ಅಂತಾರಾಷ್ಟ್ರೀಯ

ಧಾರವಾಡದ ಐ ಐ ಟಿ ಕಟ್ಟಡ ಸೇರಿ ಹಲವು ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಧಾರವಾಡ ಮಾ.12:ಉತ್ತಮ ಶಿಕ್ಷಣವು ಪ್ರತಿಯೊಬ್ಬರಿಗೆ ದೊರಕಬೇಕಿದೆ. ಉತ್ತಮ ಶಿಕ್ಷಣ ಸಂಸ್ಥೆ ಆರಂಭಿಸಿದಷ್ಟು ಉತ್ತಮ ಶಿಕ್ಷಣ ದೊರಕುವುದು ಸಾಧ್ಯವಾಗಲಿದೆ.

ಆದ್ದರಿಂದ ಉತ್ತಮ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಸರಕಾರ ಆದ್ಯತೆ ನೀಡಿದೆ.ದೇಶದಲ್ಲಿ ಕಳೆದ 9 ವರ್ಷಗಳಿಂದ ಆಧುನೀಕರಣಕ್ಕೆ ಒತ್ತು ನೀಡಲಾಗಿದೆ.

ಗ್ರಾಮೀಣ ರಸ್ತೆ ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ರೈಲು ಮಾರ್ಗಗಳ ವಿಸ್ತರಣೆ ಹಾಗೂ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ .ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ಇಲ್ಲಿನ ಚಿಕ್ಕಮಲ್ಲಿಗವಾಡದಲ್ಲಿ ನಿರ್ಮಾಣವಾಗಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ನೂತನ ಕಟ್ಟಡ ಉದ್ಘಾಟಿಸಿ,ವಿವಿಧ ಯೋಜನೆಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.

ಜಗದ್ಗುರು ಬಸವೇಶ್ವರ ಅವರಿಗೆ ನನ್ನ ನಮಸ್ಕಾರಗಳು. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಈ ನಾಡಿನ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರಗಳು ಎಂದು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತು ಆರಂಭಿಸಿದರು.

ಹುಬ್ಬಳ್ಳಿ, ಬೆಳಗಾವಿ, ಕಲಬುರ್ಗಿ ಮತ್ತಿತರ ಕಡೆಗಳಲ್ಲಿ ರೋಡ್ ಶೋ ಸಂದರ್ಭದಲ್ಲಿ ನೀಡಿದ ಅದ್ಭುತ ಪ್ರೀತಿ. ಮತ್ತು ಆ ಕ್ಷಣ ಮರೆಯಲಾಗದು‌.
ಜನರು ಪ್ರೀತಿ ಮತ್ತು ಆಶೀರ್ವಾದವು ನನ್ನ ಮೇಲಿನ ದೊಡ್ಡ ಋಣವಾಗಿದೆ‌. ನಿರಂತರ ಸೇವೆಯ ಮೂಲಕ ಕರ್ನಾಟಕ ಜನರ ಈ ಋಣವನ್ನು ತೀರಿಸುತ್ತೇನೆ ಎಂದು ಪ್ರಧಾನಮಂತ್ರಿಗಳು ವಿನಮೃತೆಯಿಂದ ಭರವಸೆಯನ್ನು ನೀಡಿದರು.

ಡಬಲ್ ಎಂಜಿನ್ ಸರಕಾರವು ರಾಜ್ಯದ ಹಳ್ಳಿ ಹಳ್ಳಿಗಳ ಸಮಗ್ರ ಪ್ರಗತಿಗೆ ಬದ್ಧವಾಗಿದೆ. ಪ್ರಗತಿಯ ಹೊಸ ಶಕೆಯು ಇಡಿ ರಾಜ್ಯದ ಪ್ರಗತಿಗೆ ಮುನ್ನುಡಿ ಬರೆಯಲಿದೆ.

ಮಲೆನಾಡು ಮತ್ತು ಬಯಲುಸೀಮೆಯ ನಡುವಿನ ದ್ವಾರಬಾಗಿಲು ಆಗಿರುವ ಈ ಭಾಗವು ಪ್ರತಿಯೊಬ್ಬರನ್ನು ಪ್ರಿತಿಯಿಂದ ಸ್ವಾಗತಿಸಿದೆ.

ಧಾರವಾಡವು ಕರ್ನಾಟಕ ಮತ್ತು ಭಾರತದ ಜೀವಂತಿಕೆಯ ಪ್ರತಿಬಿಂಬವಾಗಿದೆ.ಧಾರವಾಡದ ಪರಿಚಯವು ದ.ರಾ.ಬೇಂದ್ರೆ, ಸಮೃದ್ಧ ಸಂಗೀತ ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್, ಕುಮಾರ್ ಗಂಧರ್ವ,ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನಸೂರ ಅವರಂತಹ ಸಂಗೀತ ದಿಗ್ಗಜರ ತವರೂರಾಗಿದೆ.
ಧಾರವಾಡ ಪೇಢೆಯ ಸ್ವಾದವು ಮರೆಯಲಾರದಂತದು.

ಐಐಟಿಯ ಹೊಸ ಕ್ಯಾಂಪಸ್ ಧಾರವಾಡದ ಪರಿಚಯವನ್ನು ಮತ್ತಷ್ಟು ಬಲಗೊಳಿಸಲಿದೆ. ಕರ್ನಾಟಕದ ವಿಕಾಸದಲ್ಲಿ ಐಐಟಿ ಹೊಸ ಅಧ್ಯಯವಾಗಲಿದೆ. ಇಲ್ಲಿನ ಮೂಲ ಸೌಕರ್ಯಗಳು ಈ ಸಂಸ್ಥೆಯನ್ನು ವಿಶ್ವದ ಮುನ್ನೆಲೆಗೆ ತರಲಿದೆ.

ಐಐಟಿ ಸಂಸ್ಥೆಯು ಬಿಜೆಪಿ ಸರಕಾರದ ಸಂಕಲ್ಪದ ಸಿದ್ಧಿಯಾಗಿದೆ. ಶಂಕುಸ್ಥಾಪನೆ ನೆರವೇರಿಸಿದ ನಾಲ್ಕು ವರ್ಷಗಳಿಂದ ಡಬಲ್ ಎಂಜಿನ್ ಸರಕಾರವು ಅದೇ ವೇಗದಲ್ಲಿ ನಡೆದಿದೆ.

ಶಂಕುಸ್ಥಾಪನೆ ನೆರವೇರಿಸಿ ಮರೆತುಬಿಡುವ ಕಾಲ ಹೋಯಿತು. ನಾವೇ ಶಂಕುಸ್ಥಾಪನೆ ನೆರವೇರಿಸಿ ನಾವೇ ಲೋಕಾರ್ಪಣೆ ಮಾಡುವುದು ನಮ್ಮ ಬದ್ಧತೆಯಾಗಿದೆ‌.

ದೇಶದಲ್ಲಿ ಕೇವಲ 380 ವೈದ್ಯಕೀಯ ಕಾಲೇಜುಗಳಿದ್ದವು 9 ವರ್ಷಗಳಲ್ಲಿ 250 ಕಾಲೇಜು ಸ್ಥಾಪಿಸಲಾಗಿದೆ. ಇದೇ ರೀತಿ ಐಐಟಿ ಗಳನ್ನು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆರಂಭಿಸಲಾಗಿದೆ.

ಮುಂದಿನ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡ ನಗರಗಳು ಅಭಿವೃದ್ಧಿ ಯ ತುತ್ತತುದಿಗೆ ತಲುಪಲಿವೆ.ಜಯದೇವ ಹೃದ್ರೋಗ ಆಸ್ಪತ್ರೆ ಆರಂಭದಿಂದ ಈ ಭಾಗದ ಜನರಿಗೆ ಉತ್ತಮ ಚಿಕಿತ್ಸೆ ಲಭಿಸಲಿದೆ.

ಜಲಜೀವನ್ ಮಿಷನ್ ಯೋಜನೆ ಮೂಲಕ 1 ಸಾವಿರ ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಮಲಪ್ರಭಾ ನದಿಯ ನೀರನ್ನು ನಳಗಳ ಮೂಲಕ ಮನೆ ಮನೆಗೆ ತಲುಪಿಸಲಾಗುವುದು.
ತುಪ್ಪರಿಹಳ್ಳದ ಯೋಜನೆ ಮೂಲಕ ಪ್ರವಾಹ ಹಾನಿ ತಪ್ಪಿಸಲಿದೆ.

ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ವಿಶ್ವದ ಅತೀ ದೊಡ್ಡ ಫ್ಲ್ಯಾಟ್ ಫಾರ್ಮ್ ಇದು ದಾಖಲೆಯಲ್ಲ; ಮೂಲಸೌಕರ್ಯ ಅಭಿವೃದ್ಧಿಗೆ ನಾವು ನೀಡಿದ ಆದ್ಯತೆ ಗೆ ಸಾಕ್ಷಿಯಾಗಿದೆ.

ರೈಲು ಮಾರ್ಗದ ವಿದ್ಯುದ್ದೀಕರಣದಿಂದ ತೈಲದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಪರಿಸರ ರಕ್ಷಣೆಗೂ ಸಹಕಾರಿಯಾಗಲಿದೆ.

ರಸ್ತೆ, ಸಾರಿಗೆ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸುವುದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತಿದೆ.ಹಳ್ಳಿ ಹಳ್ಳಿಗೆ ಅಂತರ್ಜಾಲ ಸಂಪರ್ಕವನ್ನು ಒದಗಿಸಿರುವುದರಿಂದ ಇಂದು ಭಾರತವು ಜಗತ್ತಿನ ಡಿಜಿಟಲ್ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದೆ.

ಪಿಎಂ -ಗತಿಶಕ್ತಿ ಮಾಸ್ಟರ್ ಪ್ಲ್ಯಾನ್ ಮೂಲಕ ಅಗತ್ಯ ಮೂಲಸೌಕರ್ಯ ಒದಗಿಸಲಾಗುತ್ತಿದೆ.
ಆಸ್ಪತ್ರೆ, ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಭವಿಷ್ಯದ ಭಾರತ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ.

ಬಸವಣ್ಣನವರು ಅನುಭವ ಮಂಟಪ ಸ್ಥಾಪನೆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮುನ್ನುಡಿ ಬರೆದಿದ್ದಾರೆ. ಲಂಡನ್ ನಲ್ಲಿ ಬಸವೇಶ್ವರ ಪುತ್ಥಳಿ ಲೋಕಾರ್ಪಣೆ ಅವಕಾಶ ಸಿಕ್ಕಿತ್ತು.

ಆದರೆ ಅದೇ ಲಂಡನ್‌ ನಲ್ಲಿ ಇತ್ತೀಚೆಗೆ ಭಾರತದ ಪ್ರಜಾಪ್ರಭುತ್ವ ಕ್ಕೆ ಅವಮಾನಿಸುವ ಮಾತುಗಳನ್ನು ಕೇಳುವುದು ದೌರ್ಭಾಗ್ಯವಾಗಿದೆ ಎಂದು ಹೇಳಿದರು.

ಇಂತಹ ಮಾತುಗಳು ಭಾರತದ ಪರಂಪರೆಗೆ ಮಾತ್ರವಲ್ಲ; ಇಡೀ ಭಾರತೀಯರಿಗೆ ಅವಮಾನಿಸಿದಂತಾಗಿದೆ.

ಕರ್ನಾಟಕವು ಹೈಟೆಕ್ ಇಂಡಿಯಾದ ಎಂಜಿನ್ ಆಗಿದೆ ಎಂದು ಬಣ್ಣಿಸಿದ ಅವರು, ಡಬಲ್ ಎಂಜಿನ್ ಸರಕಾರಕ್ಕೆ ಇಲ್ಲಿನ ಜನರ ಆಶೀರ್ವಾದ ಬಲ ತುಂಬಲಿದೆ ಎಂದು ಪ್ರಧಾನಿ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜಕಾರಣಿಗಳ ಕಣ್ಣು ಮುಂದಿನ ಚುನಾವಣೆಗಳ ಮೇಲಿದ್ದರೆ,ಮುತ್ಸದ್ಧಿಯ ಕಣ್ಣು ಮುಂದಿನ ಪೀಳಿಗೆಯ ಭವಿಷ್ಯದ ಮೇಲಿರುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಂತಹ ಮುತ್ಸದ್ಧಿತನ ಹೊಂದಿರುವ ನೇತಾರ ತಾಂತ್ರಿಕವಾಗಿ ದೇಶವನ್ನು ಸಶಕ್ತಗೊಳಿಸಲು ಧಾರವಾಡ ಐಐಟಿ ಸ್ಥಾಪಿಸಿದ್ದಾರೆ.ಹೊಸಪೇಟೆ -ಹುಬ್ಬಳ್ಳಿ- ತಿನೈಘಾಟ್ ರೈಲ್ವೇ ಮಾರ್ಗದ ವಿದ್ಯುದ್ದೀಕರಣ ಸೇರಿದಂತೆ ಅನೇಕ ಸುಧಾರಣೆಗಳನ್ನು ತಂದಿದ್ದಾರೆ.

ಪ್ರಸಕ್ತ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೇ ಸುಧಾರಣೆಗೆ 7651 ಕೋಟಿ ಮೀಸಲಿಟ್ಟಿರುವ ಡಬಲ್ ಇಂಜಿನ್ ಸರ್ಕಾರ ಇದಾಗಿದೆ.

ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 13 ಲಕ್ಷ ಕೆಲಸಗಳಂತೆ ಕಳೆದ ಐದು ವರ್ಷಗಳಲ್ಲಿ ಸುಮಾರು 33 ಲಕ್ಷ ಉದ್ಯೋಗ ಸೃಜನೆ ಮಾಡಿರುವದರ ಹಿಂದೆ ಕೇಂದ್ರ ಸರ್ಕಾರದ ಶಕ್ತಿ ಇದೆ.

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡಿದೆ.ಶಿಕ್ಷಣ,ಮೂಲಭೂತ ಸೌಕರ್ಯ, ಕೈಗಾರೀಕರಣದಂತಹ ಮಹತ್ವದ ಕಾರ್ಯಗಳು ರಾಜ್ಯ ಮತ್ತು ಕೇಂದ್ರದಲ್ಲಿ ಏಕಕಾಲದಲ್ಲಿ ನಡೆಯುತ್ತಿವೆ ಎಂದರು.

ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ ಮಾತನಾಡಿ, ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಹೊಸ ಯೋಜನೆಗಳನ್ನು ಪ್ರಧಾನಿಯವರು ದೇಶಕ್ಕೆ ನೀಡಿದ್ದಾರೆ.ಧಾರವಾಡಕ್ಕೆ ಪ್ರತಿಷ್ಠಿತ ಐಐಟಿ ಬರಲು ಅವರು ಕಾರಣರಾಗಿದ್ದಾರೆ.2019 ರಲ್ಲಿ ಈ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ್ದ ಪ್ರಧಾನಿಯವರೇ ಈ ಕಟ್ಟಡ ಉದ್ಘಾಟಿಸುತ್ತಿರುವುದು ಸಂತಸದ ಸಂಗತಿಯಾಗಿದೆ.

ಹುಬ್ಬಳ್ಳಿಯ ರೈಲು ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢರ ಹಾಗೂ ಬೆಂಗಳೂರಿನ ರೈಲು ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಹೆಸರಿಟ್ಟ ಶ್ರೇಯಸ್ಸು ಪ್ರಧಾನಿಯವರದ್ದಾಗಿದೆ ಎಂದರು.

*ಸನ್ಮಾನ* ಹಾವೇರಿಯ ಏಲಕ್ಕಿ ಹಾರ,ಮುತ್ತಿನಿಂದ ಅಲಂಕರಿಸಿದ ಪೇಟ ,ಶಾಲು ಹೊದಿಸಿ,ಶ್ರೀ ಸಿದ್ಧಾರೂಢರ ವಿಗ್ರಹ,ಕಲಘಟಗಿಯ ಆಕರ್ಷಕ ತೊಟ್ಟಿಲು ಹಾಗೂ ಧಾರವಾಡ ಪೇಡ ನೀಡಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸತ್ಕರಿಸಲಾಯಿತು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಗೋವಿಂದ ಕಾರಜೋಳ,ಸಿ.ಸಿ.ಪಾಟೀಲ, ವಿ.ಸೋಮಣ್ಣ,ಬಿ.ಎ.ಬಸವರಾಜ, ಶಂಕರ ಪಾಟೀಲ ಮುನೇನಕೊಪ್ಪ,ಮಾಜಿಮುಖ್ಯಮಂತ್ರಿ-ಶಾಸಕ ಜಗದೀಶ್ ಶೆಟ್ಟರ್  ಅನೇಕರು ಉಪಸ್ಥಿತರಿದ್ದರು.

ರಾಷ್ಟ್ರಕ್ಕೆ ವಿವಿಧ ಯೋಜನೆಗಳ ಸಮರ್ಪಣೆ ಹಾಗೂ ಶಂಕುಸ್ಥಾಪನೆ*

*ಧಾರವಾಡ ಐಐಟಿ*

410 ಎಕರೆ ವಿಸ್ತೀರ್ಣದ ವಿಶಾಲ ನಿವೇಶನದಲ್ಲಿ ,852 ಕೋಟಿ ರೂ.ಯೋಜನಾ ವೆಚ್ಚದಲ್ಲಿ ಸ್ಥಾಪನೆಯಾಗಿರುವ ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮೊದಲ ಹಂತದ ಕಟ್ಟಡದ ಉದ್ಘಾಟನೆ.

ಪ್ರಸ್ತುತ ಈ ಸಂಸ್ಥೆಯಲ್ಲಿ 73 ಬೋಧಕರು,35 ಸಿಬ್ಬಂದಿ ಹಾಗೂ 856 ವಿದ್ಯಾರ್ಥಿಗಳಿದ್ದಾರೆ.

ಬಿ-ಟೆಕ್,ಬಿ.ಎಸ್,ಎಂ ಎಸ್,ಎಂ ಟೆಕ್ ಹಾಗೂ ಪಿಹೆಚ್‌ಡಿ ಪದವಿಗಳು ಲಭ್ಯ.

*ವಿಶ್ವದ ಅತಿ ಉದ್ದನೆಯ ರೈಲ್ವೇ ಪ್ಲಾಟ್ ಫಾರ್ಮ್*

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲ್ವೇ ನಿಲ್ದಾಣದಲ್ಲಿ 20 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಪಾದಚಾರಿ ಕೆಳಸೇತುವೆ ಹಾಗೂ 1507 ಮೀ.ಉದ್ದದ ವಿಶ್ವದ ಅತಿ ಉದ್ದನೆಯ ರೈಲ್ವೇ ಪ್ಲಾಟ್ ಫಾರ್ಮ್ ಉದ್ಘಾಟನೆ.

*ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ರೈಲ್ವೇ ಮಾರ್ಗದ ವಿದ್ಯುದೀಕರಣ*

ವಿಜಯನಗರ,ಕೊಪ್ಪಳ,ಗದಗ ,ಧಾರವಾಡ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳ ಮೂಲಕ ಹಾಯ್ದು ಹೋಗುವ 245 ರೈಲ್ವೇ ಕಿ.ಮೀ.ಉದ್ದದ ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ರೈಲ್ವೇ ಮಾರ್ಗದ ವಿದ್ಯುದೀಕರಣ ಕಾಮಗಾರಿ 519 ಕೋಟಿ ರೂ.ವೆಚ್ಚದಲ್ಲಿ ಪೂರ್ಣಗೊಂಡಿದೆ‌.

*ಉನ್ನತೀಕರಣಗೊಂಡ ಹೊಸಪೇಟೆ ರೈಲು ನಿಲ್ದಾಣ*

13 ಕೋಟಿ ರೂ.ವೆಚ್ಚದಲ್ಲಿ ಉನ್ನತೀಕರಣಗೊಂಡಿರುವ ಹೊಸಪೇಟೆ ರೈಲ್ವೇ ನಿಲ್ದಾಣ ಲೋಕಾರ್ಪಣೆ.

*353 ಕೋಟಿ ರೂ.ಗಳ ಸ್ಮಾರ್ಟ್ ಸಿಟಿ ಯೋಜನೆಗಳು*

ನಾಗರಿಕರ ಜೀವನ ಮಟ್ಟ ಸುಧಾರಣೆಗೆ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ 353 ಕೋಟಿ ರೂ.ವೆಚ್ಚದಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ.

*ಶಂಕುಸ್ಥಾಪನೆಗೊಂಡ ಕಾರ್ಯಕ್ರಮಗಳು*

*ಜಲಜೀವನ ಮಿಷನ್ ಬಹುಗ್ರಾಮ ಕುಡಿಯುವ ನೀರು ಯೋಜನೆ*

1042 ಕೋಟಿ ರೂ.ವೆಚ್ಚದಲ್ಲಿ,
86 ಎಂಎಲ್‌ಡಿ ನೀರು ಸಂಸ್ಕರಣಾ ಘಟಕ ನಿರ್ಮಾಣ.ಮಲಪ್ರಭಾ ನದಿಯ ರೇಣುಕಾಸಾಗರ ಜಲಾಶಯದಿಂದ 2 ಲಕ್ಷ ಮನೆಗಳಿಗೆ ಶುದ್ಧೀಕರಿಸಿದ ಕುಡಿಯುವ ನೀರು ಸರಬರಾಜು.

ಜಿಲ್ಲೆಯ 396 ಗ್ರಾಮೀಣ ವಸತಿ ಪ್ರದೇಶಗಳು ಹಾಗೂ ಒಂದು ಪಟ್ಟಣಕ್ಕೆ ಸುಸ್ಥಿರ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಗೆ ಶಂಕುಸ್ಥಾಪನೆ .

*ಕ್ರೀಡಾ ಸಂಕೀರ್ಣ*
ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ 166 ಕೋಟಿ ರೂ.ವೆಚ್ಚದಲ್ಲಿ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ.

*ಜಯದೇವ ಹೃದ್ರೋಗಗಳ ಆಸ್ಪತ್ರೆ*

ಹುಬ್ಬಳ್ಳಿಯ ರಾಯನಾಳ ಬಳಿ 11.36 ಎಕರೆ ಪ್ರದೇಶದಲ್ಲಿ,250 ಕೋಟಿ ರೂ.ವೆಚ್ಚದಲ್ಲಿ ಜಯದೇವ ಹೃದ್ರೋಗಗಳ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಶಂಕುಸ್ಥಾಪನೆ.

*ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ ಯೋಜನೆ*

150 ಕೋಟಿ ರೂ.ವೆಚ್ಚದಲ್ಲಿ ತುಪ್ಪರಿಹಳ್ಳ ಪ್ರವಾಹ ಹಾನಿ ತಡೆಯಲು, ಆಯ್ದ ಭಾಗಗಳಲ್ಲಿ ತಡೆಗೋಡೆ ಹಾಗೂ ವಡ್ಡುಗಳನ್ನು ನಿರ್ಮಾಣಕ್ಕೆ ಚಾಲನೆ ಪ್ರಧಾನಿಯವರು ವೇದಿಕೆಯ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *