ಜಿಲ್ಲೆ

ಧಾರವಾಡದಲ್ಲಿ ಶಾಲಾ ಪುನರಾರಂಭಕ್ಕೆ ಉತ್ತಮ ಪ್ರತಿಕ್ರಿಯೆ ; ಕೋವಿಡ್ ಆರೋಗ್ಯ ಸುರಕ್ಷತಾ ಕ್ರಮಗಳಿಗೆ ಮೊದಲ ಆದ್ಯತೆ 

ಧಾರವಾಡ prajakiran.com : ಜಿಲ್ಲೆಯಲ್ಲಿ ಸರಕಾರದ ಆದೇಶದಂತೆ ಪ್ರಾಥಮಿಕ ಶಾಲೆಯ 6,7, ಪ್ರೌಢಶಾಲೆಯ 8,9 ಹಾಗೂ 10 ನೇಯ ಮತ್ತು ಪಿಯುಸಿ ದ್ವಿತೀಯ ವರ್ಗದ ಕ್ಲಾಸ್‍ಗಳನ್ನು ಇಂದಿನಿಂದ (ಜ.1) ಆರಂಭಿಸಲಾಗಿದೆ.

ಬೆಳಗ್ಗೆ 11 ಗಂಟೆವರೆಗೆ ಶೇ.35 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆ.

ಮೊದಲ ದಿನ ಶೇ.60 ರಷ್ಟು ಹಾಜರಾತಿ ಆಗುವ ನಿರೀಕ್ಷೆ ಇದೆ. ಎಲ್ಲ ಶಾಲೆಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಅವರು ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಮೊದಲ ದಿನ ಆಗಮಿಸಿದ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಮಾತನಾಡಿದರು.

ಜಿಲ್ಲೆಯ ಎಲ್ಲ ಗ್ರಾಮ ಹಾಗೂ ನಗರ ಪ್ರದೇಶದಲ್ಲಿ ಶಾಲೆಗಳಿಗೆ ಮಕ್ಕಳನ್ನು ಕಳಿಸುವ ಕುರಿತು ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಮೂಲಕ ಪಾಲಕರಿಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸಲಾಗಿದೆ. ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಯಿಂದ ಎಲ್ಲ ಶಾಲೆಗಳಿಗೆ ಸ್ಯಾನಿಟೈಸರ್, ಆರೋಗ್ಯ ತಪಾಸಣೆಗಾಗಿ ಥರ್ಮಲ್ ಸ್ಕ್ಯಾನರ್‍ಗಳನ್ನು ನೀಡಲು ಕ್ರಮಕೈಗೊಳ್ಳಲಾಗಿದೆ.

ಶಾಲಾ ತರಗತಿಗಳಿಗೆ ಹಾಜರಾಗುವುದು ವಿದ್ಯಾರ್ಥಿಗಳಿಗೆ ಕಡ್ಡಾಯವಲ್ಲ.

ಅವರು ಇಚ್ಚಿಸಿದರೆ ಮತ್ತು ಪಾಲಕರು ಒಪ್ಪಿಗೆ ನೀಡಿದರೆ ಮಾತ್ರ ಹಾಜರಾಗಬಹುದು. ತರಗತಿಗಳನ್ನು ನಡೆಸಲು ಶಾಲಾ ಆವರಣ, ಕೊಠಡಿಗಳಲ್ಲಿ ಸ್ವಚ್ಛತೆಯನ್ನು ಮಾಡಿಕೊಳ್ಳಲಾಗಿದೆ ಎಂದರು.

ಸರಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಡಶಾಲೆಯಲ್ಲಿ 45 ನಿಮಿಷದ 3 ತರಗತಿಗಳು ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12-30 ವರೆಗೆ ನಡೆಯುತ್ತವೆ. 6ನೇ ಮತ್ತು 7ನೇ ತರಗತಿಗಳು ಮಂಗಳವಾರ, ಗುರುವಾರ, ಮತ್ತು ಶುಕ್ರವಾರ (ಮೂರು ದಿನ) ಮತ್ತು 8 ನೇ ವರ್ಗದ ತರಗತಿಗಳು ಮಂಗಳವಾರ ಮತ್ತು ಗುರುವಾರ, ಶನಿವಾರ (ಮೂರು ದಿನ) ನಡೆಯುತ್ತವೆ ಮತ್ತು 10 ನೇ ತರಗತಿಗಳು 6 ದಿನವು ನಡೆಯುತ್ತವೆ. ಕಚೇರಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗಿನ ತೆರೆದಿರುತ್ತದೆ.

ಪಿಯುಸಿ ಕಾಲೇಜು ಹಂತದಲ್ಲಿ ದ್ವಿತೀಯ ಪಿಯುಸಿ ತರಗತಿಗಳು ಮಾತ್ರ ಆರಂಭವಾಗಿದ್ದು, ವಾರದ 6 ದಿನವು ಬೆಳಿಗ್ಗೆ 10 ಗಂಟೆಯಿಂದ 1-30 ರ ವರೆಗೆ 45 ನಿಮಿಷಗಳ 4 ತರಗತಿಗಳು ನಡೆಯುತ್ತವೆ.

ಕಚೇರಿ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗಿನ ತೆರೆದಿರುತ್ತದೆ ಎಂದರು.

ಕೊಠಡಿ ಲಭ್ಯತೆ ಹಾಗೂ ವಿದ್ಯಾರ್ಥಿಗಳ ಹಾಜರಾತಿ ನೋಡಿಕೊಂಡು ಹೆಚ್ಚುವರಿ ತರಗತಿ ಹಾಗೂ ಸಮಯ ಹೊಂದಾಣಿಕೆ ಮಾಡಿಕೊಂಡು ಪ್ರತಿ ಶಾಲೆಯಲ್ಲಿ ಸರಕಾರದ ನಿರರ್ದೇಶನದಂತೆ ತರಗತಿಗಳನ್ನು ನಡೆಸುವಂತೆ ಪಿಯು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಶಾಲೆಯಲ್ಲಿ ಕೈಗೊಂಡ ಸುರಕ್ಷತಾ ಕ್ರಮಗಳನ್ನು ಹಾಗೂ ಪ್ರತಿದಿನ ನಡೆಯುವ ತರಗತಿಗಳ ನೋಡಿಕೊಂಡು ಸಹಪಾಠಿಗಳು ನೀಡುವ ಅಭಿಪ್ರಾಯದ ಮೇರೆಗೆ ಎಲ್ಲ ವಿದ್ಯಾರ್ಥಿಗಳು ಇನ್ನು ಮುಂದೆ ತರಗತಿಗಳಿಗೆ ಪ್ರತಿದಿನ ಹಾಜರಾಗುತ್ತಾರೆ ಎಂದು ಜಿಲ್ಲಾಧಿಕಾರಿಗಳು ಭರವಸೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ ಸಿ.ಇ.ಓ. ಡಾ. ಸುಶೀಲಾ.ಬಿ. ಅವರು ಮಾತನಾಡಿ, ಜಿಲ್ಲೆಯಲ್ಲಿ 10 ಮತ್ತು 12ನೇ ತರಗತಿಗಳು ಪ್ರತಿದಿನ ನಡೆಯುತ್ತವೆ. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ. ಆದರೆ ಪಾಲಕರ ಅನುಮತಿ ಪಡೆದು ಶಾಲೆಗೆ ಹಾಜರಾಗಬೇಕು.

ಶಾಲಾ ಕೊಠಡಿಗಳಲ್ಲಿ ಕೋವಿಡ್ ಮುಂಜಾಗ್ರತೆ ಕ್ರಮ ತಗೆದುಕೊಳ್ಳಲಾಗಿದೆ. ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ಮಾಡಿ, 50 ವರ್ಷ ಮೇಲ್ಪಟ್ಟವರಿಗೆ ಫೇಸ್‍ಮಾಸ್ಕ್ ನೀಡಲಾಗಿದೆ.

ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಕೋವಿಡ್ ಲಕ್ಷಣ ಕಂಡು ಬಂದಲ್ಲಿ ತುರ್ತು ಆರೋಗ್ಯ ಸೇವೆಯನ್ನು ತಕ್ಷಣ ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಲ್. ಹಂಚಾಟೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ. ಚಿದಂಬರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಮಂಜುನಾಥ ಅಡವೇರ, ಶಿವಲೀಲಾ ಕಳಸಣ್ಣವರ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಕಿ ಶ್ರೀಮತಿ ಲದ್ದಿಮಠ, ಮತ್ತಿತರರು ಇದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *