formers trouble
ರಾಜ್ಯ

ಸಿಗದ ಯೂರಿಯಾ : ರೈತರ ಪರದಾಟ

ಮತ್ತೆ ಯೂರಿಯಾ ಕೃತಕ ಅಭಾವ ಸೃಷ್ಠಿ?

ಮಂಜುನಾಥ ಎಸ್. ರಾಠೋಡ

ಗದಗ prajakiran.com : ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರ ಕ್ಷೇತ್ರ ನರಗುಂದಲ್ಲಿ ಯೂರಿಯಾ ಗೊಬ್ಬರ ಅಭಾವ ತೆಲೆದೋರಿದ್ದು, ರೈತರಿಗೆ ರಸಗೊಬ್ಬರ ಸಿಗದೆ ಪರದಾಡುವಂತಾಗಿದೆ.

ಕಳೆದ ಒಂದು ವಾರದಿಂದ ನರಗುಂದ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಲ್ಲಿ ಯೂರಿಯಾ ರಸಗೊಬ್ಬರ ಅಭಾವ ತಲೆದೋರಿದ್ದು, ರೈತರು ದೈನಂದಿನ ಕೆಲಸ ಬಿಟ್ಟು ರಸಗೊಬ್ಬರಗಳ ಅಂಗಡಿಯಿಂದ ಅಂಗಡಿಗೆ ಅಲೆದಾಡುವಂತಾಗಿದೆ.

ಇತ್ತ ಕೃಷಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ರೈತರನ್ನು ಕೆರಳಿಸಿದೆ. 

ನಿರಂತರ ಮಳೆ ಸುರಿಯುತ್ತಿರುವುದರಿಂದ ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಬೇಡಿಕೆ ಇದ್ದಾಗ ಯೂರಿಯಾ ಗೊಬ್ಬರ ಕೊರತೆಯಾಗಿರುವುದರಿಂದ ರೈತ ಕಂಗಾಲಾಗಿದ್ದಾನೆ.

ಕೆಲ ರಸಗೊಬ್ಬಬ್ಬರ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರವೊಂದನ್ನೇ ಕೇಳಿದರೆ “ಸ್ಟಾಕ್ ಇಲ್ಲ” ಎಂಬ ಉತ್ತರ ಬರುತ್ತಿದ್ದು ಯೂರಿಯಾ ಗೊಬ್ಬರ ಜತೆಗೆ ಬೇರೆ ಗೊಬ್ಬರ, ಕೀಟನಾಶಕ ಖರೀದಿಸುತ್ತೇನೆಂದರೆ ಮಾತ್ರ ಯೂರಿಯಾ ಗೊಬ್ಬರ ಸಿಗುವಂತಹ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಅಧಿಕಾರಿಗಳು ಹಾಗೂ ವರ್ತಕರನ್ನು ರೈತರು ಸಂಶಯ ದೃಷ್ಟಿಯಿಂದ ನೋಡುವಂತಾಗಿದೆ.

ಗೊಬ್ಬರ ಪಡೆಯಲು ನೂಕುನುಗ್ಗಲು:

ಸೋಮವಾರ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಲ್ಲಿ ಸುಮಾರು ಆರನೂರಕ್ಕೂ ಹೆಚ್ಚು ಜನರು ಗೊಬ್ಬರ ಪಡೆಯಲು ನೂಕು ನುಗ್ಗಲು ನಡೆಸಿದಾಗ ಸರತಿಯಲ್ಲಿ ನಿಂತಿರುವ ರೈತನೊಬ್ಬನಿಗೆ ಮೊನಕಾಲಿಗೆ ತೀವ್ರಪೆಟ್ಟಾಗಿದ್ದು, ರಕ್ತದ ಮುಡುವಿನಲ್ಲೇ ಗೊಬ್ಬರಪಡೆಯಲು ಹಪಹಪಿಸುತ್ತಿದ್ದ ದೃಶ್ಯ ನೆರೆದವರ ಮನಕಲುಕಿದೆ.

ಪ್ರಭಾವಿಗಳಿಗೆ ಎಷ್ಟು ಬೇಕಾದರೂ ರಸಗೊಬ್ಬರ ನೀಡುತ್ತಾರೆ. ಸಾಮಾನ್ಯ ರೈತರಿಗೆ ಟೋಕನ್ ಮೂಲಕ ೫ ಚೀಲ ರಸಗೊಬ್ಬರ ನೀಡುತ್ತಿದ್ದಾರೆ. ರಸಗೊಬ್ಬರವಿಲ್ಲದೆ ಕಂಗಾಲಾಗಿದ್ದೇವೆ ಎಂದು ರೈತ ಮಲ್ಲಪ್ಪ ಆರೋಪಿಸಿದರು.

೯೦೦ ಚೀಲ ಯೂರಿಯಾಗೊಬ್ಬರ ಮಾತ್ರ ಬಂದಿದೆ. ಗದ್ದಲವಾಗಬಾರದು ಎಂದು ಟೋಕನ್ ನೀಡಿದ್ದೇವೆ.

ಈಗಾಗಲೇ ಗೊಬ್ಬರ ಬಂದಿರುವಷ್ಟು ಎಲ್ಲಾ ರೈತರಿಗೆ ಟೋಕನ್ ನೀಡಲಾಗಿದೆ. ನಾಲ್ಕೈದು ದಿನದಲ್ಲಿ ಗೊಬ್ಬರ ಬರಲಿದೆ.

ರೈತರಿಗೆ ಗೊಬ್ಬರಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ವ್ಯವಸ್ಥಾಪಕದ ಯಲ್ಲಪ್ಪಗೌಡ ತಿಳಿಸಿದರು.

ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಅಭಾವ:

ಗದಗ ಜಿಲ್ಲೆಯ ಗಜೇಂದ್ರಗಡ, ಲಕ್ಷ್ಮೇಶ್ವರ, ಮುಂಡರಗಿ, ಶಿರಹಟ್ಟಿ, ರೋಣ ತಾಲೂಕಿನಲ್ಲಿ ಯೂರಿಯಾ ಗೊಬ್ಬರ ಆಭಾವ ಸೃಷ್ಟಿಯಾಗಿದೆ. ಬೀಜ, ಗೊಬ್ಬರವನ್ನು ನಿಗದಿತ ದರದಲ್ಲಿಯೇ ಮಾರಾಟ ಮಾಡಬೇಕು.

ಚೀಲದ ಮೇಲೆ ನಮೂದಿಸಿರುವ ಬೆಲೆಗೆ ಮಾರಾಟ ಮಾಡಿ, ರಸೀದಿ ಕೊಡಬೇಕು. ತಪ್ಪಿದರೆ ಶಿಸ್ತು ಕ್ರಮ ಜರುಗಿಸುತ್ತೇವೆ ಎನ್ನುವ ಕೃಷಿ ಅಧಿಕಾರಿಗಳು ವಾಸ್ತವದಲ್ಲಿ ಈ ಸೂಚನೆ ಪಾಲಿಸದ ಒಬ್ಬರ ವಿರುದ್ದವೂ ಈವರೆಗೆ ಕ್ರಮ ಜರುಗಿಸಿಲ್ಲ.

ಕೆಲ ವರ್ತಕರು ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆಯುತ್ತಲೇ ಇದ್ದಾರೆ ಎಂಬ ಆರೋಪವೂ ವ್ಯಾಪಕವಾಗಿ ಕೇಳಿ ಬಂದಿದೆ.

ಕಾಳ ಸಂತೆಯಲ್ಲಿ ಮಾರಾಟ:

ಯೂರಿಯಾ ಗೊಬ್ಬರ ಅಭಾವ ಪರಿಸ್ಥಿತಿಯನ್ನು ಮನಗಂಡ ಕೆಲ ಮಾರಾಟಗಾರರು ತಮ್ಮಲ್ಲಿರುವ ಗೊಬ್ಬರವನ್ನು ನಿಗದಿತ ದರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.

ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಯೂರಿಯಾ ಗೊಬ್ಬರ ಮಾರಲಾಗುತ್ತಿದೆ ಎಂಬ ವದಂತಿ ವ್ಯಾಪಕವಾಗಿ ಹಬ್ಬಿದೆ. ಇಷ್ಟಾದರೂ ಕೂಡ ಜಿಲ್ಲಾಡಳಿತ, ಕೃಷಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಅನ್ನದಾತರನ್ನು ಕೆರಳಿಸಿದೆ.

“ತೀವ್ರ ಬರಗಾಲದಿಂದ ಬಸವಳಿದು ಹೋಗಿದ್ದ ರೈತರ ಪಾಲಿಗೆ ಇತ್ತೀಚೆಗೆ ಸುರಿದ ಮಳೆ ಸ್ವಲ್ಪಮಟ್ಟಿಗೆ ಚೇತರಿಕೆ ನೀಡಿದೆ. ಮಳೆ ನಂತರ ಬೆಳೆಗಳಿಗೆ ತಕ್ಷಣದ ಪೋಷಕಾಂಶವಾಗಿ ಯೂರಿಯಾ ಗೊಬ್ಬರ ನೀಡಬೇಕು.

ಒಂದು ವಾರದಿಂದ ಯಾವ ಅಂಗಡಿಗೆ ಹೋದರೂ ಯೂರಿಯಾ ಸಿಗುತ್ತಿಲ್ಲ. ಮೂರು ದಿನಗಳಿಂದ ಖಾಸಗಿ ಅಂಗಡಿಗಳ ಮುಂದೆ ರೈತರು ಗೊಬ್ಬರಕ್ಕಾಗಿ ನಿಲ್ಲುವಂತಾಗಿದೆ”

ದ್ಯಾಮಣ್ಣ, ಮಹಾಂತೇಶ, ರೈತರು.

“ರಸಗೊಬ್ಬರ ಅಭಾವ ಉಂಟಾಗಿ ವಾರವೇ ಊರಿಳಿದೆ. ಆದರೂ ಪೂರೈಕೆ ಆಗುತ್ತಿಲ್ಲ. ಸೂಕ್ತ ಸಮಯಕ್ಕೆ ಗೊಬ್ಬರ ನೀಡದಿದ್ದರೆ ಬೆಳೆ ಇಳುವರಿ ಬರುವುದಿಲ್ಲ ಎನ್ನುವ ಆತಂಕ ರೈತರದ್ದಾಗಿದೆ.

ಸರ್ಕಾರ ಕೂಡಲೇ ಅಗತ್ಯವಿರುವ ರಸಗೊಬ್ಬರಗಳನ್ನು ಪೂರೈಕೆ ಮಾಡಬೇಕು. ಜಿಲ್ಲಾಧಿಕಾರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು”

ಪಿ.ಸಿ.ಹಿರೇಮನಿ, ಜೆಡಿಎಸ್ ಮುಖಂಡ, ನರಗುಂದ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *