ರಾಜ್ಯ

ಬಿ.ಆರ್.ಸಿ., ಸಮನ್ವಯಾಧಿಕಾರಿಗಳಿಗೆ ಒತ್ತಡ ನಿರ್ವಹಣಾ ತರಬೇತಿ

ಧಾರವಾಡ prajakiran.com : ಶಾಲಾ ನಾಯಕತ್ವ ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ (ಸಿಸ್ಲೆಪ್-ಕರ್ನಾಟಕ) ಕ್ಷೇತ್ರ ಸಂಪನ್ಮೂಲ ಕೇಂದ್ರ(ಬಿ.ಆರ್.ಸಿ.)ಗಳ ಸಮನ್ವಯಾಧಿಕಾರಿಗಳಿಗೆ ‘ಗೂಗಲ್ ಮೀಟ್ ಆ್ಯಪ್’ ಬಳಕೆ ಮಾಡಿಕೊಂಡು ಅಂತರ್ಜಾಲ ಸಂವಹನದ ಮೂಲಕ ಒತ್ತಡ ನಿರ್ವಹಣಾ ವಿಷಯವಾಗಿ ವಿಶೇಷ ತರಬೇತಿ ಹಮ್ಮಿಕೊಂಡಿತ್ತು.

ಕೋವಿಡ್-೧೯ ಹಿನ್ನೆಲೆಯಲ್ಲಿ ಮುಖಾಮುಖಿ ತರಬೇತಿಗೆ ಅವಕಾಶವಿಲ್ಲದೇ ಇರುವದಿಂದ ದೂರ ಸಂಪರ್ಕದ ಅಂತರ್ಜಾಲ ಸಂವಹನದಲ್ಲಿಯೇ ತರಬೇತಿಯ  ವಿಷಯ ಮಂಡನೆ, ಚರ್ಚೆ, ಸಂವಾದ, ಪ್ರಶ್ನೋತ್ತರ ಪ್ರಕ್ರಿಯೆಗಳನ್ನು ನಿಗದಿತ ವೇಳಾಪಟ್ಟಿಗೆ ಅನುಸರಿಸಿ ನಿರ್ವಹಿಸಲಾಯಿತು.

ಜುಲೈ ೨೨ ರಂದು ಬೆಂಗಳೂರು ಮತ್ತು ಮೈಸೂರು ವಿಭಾಗದ ೮೦ ಜನರಿಗೆೆ, ಜುಲೈ ೨೩ ರಂದು ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗದ ೫೦ ಜನ ಸೇರಿ ಒಟ್ಟು ೧೩೦ ಜನ ಬಿ.ಆರ್.ಸಿ. ಸಮನ್ವಯಾಧಿಕಾರಿಗಳಿಗೆ ತರಬೇತಿ ನೀಡಲಾಯಿತು.

ತರಬೇತಿಯ ಆರಂಭದಲ್ಲಿ ಸಿಸ್ಲೆಪ್‌ನ ನಿರ್ದೇಶಕ ಬಿ. ಎಸ್. ರಘುವೀರ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಅಧಿಕಾರಿಗಳು ಕಚೇರಿಯಲ್ಲಿ ಉತ್ತಮ ವಾತಾವರಣ ನಿರ್ಮಿಸಿದಾಗ ಮಾತ್ರ ಒತ್ತಡ ನಿರ್ವಹಣೆ ಸಾಧ್ಯವಾಗುತ್ತದೆ.

ಮಾಡುವ ಕೆಲಸಗಳನ್ನು ಪ್ರೀತಿಯಿಂದ ಸ್ವೀಕರಿಸಿ ಅವುಗಳನ್ನು  ಬದ್ಧತೆಯಿಂದ ನಿರ್ವಹಿಸುವ ಮನೋಭಾವ ಬೆಳೆಸಿಕೊಂಡರೆ ಒತ್ತಡ ನಿರ್ವಹಣೆ ಸುಲಭವಾಗುತ್ತದೆ ಎಂದರು.

ಒತ್ತಡ ನಿರ್ವಹಣೆ ಕುರಿತು ವಿಷಯ ಮಂಡನೆ ಮಾಡಿ ಮಾತನಾಡಿದ ಬೆಳಗಾವಿ ಡಯಟ್ ಉಪನ್ಯಾಸಕಿ ಸುಜಾತಾ ಬಾಳೆಕುಂದ್ರಿ, ನಿರಂತರ ಜಾಗೃತಿ, ಸಮತೋಲನ ಮತ್ತು ನಿಯಂತ್ರಣದ ಎ.ಬಿ.ಸಿ. ಸಂಯೋಜನೆಯ ಮೂಲಕ ಒತ್ತಡ ನಿರ್ವಹಣೆ ಕಡಿಮೆ ಮಾಡಿಕೊಳ್ಳುವ ವಿಧಾನದ ಕ್ರಿಯಾಪ್ರೇರಕ ಅಂಶಗಳನ್ನು ಹಂಚಿಕೊಂಡರು.

  ಸಿಸ್ಲೆಪ್‌ನ ಹಿರಿಯ ಸಹಾಯಕ ನಿರ್ದೇಶಕ ರವಿಕುಮಾರ ಬಾರಾಟಕ್ಕೆ, ತರಬೇತಿಯ ನೋಡಲ್ ಆಗಿರುವ ಸಿಸ್ಲೆಪ್ ಸಹಾಯಕ ನಿರ್ದೇಶಕ ಮಹಾವೀರ ಹಂಚಿನಾಳ, ಸಿಸ್ಲೆಪ್ ಉಪನ್ಯಾಸಕಿಯರುಗಳಾದ ಸುಜಾತಾ ತಿಮ್ಮಾಪೂರ, ಸ್ವರೂಪಶೀಲಾ ಹಾಗೂ ಲಕ್ಷ್ಮಿ ಭಗವತಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಈಗಾಗಲೇ ಇದೇ ತರಬೇತಿಯನ್ನು ಸಿ.ಟಿ.ಇ. ಪ್ರಾಂಶುಪಾಲರಿಗೆ ಹಾಗೂ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕರಿಗೂ ನೀಡಲಾಗಿದೆ ಎಂದು ಸಿಸ್ಲೆಪ್ ನಿರ್ದೇಶಕರು ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *