ರಾಜ್ಯ

ಧಾರವಾಡದ ಹಿರಿಯ ಪತ್ರಕರ್ತ ಮೆಹಬೂಬ್ ಮುನವಳ್ಳಿ ಬಂಧನ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಧಾರವಾಡ ಪ್ರಜಾಕಿರಣ.ಕಾಮ್ : ಜಿಲ್ಲೆಯ ಹಿರಿಯ ಪತ್ರಕರ್ತರಾಗಿರುವ ಹುಬ್ಬಳ್ಳಿಯ ಬಿ ಟಿವಿ ವರದಿಗಾರ ಮೆಹಬೂಬ್ ಮುನವಳ್ಳಿ ಅವರನ್ನು ದುರುದ್ದೇಶಪೂರ್ವಕವಾಗಿ ದಾವಣಗೆರೆ ಜಿಲ್ಲೆಯ ನ್ಯಾಮತಿ ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಿ ಧಾರವಾಡ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾಧ್ಯಕ್ಷ ಬಿ.ಎಂ. ಕೇದಾರನಾಥ, ಪ್ರಧಾನಕಾರ್ಯದರ್ಶಿ ನಾಗರಾಜ ಕಿರಣಗಿ ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಪ್ರತಿಭಟನೆ ಬೆಂಬಲಿಸಿ ಪಾಲ್ಗೊಂಡು ಮಾತನಾಡಿದ ಪೊಲೀಸ್ ಹಕ್ಕುಗಳ ಹೋರಾಟಗಾರ ಬಸವರಾಜ ಕೊರವರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ನೋಟಿಸ್ ನೀಡದೆ
ರಾತ್ರಿ ವೇಳೆ ಮನೆಗೆ ತೆರಳಿ ವಿಚಾರಣೆ ನೆಪದಲ್ಲಿ ಕರೆದುಕೊಂಡು ಹೋಗಿದ್ದಲ್ಲದೆ, ಒಂದು ದಿನ ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದಾರೆ.

ಒಬ್ಬ ಪತ್ರಕರ್ತ ಸುದ್ದಿಗಾಗಿ ಹಲವರ ಜೊತೆಗೆ ಸಂಬಂಧ ಹೊಂದಿರುವ ಕಾರಣ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಮಾಹಿತಿ ನೀಡಿದವರನ್ನೇ ಬಂಧಿಸಿರುವುದು ಪೂರ್ವಾಗ್ರಹ ಪೀಡಿತ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ನಿನ್ನೆ ಶುಕ್ರವಾರ ಸಂಜೆ ಅವರನ್ನು ಕೊಲೆ ಪ್ರಕರಣದ ಆರೋಪಿಗಳ ಜೊತೆಗೆ ದೂರವಾಣಿ ಸಂಪರ್ಕ ಹೊಂದಿದ್ದಾರೆ ಎಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ‌.

ಇದು ಸರಿಯಾದ ಬೆಳವಣಿಗೆ ಅಲ್ಲ. ಪತ್ರಕರ್ತರನ್ನು ಬಂಧಿಸುವ ಮುನ್ನ ಸರಕಾರ ಹಾಗೂ ಪೊಲೀಸ್ ಹತ್ತು ಬಾರಿ ವಿಚಾರಿಸಬೇಕು. ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಬಂಧಿಸಲು ಪೂರ್ವ ಅನುಮತಿಯ ಅಗತ್ಯವಿದೆ. ಅದೇ ರೀತಿ ಪತ್ರಕರ್ತರ ಬಂಧನಕ್ಕೆ ಕೂಡ ಅನುಮತಿ ಪಡೆಯುವ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಹಿರಿಯ ಪತ್ರಕರ್ತ ನಾಗರಾಜ ಕಿರಣಗಿ ಮಾತನಾಡಿ, ಧಾರವಾಡ ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿದ್ದ ಅನೇಕ ರೌಡಿಶೀಟರಗಳು, ವಿವಿಧ ಪ್ರಕರಣದ ಆರೋಪಿಗಳು ಒಂದಲ್ಲ ಒಂದು ಪತ್ರಕರ್ತರ ಜೊತೆಗೆ ದೂರವಾಣಿ ಸಂಪರ್ಕ ಹೊಂದಿರುವುದು ಸಹಜ.

ಸುದ್ದಿಗಾಗಿ ಅವರು ಮಾತನಾಡಿದ ಕಾರಣಕ್ಕೆ ಅವರನ್ನು ಬಂಧಿಸಿರುವುದು ಸರಿಯಲ್ಲ. ಹೀಗಾಗಿ
ದಾವಣಗೆರೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಹಾಗೂ ಹಿರಿಯ ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ನಡೆಸಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಬೇಕು ಹಾಗೂ ತಕ್ಷಣವೇ ಮೆಹಬೂಬ್ ಮುನವಳ್ಳಿ ಬಿಡುಗಡೆಗೆ ಅಗತ್ಯವಾದ ಎಲ್ಲಾ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಆಗ್ರಹಿಸಿದರು.

ಪತ್ರಕರ್ತ ಜಾವೀಧ ಆಧೋನಿ ಮಾತನಾಡಿ, ಸರಕಾರಕ್ಕೆ ಕಣ್ಣಿಲ್ಲ. ಆದರೆ ಪೊಲೀಸರಿಗೆ ಕಣ್ಣಿಲ್ಲವೇ ಎಂದು ಕಿಡಿಕಾರಿದರು .

ಅನೇಕ ರೌಡಿಶೀಟರ್ ಗಳು ಜಿಲ್ಲೆಯಿಂದ ಗಡಿಪಾರು ಆದರೂ ಊರಲ್ಲೇ ಅಡ್ಡಾಡುತ್ತಿದ್ದಾರೆ. ಪತ್ರಕರ್ತರ ಬಂಧನ ಮಾಡುವ ಮೂಲಕ ಪೊಲೀಸರು ಅವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು ‌

ಯುವ ಪತ್ರಕರ್ತ ಮಂಜುನಾಥ ಕವಳಿ ಮಾತನಾಡಿ, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾಧ್ಯಕ್ಷ ಬಿ.ಎಂ ಕೇದಾರನಾಥ, ಪತ್ರಕರ್ತರಾದ ಪರಮೇಶ್ವರ ಅಂಗಡಿ, ವಾಸೀಮ್ ಬಾವಿಮನಿ, ಶ್ರೀಧರ ಮುಂಡರಗಿ, ವಿಠ್ಠಲ ಕರಡಿಗುಡ್ಡ, ಪ್ರವೀಣ ಓಂಕಾರಿ, ವಿಶ್ವನಾಥ ಕೋಟಿ, ರಾಮಚಂದ್ರ ಕುಲಕರ್ಣಿ, ಪ್ರಶಾಂತ ದಿನ್ನಿ, ಗುರು ಕಟ್ಟಿಮನಿ, ಕೃಷ್ಣಮೂರ್ತಿ ಕುಲಕರ್ಣಿ,
ಅರ್ಬಾಜ್ ಖಾನ್ ಪಠಾಣ, ಹನುಮಂತ, ಈ ಪ್ರತಿಭಟನೆಗೆ ಬೆಂಬಲಿಸಿ ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಪಿಎಸ್ ಐ ಅಕ್ರಮ ನೇಮಕಾತಿ ಹೋರಾಟಗಾರ ರವಿಶಂಕರ್ ಮಾಲಿ ಪಾಟೀಲ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ ಎಸ್‌.ಎಂ., ವಕೀಲ ವಿಜಯಕುಮಾರ್ , ಆನಂದ ನಾಯ್ಕ,ಎಂ.ಎಂ. ಮಂಗಳಗಟ್ಟಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *