ರಾಜ್ಯ

ಧಾರವಾಡ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಮತ ಎಣಿಕೆ ನೆನೆಗುದಿಗೆ …!

ಧಾರವಾಡ prajakiran.com : ಧಾರವಾಡ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಶನಿವಾರ ನಡೆಯಬೇಕಿತ್ತು. ಆದರೆ ಕಾನೂನು ತೊಡಕಿನ ನೆಪವೊಡ್ಡಿ ಅದನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ತೀವ್ರ ಜಿದ್ದಾಜಿದ್ದಿ ಹಾಗೂ ಪ್ರತಿಷ್ಠೆಗೆ ಕಾರಣವಾಗಿದೆ.

ಬಿಜೆಪಿ ನಾಯಕರು ತಮ್ಮ ಸರಕಾರದ ಅವಧಿಯಲ್ಲಿ ಧಾರವಾಡ ಎಪಿಎಂಸಿಯಲ್ಲಿ ತಮಗೆ ಹಿನ್ನಡೆ ಆಗುವ ಸುಳಿವು ಪಡೆದು, ದೀಪಕ ಚಿಂಚೋರೆ ಅವರನ್ನು ಮತದಾನ ಪ್ರಕ್ರಿಯೆಯಿಂದ ಹೊರಗಿಟ್ಟಿದ್ದರು.

ಅವರು  ಶ್ರೀ ಮೃತ್ಯುಂಜಯ ಹತ್ತಿ ಸಂಸ್ಕರಣ ಸಂಘ ನಿಯಮಿತ ಧಾರವಾಡದ ಪ್ರತಿನಿಧಿಯಾಗಿ ಧಾರವಾಡ ಎಪಿಎಂಸಿ ಸದಸ್ಯರಾಗಿದ್ದರು. ಆದರೆ ಸಂಘದ ನವೀಕರಣಗೊಳ್ಳದಿರುವುದನ್ನು ಮುಂದಿಟ್ಟುಕೊಂಡು ಅಧಿಕಾರಿಗಳ  ಮೇಲೆ ಒತ್ತಡ ಹೇರಿ ಅವರ ಮತದಾನದ ಹಕ್ಕು ಮೊಟಕು ಗೊಳಿಸಿದ್ದರು.



ಸಂಘದ ಮರು ನೋಂದಣಿ ಮಾಡಿಸಿ ಕಾನೂನುಬದ್ದವಾಗಿ ಮತದಾನದ ಹಕ್ಕು ನೀಡುವಂತೆ ಕಾಂಗ್ರೆಸ್ ಮುಖಂಡ ಹಾಗೂ ಧಾರವಾಡ ಎಪಿಎಂಸಿ ಸದಸ್ಯ  ದೀಪಕ ಚಿಂಚೋರೆ ಅವರು ಈ ಕುರಿತು ಹೈಕೋರ್ಟ್ ಮೆಟ್ಟಲು ಹತ್ತಿದ್ದರು.

ಅಲ್ಲದೆ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕು ಮೊಟಕುಗೊಳಿಸಿರುವ ಸರಕಾರದ ಕ್ರಮ ಪ್ರಶ್ನಿಸಿದ್ದರು.

ಈ ಸಂಬಂಧ ಪ್ರಕರಣದಲ್ಲಿ ರಾಜ್ಯ ಸರಕಾರ ಮಾರುಕಟ್ಟೆ ಕಾರ್ಯದರ್ಶಿ, ಕೃಷಿ ಮಾರಾಟ ಇಲಾಖೆ ನಿರ್ದೇಶಕರು, ಧಾರವಾಡ ಜಿಲ್ಲಾಧಿಕಾರಿ, ಧಾರವಾಡ ತಹಸೀಲ್ದಾರ್, ಧಾರವಾಡ ಎಪಿಎಂಸಿ ಕಾರ್ಯದರ್ಶಿಯನ್ನು ಪ್ರತಿವಾದಿಯಾಗಿಸಿದ್ದರು.



ದೀಪಕ ಚಿಂಚೋರೆಯವರಅರ್ಜಿಯನ್ನು ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಅವರಿಗೆ ಚುನಾವಣೆಯಲ್ಲಿ ಭಾಗವಹಿಸಲು ಹಾಗೂ ಮತದಾನ ಮಾಡಲು ಅವಕಾಶ ಕಲ್ಪಿಸಿತ್ತು. ಅದರಂತೆ ಅವರು  ಜೂನ್ 4ರಂದು ತಮ್ಮ ಹಕ್ಕು ಚಲಾಯಿಸಿದ್ದರು.

ಅದರಂತೆ ನಿಯಮಾವಳಿ ಪ್ರಕಾರ ಶನಿವಾರ ಧಾರವಾಡ ಎಪಿಎಂಸಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಬೇಕಿತ್ತು.

ಆದರೆ, ಧಾರವಾಡ ತಹಸೀಲ್ದಾರ್ ಸಂತೋಷ ಬಿರಾದಾರ ಅವರು ಮತ ಎಣಿಕೆ ಪ್ರಕ್ರಿಯೆ ಕೈಗೊಳ್ಳದೆ ಈ ಬಗ್ಗೆ ಹೈಕೋರ್ಟ್ ಮೂಲಕ  ಕಾನೂನು ಸಲಹೆ ಪಡೆಯಲು ನಿರ್ಧರಿಸಿದ್ದಾರೆ.



ಸೋಮವಾರ ಹೈಕೋರ್ಟ್  ಮೂಲಕ ಈ ಕುರಿತು ಸಲಹೆ ಪಡೆದು ಆನಂತರಅವರ ನಿರ್ದೇಶನದಂತೆ ಮುಂದಿನ ಕ್ರಮ ಜರುಗಿಸುವುದಾಗಿ ಪ್ರಜಾಕಿರಣ.ಕಾಮ್ ಗೆ ತಿಳಿಸಿದರು.

ಇದರಿಂದಾಗಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಇದೀಗ ನೆನೆಗುದಿಗೆ ಬಿದ್ದಂತಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಪ್ರತಿಷ್ಠೆಯಿಂದಾಗಿ ಅಧಿಕಾರಿಗಳು ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಬಿಜೆಪಿ ನಾಯಕರು ಮತ ಎಣಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಗೆಲುವು ನಮ್ಮದೇ, ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.



ಅಲ್ಲದೆ, ಶತಾಯ ಗತಾಯ ಬಿಜೆಪಿಗೆ ತಕ್ಕ ಪಾಠ ಕಲಿಸಲೇ ಬೇಕು ಎಂದು ಪಣತೊಟ್ಟ ಕಾಂಗ್ರೆಸ್  ಮುಖಂಡ ದೀಪಕ ಚಿಂಚೋರೆ ಅವರು ಇಬ್ಬರು ಸದಸ್ಯರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.

ಇದೇ ವೇಳೆ ಬಿಜೆಪಿ ಶಾಸಕರು ತಮ್ಮ ಸದಸ್ಯರನ್ನು ಆಪರೇಶನ್ ಭೀತಿಯ ಹಿನ್ನಲೆಯಲ್ಲಿ ಮುರುಡೇಶ್ವರದ ರೆಸಾರ್ಟ್ ವೊಂದರಲ್ಲಿ ಉಳಿಸಿದ್ದರು.

ಅವರೆಲ್ಲರೂ ಶನಿವಾರ ಬಂದು ತಮ್ಮ ಮತ ಚಲಾವಣೆ ಮಾಡಿದ್ದರು. ಆದರೂ ಇದರಲ್ಲಿ ಇಬ್ಬರು ಕಾಂಗ್ರೆಸ್ ನತ್ತ ವಾಲಿದ್ದಾರೆ ಎಂದು ತಿಳಿದುಬಂದಿದೆ.  

16 ಸದಸ್ಯ ಬಲದ ಧಾರವಾಡ ಎಪಿಎಂಸಿಯಲ್ಲಿ ಕಾಂಗ್ರೆಸ್ 7, ಬಿಜೆಪಿ 6, 3 ನಾಮನಿರ್ದೇಶಿತ ಸದಸ್ಯರಿದ್ದಾರೆ.

ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬೀಳುತ್ತಿದ್ದಂತೆ ಮತದಾನದ ಡಬ್ಬಿಯನ್ನು ಸೀಲ್ ಮಾಡಿ ಧಾರವಾಡದ ಖಜಾನೆಯಲ್ಲಿ ಸೂಕ್ತ ಬಿಗಿ ಬಂದೋಬಸ್ತ್ ನಲ್ಲಿ ಇಡಲಾಗಿದೆ.   



ಧಾರವಾಡ ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಬಸಪ್ಪ ಹೊಸೂರ, ಉಪಾಧ್ಯಕ್ಷ ಸ್ಥಾನಕ್ಕೆ ಕೃಷ್ಣಾ ಕೊಳ್ಳಾನಟ್ಟಿ ಮತ್ತು ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಮಹಾವೀರ ಜೈನ, ಉಪಾಧ್ಯಕ್ಷ  ಸ್ಥಾನಕ್ಕೆ ಬಸ್ಸವ್ವ ಶಿರಕೊಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 

ಇಬ್ಬರು ಸದಸ್ಯರು ಕಾಂಗ್ರೆಸ್ ನತ್ತ ವಾಲಿದ್ದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ ಎಂದು ಹೇಳಲಾಗುತ್ತಿದೆ.

ಇದರಿಂದಾಗಿ ಧಾರವಾಡ ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರ ಮತ ಎಣಿಕೆ ಪ್ರಕ್ರಿಯೆ ತೀವ್ರ ಕುತೂಹಲ ಕೆರಳಿಸಿದ್ದು, ಇದರಲ್ಲಿ ಕಾಂಗ್ರೆಸ್ ವಿಜಯ ಸಾಧಿಸುತ್ತಾ ಅಥವಾ ಬಿಜೆಪಿ ಗೆಲುವಿನ ನಗೆ ಬೀರುತ್ತಾ ಎಂಬುದು ಕಾದುನೋಡಬೇಕಿದೆ.     



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *