ರಾಜ್ಯ

ಧಾರವಾಡದ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿಗೆ ವಿಧಾನ ಪರಿಷತ್ ಗೆ  ನೇಮಿಸಲು ಒತ್ತಡ

ಧಾರವಾಡ prajakiran.com :  ಧಾರವಾಡದ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿಯವರಿಗೆ ವಿಧಾನ ಪರಿಷತ್ ಗೆ  ನೇಮಿಸಲು ಬಿಜೆಪಿ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. ಅಲ್ಲದೆ, ಕೆಲವರು ನೇರವಾಗಿ ಭೇಟಿಯಾಗಿ ಒತ್ತಡ ಹಾಕಲು ಆರಂಭಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಧಾರವಾಡ ಗ್ರಾಮೀಣ ವಿಧಾನ ಸಭಾಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ಶ್ರಮಿಸುತ್ತಿರುವ ಅವರನ್ನು ಜೂನ್ ನಲ್ಲಿ ತೆರವಾಗುವ ಹಲವು ವಿಧಾನ ಪರಿಷತ್ ಸ್ಥಾನಗಳ ಪೈಕಿ ಒಂದನ್ನು ಧಾರವಾಡ ಜಿಲ್ಲೆಗೆ ನೀಡಲೇಬೇಕು ಎಂದು ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಒತ್ತಡ ಹಾಕುತ್ತಿದ್ದಾರೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಯಿಂದ ಹೊರ ಬಂದು ಕೆಜೆಪಿ ಕಟ್ಟಿದಾಗ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಿಂದ ತವನಪ್ಪಅಷ್ಟಗಿಯವರು ಸ್ಪರ್ಧಿಸಿ 25 ಸಾವಿರ ಮತಗಳನ್ನು ಪಡೆದಿದ್ದರು.

ಆನಂತರ ಅವರು ಮರಳಿ ಸೇರ್ಪಡೆ ಗೊಂಡಾಗ ಸೂಕ್ತ ಸ್ಥಾನಮಾನ ನೀಡುವುದಾಗಿ ಅಂದಿನ ಧಾರವಾಡ ಸಂಸದ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು.

ಅದರಂತೆ ಧಾರವಾಡ ಗ್ರಾಮೀಣದಲ್ಲಿ ಬಿಜೆಪಿ ಅಭ್ಯರ್ಥಿ ಆಕಾಂಕ್ಷೆಯನ್ನು ಕೈಬಿಟ್ಟು ಅಮೃತ ದೇಸಾಯಿ ಗೆಲುವಿಗೆ ಕಾರಣವಾಗಿದ್ದರು. ಆನಂತರ ಧಾರವಾಡ  ಲೋಕಸಭಾ ಕ್ಷೇತ್ರದ ಸಂಸದ ಪ್ರಲ್ಹಾದ ಜೋಶಿಯವರ ಗೆಲುವಿಗೂ ಶ್ರಮಿಸಿದ್ದರು. 

ಹೀಗಾಗಿ ಅಂದು  ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂಬ ಕೂಗು ಬಲಗೊಳ್ಳುತ್ತಿದೆ. ಅದಕ್ಕೆ ಶಾಸಕ ಅಮೃತ ದೇಸಾಯಿ ಧ್ವನಿಗೂಡಿಸಿರುವುದು ಆನೆಬಲ ಬಂದಂತಾಗಿದೆ.

ಆ ಮೂಲಕ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಜೋಡೆತ್ತುಗಳೆಂದರೆ ಖ್ಯಾತಿಗಳಿಸಿರುವ ಅಮೃತ ದೇಸಾಯಿ ಹಾಗೂ ತವನಪ್ಪ ಅಷ್ಟಗಿಯವರ ಪ್ರಯತ್ನ ಫಲಗೂಡಿದರೆ ಧಾರವಾಡ ಗ್ರಾಮೀಣದಲ್ಲಿ ಪಕ್ಷ ಇನ್ನಷ್ಟು ಬಲಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ತವನಪ್ಪ ಅಷ್ಟಗಿಯವರನ್ನು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನೇಮಿಸಲು ಬಿಜೆಪಿಯ ಹಲವು ಪದಾಧಿಕಾರಿಗಳು, ಮಂಡಳ ಪ್ರಮುಖರು, ಮುಖಂಡರು ಹಾಗೂ ಗುರು ಹಿರಿಯರು ಕೂಡ ಒಲುವು ತೋರಿಸಿದ್ದಾರೆ.

ಅಲ್ಲದೆ, ಎಲ್ಲಾ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ತವನಪ್ಪಅಷ್ಟಗಿಯವರು ಸರಳ, ಸಜ್ಜನ ರಾಜಕಾರಣಿಯಾಗಿದ್ದು, ವಿಶೇಷವಾಗಿ ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರೊಂದಿಗೆ ನಿಕಟ ಹಾಗೂ ನೇರ ಸಂಪರ್ಕ ಹೊಂದಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ದತ್ತಾ ಡೋರ್ಲೆ ನಂತರ ಜೈನ ಸಮಾಜಕ್ಕೆ ಬಿಜೆಪಿ ಯಾವುದೇ ಸೂಕ್ತ ಸ್ಥಾನ ನೀಡಿಲ್ಲ. ಹೀಗಾಗಿ ಅಷ್ಟಗಿಯವರಿಗೆ ವಿಧಾನ ಪರಿಷತ್ ಗೆ ನೇಮಿಸಿದರೆ ಉತ್ತರ ಕರ್ನಾಟಕ ಭಾಗದ ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಯ ಜೈನ ಸಮಾಜವನ್ನು ಗೌರವಿಸಿದಂತಾಗುತ್ತದೆ ಎಂಬ ಅಭಿಪ್ರಾಯ ಕೂಡ ಕೇಳಿಬರುತ್ತಿದೆ.

ಹೀಗಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ಮುಂದಿನ ನಡೆ ಮೇಲೆ ತವನಪ್ಪ ಅಷ್ಟಗಿಯವರ ಪರಿಷತ್ ನೇಮಕ ನಿರ್ಧಾರವಾಗಲಿದೆ.  

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *