ಜಿಲ್ಲೆ

ಧಾರವಾಡ ಜಿಲ್ಲೆಯಲ್ಲಿ ಎಲ್ಲಾ ಹೊರರೋಗಿಗಳಿಗೆ ಕಡ್ಡಾಯ ತಪಾಸಣೆ

ಖಾಸಗಿ ಆಸ್ಪತ್ರೆಗಳಲ್ಲಿ ಬಡರೋಗಿಗಳ  ಉಚಿತ ಪರೀಕ್ಷೆ

ಎಲ್ಲಾ ಹೊರ ರೋಗಿಗಳನ್ನು ತಪಾಸಣೆಗೊಳಪಡಿಸಿ ಕೊರೊನಾ ನಿಯಂತ್ರಿಸಿ  

ಧಾರವಾಡ prajakiran.com : ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗುವ ಒಳರೋಗಿಗಳು ಹಾಗೂ ಎಲ್ಲಾ ಹೊರರೋಗಿಗಳನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸಬೇಕು.

ಖಾಸಗಿ ಆಸ್ಪತ್ರೆಗಳು ತಪಾಸಣೆಗೆ ವಿಧಿಸುವ ಶುಲ್ಕ ಭರಿಸಲು ಸಾಧ್ಯವಾಗದ ರೋಗಿಗಳ ಸ್ವ್ಯಾಬ್ ಸಂಗ್ರಹಿಸಿ ಸರ್ಕಾರದ ಕಿಮ್ಸ್ ಮತ್ತು ಡಿಮ್ಹಾನ್ಸ್ ಪ್ರಯೋಗಾಲಯಗಳಿಗೆ ಕಳುಹಿಸಿದರೆ ಉಚಿತವಾಗಿ ಪರೀಕ್ಷಿಸಿ ವರದಿ ನೀಡಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಹೇಳಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಸಂಜೆ ನಡೆದ ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ತಪಾಸಣೆಯ ಶುಲ್ಕ ಭರಿಸುವ ಸಾಮರ್ಥ್ಯ ಇಲ್ಲದ ಜನರು ಪರೀಕ್ಷೆ ಮತ್ತು ಚಿಕಿತ್ಸೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಚಿಕಿತ್ಸೆಗೆ ದಾಖಲಾಗುವ ಎಲ್ಲಾ ಒಳ ಮತ್ತು ಹೊರ ರೋಗಿಗಳ ಸ್ವ್ಯಾಬ್ ಸಂಗ್ರಹಿಸಿ  ಅವರಿಗೆ ಶುಲ್ಕ ವಿಧಿಸಿಲ್ಲ ಎಂಬ ಲಿಖಿತ ಟಿಪ್ಪಣಿಯೊಂದಿಗೆ ಹುಬ್ಬಳ್ಳಿಯ ಕಿಮ್ಸ್ ಮತ್ತು ಧಾರವಾಡದ ಡಿಮ್ಹಾನ್ಸ್ಗೆ ಕಳುಹಿಸಿಕೊಟ್ಟರೆ ಅಲ್ಲಿ ಸರ್ಕಾರದ ವೆಚ್ಚದಲ್ಲಿಯೇ ಪರೀಕ್ಷೆ ಮಾಡಿ ವರದಿ ನೀಡಲಾಗುವುದು.

ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಯ ಜೀವಗಳು ಅಮೂಲ್ಯವಾಗಿರುವದರಿಂದ ಇದು ಉತ್ತಮ ಕ್ರಮವಾಗಲಿದೆ. ಸೋಂಕಿನ ತ್ವರಿತ ಪತ್ತೆ ಮತ್ತು ಚಿಕಿತ್ಸೆಯಿಂದ ಕೋವಿಡ್ ಮರಣ ಪ್ರಮಾಣ ಇಳಿಮುಖಗೊಳಿಸಬಹುದು.

ಖಾಸಗಿ ಆಸ್ಪತ್ರೆಗಳಲ್ಲಿ ಸ್ವ್ಯಾಬ್ ಸಂಗ್ರಹಣೆ ಸಂದರ್ಭದಲ್ಲಿಯೇ ವ್ಯಕ್ತಿಗಳ ಸಮರ್ಪಕ ವಿಳಾಸ, ಸಂಪರ್ಕ ಸಂಖ್ಯೆ ಮತ್ತು ಜಿಲ್ಲೆಯ ಹೆಸರನ್ನು ನಿಖರವಾಗಿ ದಾಖಲಾಗಿಸಬೇಕು.

ಅನ್ಯ ಜಿಲ್ಲೆಗಳ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಬೇಕು ಆದರೆ ಧಾರವಾಡ ಜಿಲ್ಲೆಯ ಹೆಸರಲ್ಲಿ ನೋಂದಾಯಿಸಬಾರದು. ಅವರ ಸ್ವಂತ ಜಿಲ್ಲೆಯ ಹೆಸರಿನಲ್ಲಿಯೇ ನೋಂದಾಯಿಸಿಕೊಳ್ಳಬೇಕು.

ನೋಂದಣಿ ಮತ್ತು ಎಸ್‌ಆರ್‌ಎಫ್ ಸಂಖ್ಯೆ ಸೃಜನೆಯ ಹಂತದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕು.

ಐಸಿಯುನಲ್ಲಿರುವ ಎಲ್ಲಾ ರೋಗಿಗಳ ಆ್ಯಂಟಿ ಬಯೋಗ್ರಾಮ್ ಮಾಡುವುದು ಕಡ್ಡಾಯವಾಗಿದೆ. ಸೋಂಕಿತ  ರೋಗಿಗಳ ಪ್ರಾಥಮಿಕ ಸಂಪರ್ಕದಲ್ಲಿರುವವರು ಹಾಗೂ ಕುಟುಂಬದ ಸದಸ್ಯರನ್ನು ಕೋವಿಡ್ ತಪಾಸಣೆಗೆ ಒಳಪಡಿಸಬೇಕು ಎಂದರು.

 ವೆಂಟಿಲೇಟರ್ ಮತ್ತು ಹೈ ಫ್ಲೋ ಆಕ್ಸಿಜನ್ ಉಪಕರಣಗಳ ಪೂರೈಕೆ : ಖಾಸಗಿ ಆಸ್ಪತ್ರೆಗಳು ಸರ್ಕಾರದಿಂದ ವೆಂಟಿಲೇಶನ್ ಹಾಗೂ ಹೈ ಫ್ಲೋ ಆಕ್ಸಿಜನ್ ಉಪಕರಣಗಳ ನೆರವು ಬಯಸಿದರೆ ತ್ವರಿತವಾಗಿ ಪೂರೈಸಲಾಗುವುದು.

ಈ ಕಾರ್ಯಕ್ಕಾಗಿ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಎಸ್.ಎಂ. ಹೊನಕೇರಿ ಅವರನ್ನು ಸಂಪರ್ಕಿಸಬಹುದು.

ಸೋಂಕು ದೃಢಪಟ್ಟ ವ್ಯಕ್ತಿಗಳಿಗೆ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲು ನೋಡಲ್ ಅಧಿಕಾರಿಗಳಾದ ಡಾ.ಸುಜಾತಾ ಹಸವಿಮಠ ಹಾಗೂ ಡಾ.ಶಶಿ ಪಾಟೀಲ ಅವರನ್ನು ಖಾಸಗಿ ಆಸ್ಪತ್ರೆಗಳು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

 

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *