ಆಧ್ಯಾತ್ಮ

ಮನದ ಭಾರ ಕಳಚಿಕೊಂಡ ಮಾನವ ಮಹಾತ್ಮನಾಗುತ್ತಾನೆ

ಜೀವನದಲ್ಲಿ ಒಂದಿಲ್ಲೊಂದು ಸಲ ನಾವು -ಪ್ರವಾಸ ಮಾಡಿರುತ್ತೇವೆ ಮತ್ತು  ಮಾಡುತ್ತಲೇ ಇರುತ್ತೇವೆ. ಪ್ರವಾಸ ಪ್ರಯಾಸವಾಗದಿರಲು ಆದಷ್ಟು ಕಡಿಮೆ ಸಾಮಾನು ಜೊತೆಗೆ ಒಯ್ಯಬೇಕು.

ನಮಗೆ ಒತ್ತೊಯ್ಯಲು ಸಾಧ್ಯವಾದಷ್ಟು ಸಾಮಾನು ಇರಬೇಕು. ರೈಲ್ವೆಯಲ್ಲಿ ಲೆಸ್ ಲಗೇಜ್ ಮೋರ್ ಕಂಫರ್ಟೇಬಲ್ (ಕಡಿಮೆ ಸಾಮಾನು ಬಹಳ ಅನುಕೂಲ) ಎನ್ನುವ ಘೋಷಣೆ ಇದೆ.

ಇನ್ನೂ ವಿಮಾನದಲ್ಲಿಯಂತೂ ಇಂತಿಷ್ಟೇ ಭಾರ ಜೊತೆಗಿರಬೇಕು ಇಂತಹದ್ದೇ ಸಾಮಾನು ಜೊತೆಗೆ ಇರಬೇಕು ಎಂಬ ನಿಯಮವಿದೆ. ನಿಯಮಕ್ಕೆ ವಿರೋಧವಾದ ವಸ್ತುಗಳು ( ಸಣ್ಣ ಚಾಕು, ಕತ್ತರಿ,  ಇತ್ಯಾದಿ) ಎಷ್ಟೇ ಬೆಲೆಬಾಳುವದಿದ್ದರೂ ಮುಲಾಜಿಲ್ಲದೆ ಬೀಸಾಡುತ್ತಾರೆ.

ಈ ನಿಯಮಗಳ ಮೂಲ ಉದ್ದೇಶ ಹೆಚ್ಚಿನ ಸಾಮಾನು ಜೊತೆಗಿದ್ದರೆ ಪ್ರಯಾಣ ಪ್ರಯಾಸವಾಗುತ್ತದೆ. ಮೇಲಾಗಿ ವಿಮಾನದ ಭಾರ ಹೆಚ್ಚಾಗಲು ಕಾರಣವಾಗುತ್ತದೆ.

ಉಪಗ್ರಹ ಉಡಾವಣೆ ಮಾಡುವ ರಾಕೆಟ್ ಪ್ರತಿ ಹಂತದಲ್ಲಿ ತನ್ನ ಒಂದೊಂದು ಭಾಗ ಕಳಚಕೊಳ್ಳತ್ತ ಹೋಗಿ ಅಂತಿಮವಾಗಿ ಉಪಗ್ರಹವನ್ನು ಮಾತ್ರ ಕಕ್ಷೆಯಲ್ಲಿ ಸ್ಥಾಪಿಸುತ್ತದೆ.



ಒಂದುವೇಳೆ ಅದು ತನ್ನ ಭಾಗ ಕಳಚಿಕೊಂಡು ಹಗುರವಾಗದಿದ್ದಲ್ಲಿ ಅದಕ್ಕೆ ಮೇಲೆ ಜಿಗಿಯಲು ಸಾಧ್ಯವಾಗದೇ ಹೋಗುತ್ತದೆ.

ಅದೇ ರೀತಿ ನಮ್ಮ ಜೀವನದ ಪ್ರಯಾಣ ಸುಖವಾಗಿರಲು ಪ್ರೀತಿ, ಪರಹಿತ ಚಿಂತನೆ, ಪರೋಪಕಾರ, ದಯೆ, ಕ್ಷಮೆಗಳಂತಹ ಕೆಲವು ವಸ್ತುಗಳನ್ನು ಜೊತೆಗೆ ಇಟ್ಟು ಒಯ್ಯಬೇಕಾಗುತ್ತದೆ, ಹಣ, ಅಂತಸ್ತು, ಅಭಿಮಾನ, ಅಹಂ, ನಾನು, ನನ್ನದು, ಕೋಪ ತಾಪ, ಮದ ಮತ್ಸರದಂತಹ ಕೆಲವು ವಸ್ತುಗಳನ್ನು ಬಿಟ್ಟರೆ ಪ್ರಯಾಣ ಸುಖವಾಗಿರುತ್ತದೆ. 

ಅಲ್ಲಿರುವುದು ನಮ್ಮ ಮನೆ, ಇಲ್ಲಿಗೆ ಬಂದಿರುವೆ ಸುಮ್ಮನೆ ಎಂದು ತತ್ವಪದಕಾರರು ಹಾಡಿದ್ದಾರೆ.  ಅಲ್ಲಿರುವ ನಮ್ಮ ಮನೆಯಿಂದ ಇಲ್ಲಿಗೆ ಬಂದು ಹೋಗುವ ಪ್ರಯಾಣದ ಸುರಕ್ಷಿತೆಗಾಗಿ ದೇವರು ಎಲ್ಲಾ ವ್ಯವಸ್ಥೆ ಮಾಡಿದ್ಧಾನೆ.

ಹುಟ್ಟಿದ ಪ್ರತಿ ವ್ಯಕ್ತಿಗೂ ಮರಳುವ ಪ್ರಯಾಣದ (ರಿಟರ್ನ ಜರ್ನಿ) ಟಿಕೆಟ್ ಮಾಡಿಸಿ ಕೊಟ್ಟಿದ್ದಾನೆ. ಮರಳುವ (ರಿಟರ್ನ)ಟಿಕೆಟ್‌ನ ದಿನ, ದಿನಾಂಕ ಅವನಿಗೆ ಅವನಿಗೆ ಮಾತ್ರ ಗೊತ್ತು. ಲೌಕಿಕದ ಬದುಕು ತಾತ್ಕಾಲಿಕ ಎಂಬುದನರಿತು ಪ್ರತಿ ಮನುಷ್ಯ ಬಾಳಿದರೆ ಲೋಕದ ಅನೇಕ ಜಂಜಡಗಳು ತಾನಾಗಿ ಇಲ್ಲವಾಗುತ್ತವೆ.



ಬಹುತೇಕ ಜನರು ಹಿರಣ್ಯಕಶ್ಯಪನಂತೆ ನಾನೇ ದೇವರು, ನನ್ನಿಂದಲೇ ಎಲ್ಲ, ನಾನೇ ಎಲ್ಲಾ ಮಾಡಿದ್ದು, ನಾನೇ ಸರ್ವಸ್ವ ಎಂದು ಬೀಗುತ್ತಾರೆ. ತಾವು ತೊಂದರೆ ಅನುಭವಿಸುತ್ತ ಇತರರಿಗೂ ತೊಂದರೆ ಕೊಡುತ್ತಾರೆ.

ಪ್ರಯಾಣಕ್ಕೆ ಹೋಗುವಾಗ ನಿತ್ಯ ಬಳಕೆಯ ಸಾಮಾನು ಜತನದಿಂದ ಇಟ್ಟುಕೊಳ್ಳುವಂತೆ ಜೀವನವೆಂಬ ಪಯಣದಲ್ಲಿ ಸ್ವಾಸ್ಥ್ಯ, ಸಂತೋಷ, ಪ್ರೀತಿ ಪ್ರೇಮ, ಪರೋಪಕಾರ, ಕ್ಷಮೆ ಎಂಬ ಸಾಮಾನುಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಕು.

ಅನುಮತಿ ಇಲ್ಲದ್ದನ್ನು ಬೀಸಾಡುವಂತೆ, ಪರಮಾತ್ಮನ ಪರವಾನಗಿ ಇಲ್ಲದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಮತ್ತು ಸ್ವಾರ್ಥ, ಅಹಂಭಾವಗಳನ್ನು ಇಲ್ಲಿಯೇ ಬೀಸಾಡಬೇಕು. ದುರಾಸೆಯಿಂದ ಹೆಚ್ಚಿಗೆ ಸಂಗ್ರಹಿಸಿದರೆ ಜೀವನ ಭಾರವಾಗುತ್ತದೆ. ಪ್ರಯಾಣ ದುಸ್ತರವಾಗುತ್ತದೆ. 

ದೇವರು ಒಳ್ಳೆಯದನ್ನು ಉಳಿಸಿಕೊಳ್ಳಬೇಕು. ಬೈಗುಳ, ಟೀಕೆ ಮುಂತಾದವುಗಳನ್ನು ಮಾಡಿದರೆ, ನಮಗೆ ಸಿಗಬೇಕಾದ ಮಾನ್ಯತೆ, ಮರ್ಯಾದೆ ನೀಡದಿದ್ದರೆ ಬೇಸರಸಿ ಕೊಳ್ಳಬಾರದು.



ಬೇರೆಯವರ ಜೊತೆ ನಮ್ಮನ್ನು ಹೋಲಿಸಿಕೊಂಡು ದು:ಖ ಪಡಬಾರದು.  ದುಷ್ಟ ಚಿಂತನೆಗಳನ್ನು ದೂರ ಇಡಬೇಕು. ಮನನೋಯುವ ಸಂಗತಿಗಳನ್ನು ಪರಿಗಣಿಸದೇ ತಕ್ಷಣ ಮರೆಯಬೇಕು.

ದೇವರು ಮರೆವು ಎಂಬ ವರದಾನ ಕೊಟ್ಟಿದ್ದಾನೆ.ಅದನ್ನು ಕೆಟ್ಟದ್ದನ್ನು ಮರೆಯಲು ಆಗಾಗ ಬಳಸಬೇಕು. ಕೆಟ್ಟದ್ದನ್ನು ತಕ್ಷಣ ಮರೆತರೆ ಮನಸ್ಸು ನಿರಾಳವಾಗುತ್ತದೆ.

ವ್ಯಕ್ತಿ ಮನದ ಭಾರ ಕಡಿಮೆ ಆಗುತ್ತದೆ. ವ್ಯಕ್ತಿಯ ವ್ಯಕ್ತಿತ್ವ ಎತ್ತರಕ್ಕೆ ಏರಲು ಸನ್ನದ್ಧವಾಗುತ್ತದೆ. ದುರ್ದೈವಶಾತ್ ನಾವೆಲ್ಲ ದೇವರ ಇಚ್ಛೆಗೆ ವಿರುದ್ಧವಾಗಿ ಕೆಟ್ಟದ್ದನ್ನು, ಕಹಿ ಪ್ರಸಂಗವನ್ನು ಹಲವು ವರ್ಷಗಳ ಕಾಲ ಮರೆಯದೇ ನೆನಪಿಟ್ಟು ಕೊಳ್ಳುತ್ತೇವೆ.

ಒಳ್ಳೆಯದನ್ನು, ಸಂತೋಷದ ಪ್ರಸಂಗಗಳನ್ನು ತಕ್ಷಣ ಮರೆತು ಬಿಡುತ್ತೇವೆ. ಆದ್ದರಿಂದ ಮನದ ಭಾರತ ಹೆಚ್ಚಾಗುತ್ತ್ತಿದೆ. ವ್ಯಕ್ತಿತ್ವ ಸಗಣಿಹುಳುವಿನಂತೆ ಇದ್ದಲ್ಲಿಯೇ ಒದ್ದಾಡುತ್ತದೆ.



ಹಾಗಾದಿರಲು ಪರಮಾತ್ಮ ಕ್ಷಮೆ ಎಂಬುದನ್ನು ಕರುಣಿಸಿದ್ದಾನೆ. ಪ್ರಾಣಿಗಳಲ್ಲಿ ಇಲ್ಲದ ಕ್ಷಮೆ ಎಂಬ ಅಮೂಲ್ಯ ಗುಣ ಮನುಷ್ಯರಲ್ಲಿದೆ. ಮನುಷ್ಯರಾದವರು ಇದನ್ನು ಬಳಸಿದಷ್ಟು ಮಹಾತ್ಮರಾಗುವ ಪಥದಲ್ಲಿ ಮುನ್ನಡೆಯುತ್ತಾರೆ.

ಮನುಷ್ಯರಾದವರೂ  ಕ್ಷಮಾ ಗುಣದಿಂದ ದುರ್ಭಾವನೆಯ ಭಾರ ಎಲ್ಲವೂ ಕಳಚಿಕೊಂಡು ಹಗುರವಾಗಬೇಕು. ಆದರೆ ಅನೇಕರು ಕ್ಷಮೆಯನ್ನು ಬಳಸುವುದೇ ಇಲ್ಲ. ದಯೆಯೇ ಧರ್ಮದ ಮೂಲ ಎಂಬಂತೆ ಕ್ಷಮೆಯಿಂದ ವ್ಯಕ್ತಿ ಧರ್ಮವಂತನಾಗುತ್ತಾನೆ.

ಮಾನವ ಮಹಾದೇವನಾಗುವ ಪ್ರಕ್ರಿಯೆಯಲ್ಲಿ ಕಳಚಿಕೊಳ್ಳುವುದು ಬಹಳ ಇದೆ. ಶಿಲೆ ತನ್ನ ಬೇಡಾದ ಭಾಗವನ್ನು ಕಳಚಿಕೊಂಡಾಗ ಶಿಲ್ಪ (ಮೂರ್ತಿ)ವಾಗಿ ಪೂಜೆಗೊಳ್ಳುತ್ತದೆ. 

ಕಾಮವನ್ನು ಪ್ರೇಮದಿಂದ, ಕ್ರೋಧವನ್ನು ಸಂತೋಷದಿಂದ, ಮೋಹವನ್ನು ಮಮತೆ ಯಿಂದ, ಲೋಭವನ್ನು ತ್ಯಾಗದಿಂದ, ಮದ ಮತ್ಸರಗಳನ್ನು ಪರೋಪಕಾರ, ಸತ್ಸಂಗಗಳಂತಹ ಸಾತ್ವಿಕ ಚಿಂತನೆ ಯಿಂದ ಕಳಚಿಕೊಂಡಾಗ ವ್ಯಕ್ತಿಯ ವ್ಯಕ್ತಿತ್ವ ಎತ್ತರ ಎತ್ತರಕ್ಕೆ ಮೇಲೆ ಮೇಲೆ ದಿಗಂತದೆಡೆಗೆ ವಿಸ್ತಾರವಾಗುತ್ತದೆ.



ವ್ಯಕ್ತಿಯ ಪ್ರಯಾಣ ಸುಖಕರವಾಗುತ್ತದೆ ಸುರಕ್ಷಿತವಾಗುತ್ತದೆ. ಸುಖಪ್ರಯಾಣ ಮಾಡಿ ಎತ್ತರ ಎತ್ತರಕ್ಕೆ ಬೆಳೆವ ಮಾನವ ಮಹಾತ್ಮನಾಗುತ್ತಾನೆ.

ಜಗತ್ತು ಅಂತಹ ವ್ಯಕ್ತಿಗಳನ್ನು ಸಂತ, ಮಹಾತ್ಮ, ಶರಣ, ದೇಶಭಕ್ತ ಎಂಬ ಮುಂತಾದ ಗುಣವಿಶೇಷಗಳಿಂದ ಗೌರವಿಸುತ್ತದೆ.

ಮಹಾದೇವಯ್ಯ ಕರದಳ್ಳಿ,

ಕಲಬುರ್ಗಿ  



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *