ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಕರೋನಾ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಹಿಂದೆಯೇ ಕರೋನಾ ಸೇನಾನಿಗಳಿಗೂ ಸಂಕಷ್ಟ ಎದುರಾಗುತ್ತಿದೆ.
ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಹೆಜ್ಜೆ ಹೆಜ್ಜೆಗೂ ಕಾಡುತ್ತಿದೆ. ಅದರಲ್ಲೂ ಧಾರವಾಡ ಸಂಚಾರ ಪೊಲೀಸ್ ಠಾಣೆಯ ಇಬ್ಬರು ಹೆಡ್ ಕಾನ್ಸಟೇಬಲ್ ಗಳಿಗೆ ಕರೋನಾ ಹರಡಿದ್ದ ಬೆನ್ನಲ್ಲೇ ಶುಕ್ರವಾರ ಮತ್ತೊಬ್ಬ ಸಿಬ್ಬಂದಿಗೆ ಕರೋನಾ ವ್ಯಾಪಿಸಿದೆ.
ಈಗಾಗಲೇ ಇಬ್ಬರು ಹೆಡ್ ಕಾನ್ಸಟೇಬಲ್ ಗಳ ಪೈಕಿ ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, ಇನ್ನೊಬ್ಬರು ಮಹಿಳಾ ಹೆಡ್ ಕಾನ್ಸಟೇಬಲ್ ಚೇತರಿಸಿಕೊಳ್ಳುತ್ತಿದ್ದಾರೆ.
ಈ ನಡುವೆ ಧಾರವಾಡ ಸಂಚಾರ ಪೊಲೀಸ್ ಠಾಣೆಯ ಮತ್ತೋಬ್ಬ ಕಾನ್ಸಟೇಬಲ್ ಗೆ ಕರೋನಾ ವಕ್ಕರಿಸಿರುವುದು ದೃಢಪಟ್ಟಿದೆ. ಅವರನ್ನು ಈಗಾಗಲೇ ಧಾರವಾಡದ ಖಾಸಗಿ ನಿಯೋಜಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಇನ್ನುಳಿದ ಪೊಲೀಸ್ ಸಿಬ್ಬಂದಿಗೆ ಮತ್ತೇ ಕರೋನಾ ಕಾಟದ ಭಯ ಶುರುವಾಗಿದೆ.
ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಆರೋಗ್ಯ ಇಲಾಖೆ ಪತ್ತೆ ಮಾಡಿ, ಅವರ ಗಂಟಲು ದ್ರವ ತಪಾಸಣೆ ಹಾಗೂ ಹೋಂ ಕ್ವಾರಂಟಿನ್ ಮಾಡಲು ಅಗತ್ಯ ಸಿದ್ದತೆ ಮಾಡಿಕೊಳ್ಳುತ್ತಿದೆ.
ಇದರಿಂದಾಗಿ ಧಾರವಾಡ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಗೆ ಢವ ಢವ ಶುರುವಾಗಿದ್ದು, ಇನ್ನಾರಿಗೆ ತಗುಲಲಿದೆ ಎಂದು ಆತಂಕದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.