ರಾಜ್ಯ

ಧಾರವಾಡ ಜಿಲ್ಲೆಯ ಸಾವಿರಾರು ಎಕರೆ ಬೆಳೆ ತುಪರಿಹಳ್ಳದ ಪಾಲು

ಧಾರವಾಡ prajakiran.com : ಪ್ರವಾಹದ ಹೊಡೆತಕ್ಕೆ ಸಿಲುಕಿ ನಲಗುತ್ತಿರುವ ಧಾರವಾಡ ಜಿಲ್ಲೆಯ ರೈತರು ಬೆಳೆದಿದ್ದ ಸಾವಿರಾರು ಎಕರೆ ಬೆಳೆ ತುಪರಿಹಳ್ಳದ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದೆ.

ಆದರೆ, ಅವರ ನೆರವಿಗೆ ಧಾವಿಸಬೇಕಾದ ಆಳುವ ಸರ್ಕಾರಗಳು ಮಾತ್ರ ಗಾಢವಾದ ನಿದ್ರೆಗೆ ಜಾರಿವೆ.

ಎದೆಯುದ್ದ ಬೆಳೆದು ನಿಂತ ಪೈರು ನೀರು ಪಾಲಾದ ರೈತನ ಕಣ್ಣಲ್ಲಿ ನೀರು ಬತ್ತಿ ಹೋಗಿದ್ದು, ಯಾರಿಗೂ ತನ್ನ ಸಂಕಟಅರ್ಥವಾಗುತ್ತಿಲ್ಲ ಎಂದು  ರಕ್ತ ಮಾತ್ರ ಕೊತ ಕೊತ ಕುದಿಯುತ್ತಿದೆ.  

ಹೌದು ಧಾರವಾಡ ಜಿಲ್ಲೆಯ ಧಾರವಾಡ, ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕಿನ ಬಹುತೇಕ ನದಿ ಪಾತ್ರದ ಹೊಲಗಳ ರೈತರ ಸ್ಥಿತಿಯಾಗಿದೆ.

ಬೆಳೆದ ಪೈರು ಇನ್ನೇನೂ ಮನೆಗೆ ತರಬೇಕೆನ್ನುವುದರಲ್ಲಿಯೇ ಮಹಾಮಳೆಗೆ ಬೆಳೆಯಲ್ಲಾ ಕೊಚ್ಚಿ ಹೋಗಿದೆ.  

ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನವಲಗುಂದ ತಾಲೂಕಿನ ಶಿರಕೋಳ ಹಾಗೂ ಹನಸಿ ಮಾರ್ಗದ ಸಣ್ಣ ಸೇತುವೆ ಮುಳುಗಡೆಯಾಗಿ, ರಸ್ತೆ ಕೂಡ ಕೊಚ್ಚಿಕೊಂಡು ಹೋಗಿದೆ.

ಆ ನೀರು ರೈತರಾದ ಚನ್ನಪ್ಪ ಹೊಸಕೇರಿ , ಶಿದ್ದಪ್ಪ ರೋಣದ , ಶಿವಪ್ಪ ಮಾದಣ್ಣನವರ , ಕಲ್ಲಪ್ಪ ಗಾಣಗೇರ , ಕಲ್ಲನಗೌಡ ನರೇಂದ್ರ, ಕಲ್ಲನಗೌಡ ಪಾಟೀಲ್ , ಶಿವನಗೌಡ ಪಾಟೀಲ್, ನಿಜಗುಣಿ ದಾಸಗೊಂಡ ಇನ್ನೂ ಹಲವಾರು ರೈತರ ಹೊಲಗಳಿಗೆ ನುಗ್ಗಿದೆ.

ಹೀಗಾಗಿ ಸಾವಿರಾರು ಎಕರೆ ಬೆಳೆ ನೀರು ಪಾಲಾಗಿದೆ ಎಂದರು. ಪ್ರತಿ ಬಾರಿಯೂ ಹಿರಿಯ ಅಧಿಕಾರಿಗಳು ಬಂದು ನೋಡಿ ಹೋಗುವುದು ಬಿಟ್ಟರೆ ಕೆಲಸ ಮಾತ್ರ ಆಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ನಮಗೆ ಸರ್ಕಾರದ ಪರಿಹಾರ ಬೇಡ. ಅದರ ಬದಲಿಗೆ ನಮ್ಮ ಊರಿನ ಹಳ್ಳಕ್ಕೆ ಶಾಶ್ವತ ಪರಿಹಾರ ಮಾಡಿಕೊಡಬೇಕು. ಸರ್ಕಾರ ರೈತರ ಮನವಿಗೆ ಸ್ಪಂದಿಸಲಿ ಎಂದು ಶಿರಕೋಳ ಗ್ರಾಮದ ಬಸಪ್ಪ ತೋರಗಲ್ ಆಗ್ರಹಿಸಿದರು.

ಕಳೆದ ವರ್ಷ ಉಂಟಾದ ನೆರೆ ಪ್ರವಾಹದಿಂದಾಗಿ ರೈತ ಸರಿಯಾದ ಬೆಳೆಯನ್ನು ಪಡೆಯದೇ ಕಂಗಾಲಾಗಿದ್ದ.

ಈ ವರ್ಷ ಬೆಳೆ ಚೆನ್ನಾಗಿ ಬಂತು ಎನ್ನುವಷ್ಟರಲ್ಲಿ ಮತ್ತೆ ಮಳೆರಾಯ ತನ್ನ ರೌದ್ರನರ್ತನ ಮುಂದುವರೆಸಿದ್ದರಿಂದ ಮತ್ತೆ ಹಳ್ಳದ ನೀರು ರೈತರ ಜಮೀನುಗಳಿಗೆ ನುಗ್ಗಿದೆ ಎಂದು ಶಂಕರಗೌಡ ಪಾಟೀಲ ಹೇಳಿದರು.

ಸರ್ಕಾರ ನಮಗೆ ಪರಿಹಾರ ಕೊಡುವುದು ಬೇಡ. ಬದಲಿಗೆ ಹೂಳೆತ್ತಿಸಿ ಎಂಬುದು ಅಲ್ಲಿನ ರೈತರ ಆಗ್ರಹವಾಗಿದೆ.

ಕಳೆದ ಹದಿನೈದು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ 12 ಸಾವಿರ ಹೆಕ್ಟರ್ ಪ್ರದೇಶದ ಬೆಳೆಹಾನಿಯಾಗಿತ್ತು ಎಂದು ಧಾರವಾಡ ಜಿಲ್ಲಾಡಳಿತ ಹೇಳಿತ್ತು.

ಇದೀಗ ಮತ್ತಷ್ಟು ಹಾನಿಯಾಗಿರುವ ಸಾಧ್ಯತೆಗಳಿದ್ದು, ಈ ಬಗ್ಗೆ ಇನ್ನಷ್ಟೇ ಸ್ಪಷ್ಟಚಿತ್ರಣ ದೊರಕಬೇಕಿದೆ. ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *