಸೆಯೊಂದಿಗೆ ಆರೈಕೆ ಮಾಡುವ ಸವಾಲು ಎದುರಾಗಿದೆ.  

ಸರಕಾರದ ಬಳಿ ಅಳಲು :

ತಮ್ಮ ನೆರವಿಗೆ ಬರುವಂತೆ ಶಿಕ್ಷಣ ಸಚಿವ ಸುರೇಶಕುಮಾರ್ ಹಾಗೂ  ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿರುವೆ. ಆದರೆ ಸರ್ಕಾರದಿಂದ ಇದುವರೆಗೂ ಯಾವುದೇ ಸವಲತ್ತು ಸಿಕ್ಕಿಲ್ಲ.

ಸ್ವಯಂ ನಿವೃತ್ತಿ ಕೂಡ ಕೊಟ್ಟಿಲ್ಲ. ಬರಬೇಕಾದ ವೇತನ ಹಾಗೂ ಪಿಂಚಣಿ ಬಾರದ ಕಾರಣ ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದೆವೆ ಎಂದು ಪ್ರಜಾಕಿರಣ.ಕಾಮ್ ಎದುರು ಅಳಲು ತೊಡಿಕೊಂಡರು.

ಜೀವನ ಸಾಗಿಸುವುದಕ್ಕಾಗಿ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇರೋ ಬರೋ ವಡವೆ, ವಾಹನಗಳು ಎಲ್ಲವನ್ನೂ ಮಾರಿದ್ದೆವೆ. ತಮ್ಮ ಪತಿಯನ್ನು ನಿವೃತ್ತಿಗೊಳಿಸಿ ತಮಗೆ ಅನುಕಂಪದ ಆಧಾರದ ಮೇಲೆ ನೌಕರಿ ಕೊಡಿ ಎಂದು ಒತ್ತಾಯಿಸುತ್ತಿರುವೆ.

ಪತಿ ಅನಾರೋಗ್ಯವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಅನುಕಂಪದ ಆಧಾರದ ಮೇಲೆ ನೌಕರಿ ಕೊಡಿಸಿ ಎಂದು ಶಿಕ್ಷಣ ಸಚಿವ ಸುರೇಶಕುಮಾರ್ ಅವರಿಗೆ ಮನವಿ ಮಾಡಿದ್ದೇನೆ. ಅವರು ಸ್ಪಂದಿಸುವ ವಿಶ್ವಾಸವಿದೆ ಎಂದು ಮಹಾದೇವ ಮಾಳಗಿಯವರ ಪತ್ನಿ ಪ್ರಭಾವತಿ ವಿವರಿಸಿದ್ದಾರೆ.

ಶೀಘ್ರವೇ ಸಚಿವರು ಸ್ಪಂದಿಸಲಿ :

ಮಹಾದೇವ ಮಾಳಗಿ ಅವರ ಕುಟುಂಬವನ್ನು ಸರಕಾರ ಸತಾಯಿಸುತ್ತ ಬಂದಿದ್ದು ಸರಿಯಲ್ಲ. ವೈದ್ಯಕೀಯ ಉಪಚಾರಕ್ಕಾಗಿ ತಕ್ಷಣವೇ ೧೦ ಲಕ್ಷ ರೂಪಾಯಿ ಬಿಡುಗಡೆ ಮಾಡಬೇಕು.

ಅಲ್ಲದೆ, ಕೂಡಲೇ ಅವರನ್ನು ಕಡ್ಡಾಯ ನಿವೃತ್ತಿಗೊಳಿಸಿ, ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕೊಡಬೇಕು.

ಸಚಿವ ಸುರೇಶಕುಮಾರ ಅವರು, ಈ ಪ್ರಕರಣವನ್ನು ವಿಶೇಷ ಎಂದು ಭಾವಿಸಿ ನರೆವಿಗೆ ಧಾವಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಆಗ್ರಹಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *