ರಾಜ್ಯ

ಧಾರವಾಡದಲ್ಲಿ ಕೊರೊನಾ ರ‍್ಯಾಪಿಡ್ ಆ್ಯಂಟಿಜನ್ ಪರೀಕ್ಷೆಗೆ ಪೊಲೀಸ್ ಕಣ್ಗಾವಲು

ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಅವಳಿ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಆರಂಭಿಸಿರುವ ರ‍್ಯಾಪಿಡ್ ಆ್ಯಂಟಿಜನ್ ಕೊರೊನಾ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಲು ೧೨ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

 ಅವರು ಗುರುವಾರ ಸಂಜೆ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಸುರಕ್ಷತಾ ಕ್ರಮಗಳ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆಯನ್ನು ಗುರಿಗಿಂತ ಹೆಚ್ಚು ಅಂದರೆ ಶೇ.೧೫೮ ರಷ್ಟು ಟೆಸ್ಟಿಂಗ್ ಮಾಡಲಾಗುತ್ತಿದೆ. ಇದರಿಂದಾಗಿ ಹೆಚ್ಚು ಜನರಲ್ಲಿ ಪಾಸಿಟಿವ್ ಕಂಡು ಬರುತ್ತಿದೆ.

ಸಾರ್ವಜನಿಕರು ಹೆದರುವ ಅಗತ್ಯವಿಲ್ಲ.  ನಾಳೆಯಿಂದ ಹುಬ್ಬಳ್ಳಿಯ ಎಂಟು ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಮತ್ತು ಧಾರವಾಡ ನಗರದ ಪ್ರಮುಖ ನಾಲ್ಕು ಮಾರುಕಟ್ಟೆ ಪ್ರದೇಶಗಳಲ್ಲಿ ರ‍್ಯಾಪಿಡ್ ಆ್ಯಂಟಿಜನ್ ಕೊರೊನಾ ಪರೀಕ್ಷೆಯನ್ನು ಮುಂದುವರೆಸಲಾಗುವುದು.

ಕೆಲವು ಪ್ರದೇಶಗಳಲ್ಲಿ ಅಂಗಡಿ, ವಾಣಿಜ್ಯ ಸಂಕೀರ್ಣ ಮತ್ತು ಬೀದಿಬದಿಯ ವ್ಯಾಪಾರಿಗಳು ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಅಸಹಕಾರ ನೀಡುತ್ತಿರುವುದು ಮತ್ತು ತಮ್ಮ ಅಂಗಡಿಗಳನ್ನು ಆ ಸಮಯದಲ್ಲಿ ಮುಚ್ಚುತ್ತಿರುವುದು ಕಂಡು ಬರುತ್ತಿದೆ.

ಆದ್ದರಿಂದ ಮಾರ್ಕೇಟ್ ಪ್ರದೇಶದ ಪ್ರತಿ ಅಂಗಡಿಯ ಮಾಲೀಕರು ಮತ್ತು ಸಿಬ್ಬಂದಿಗಳನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ.

 ಈ ವಿಶೇಷ ತಂಡದಲ್ಲಿ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆಯ ಪಿಎಸ್‌ಐ ಹಂತದ ಅಧಿಕಾರಿಗಳೊಂದಿಗೆ ಪೊಲೀಸ್ ಸಿಬ್ಬಂದಿ ಇರುತ್ತಾರೆ ಎಂದು ಅವರು ಹೇಳಿದರು.

ರ‍್ಯಾಪಿಡ್ ಆ್ಯಂಟಿಜನ್ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬರುವ ಅಂಗಡಿ, ವಾಣಿಜ್ಯ ಸಂಕೀರ್ಣಗಳನ್ನು ಸ್ಥಳದಲ್ಲಿಯೇ ಸೀಲ್‌ಡೌನ್ ಮಾಡಿ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮತ್ತು ಬೀದಿಬದಿಯ ವ್ಯಾಪಾರಿಗಳ ಪ್ರದೇಶವನ್ನು ನಿರ್ಬಂಧಿಸಲಾಗುತ್ತದೆ.

ಸೋಂಕು ಪಾಸಿಟಿವ್ ಬರುವ ವ್ಯಕ್ತಿಗಳಿಗೆ ನಿರ್ದಿಷ್ಟ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ತಕ್ಷಣ ಏರ್ಪಾಡು ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಸಾರ್ವಜನಿಕರ ಹಾಗೂ ತಮ್ಮ, ತಮ್ಮ ಕುಟುಂಬ ಸದಸ್ಯರ ಆರೋಗ್ಯ ಹಿತದೃಷ್ಟಿಯಿಂದ ಪ್ರತಿ ಅಂಗಡಿ, ವಾಣಿಜ್ಯ ಸಂಕೀರ್ಣದ ವ್ಯಾಪಾರಿಗಳು ಅಸಹಕಾರ ತೊರದೇ ಸ್ವಯಂ ಪ್ರೇರಣೆಯಿಂದ ರ‍್ಯಾಪಿಡ್ ಆ್ಯಂಟಿಜನ್ ಕೊರೊನಾ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್ ಮಾತನಾಡಿ, ರ‍್ಯಾಪಿಡ್ ಆ್ಯಂಟಿಜನ್ ಕೊರೊನಾ ಪರೀಕ್ಷೆಗೆ ಜಿಲ್ಲಾಡಳಿತ ಹಾಕಿಕೊಂಡಿರುವ ಕಾರ್ಯಯೋಜನೆಗೆ ಸಂಪೂರ್ಣ ಸಹಕಾರ ನೀಡಿ ಪ್ರತ್ಯೇಕವಾಗಿ ಪೊಲೀಸ್ ಅಧಿಕಾರಿಗಳನ್ನು ಮತ್ತು ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗುವುದು.

ಯಾವುದೇ ರೀತಿಯ ಅಸಹಕಾರ, ತೊಂದರೆ ಕಂಡುಬಂದಲ್ಲಿ ತಕ್ಷಣ ಸ್ಪಂದಿಸಲು ಚಾಲುಕ್ಯ ವಾಹನಗಳನ್ನು ಒದಗಿಸಲಾಗುವುದು.

ಮತ್ತು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಕೈಗೊಂಡಿರುವ ರ‍್ಯಾಪಿಡ್ ಆ್ಯಂಟಿಜನ್ ಕೊರೊನಾ ಪರೀಕ್ಷೆಗೆ ವಿಳಂಬ, ಅಸಹಕಾರ ಮತ್ತು ಅನಗತ್ಯ ತೊಂದರೆ, ಕಿರಿಕಿರಿ ಉಂಟುಮಾಡಿದರೆ ಕಾನೂನಾತ್ಮಕ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *