ಜಿಲ್ಲೆ

ನಿರಾತಂಕದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಿರಿ ಎಂದ ಜಿಲ್ಲಾಧಿಕಾರಿ ದೀಪಾ ಚೋಳನ್

ಧಾರವಾಡ prajakiran.com : ರಾಜ್ಯ ಸರ್ಕಾರ ನೀಡಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ (ಎಸ್‌ಓಪಿ) ಪ್ರಕಾರ ಜಿಲ್ಲೆಯಲ್ಲಿ  ಪ್ರಸಕ್ತ ಎಸ್ ಎಸ್ ಎಲ್ ಸಿ   ಪರೀಕ್ಷೆಗಳನ್ನು ಯಶಸ್ವಿಯಾಗಿ ಏರ್ಪಡಿಸಲು ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಸರ್ವ ಸಿದ್ಧತೆಗಳನ್ನು ಧಾರವಾಡ ಜಿಲ್ಲಾಡಳಿತ ಮಾಡಿಕೊಂಡಿದೆ.

ಸಾಮಾಜಿಕ ಅಂತರದ ನಿಯಮದೊಂದಿಗೆ ಆಸನ ವ್ಯವಸ್ಥೆ, ವಿದ್ಯಾರ್ಥಿಗಳು, ಪರೀಕ್ಷಾ ಸಿಬ್ಬಂದಿ, ಅಧಿಕಾರಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಬಳಕೆಗೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

 ಗ್ರಾಮೀಣ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಸಕಾಲಕ್ಕೆ ಆಗಮಿಸಲು ವಾಕರಸಾಸಂ ೨೦೦ ಮಾರ್ಗಗಳಲ್ಲಿ ವಿಶೇಷ ಬಸ್‌ಗಳ ಸಂಚಾರ ನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.



ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸುದ್ದಿಗೋಷ್ಟಿ ಉದ್ದೇಶಿಸಿ  ಮಾತನಾಡಿದರು, ಜಿಲ್ಲೆಯಲ್ಲಿ ೨೭೮೪೧ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ೯೦ ಪರೀಕ್ಷಾ ಕೇಂದ್ರಗಳು ಮತ್ತು ೧೭ ಹೆಚ್ಚುವರಿ ಬ್ಲಾಕ್ ಪರೀಕ್ಷಾ ಕೇಂದ್ರಗಳು ಸೇರಿ ೧೦೭ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.

ಎಲ್ಲಾ ೧೦೭ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ಮೊಬೈಲ್ ಸ್ವಾಧೀನಾಧಿಕಾರಿಗಳು, ೯೦ ಜನ ಕಸ್ಟೋಡಿಯನ್‌ಗಳು,              ೩೪ ಮಾರ್ಗಾಧಿಕಾರಿಗಳು, ೯೦ ಸ್ಥಾನಿಕ ಜಾಗೃತದಳದ ಅಧಿಕಾರಿಗಳು, ಪ್ರತಿ ಕೇಂದ್ರಕ್ಕೆ ಇಬ್ಬರಂತೆ ೧೮೦ ಸ್ಕೌಟ್ಸ್ ಮತ್ತು ಗೈಡ್ಸ ಸ್ವಯಂಸೇವಕರು, ಪ್ರತಿ ಕೇಂದ್ರಕ್ಕೆ ಇಬ್ಬರಂತೆ ೧೮೦  ಪ್ಯಾರಾ ಮೆಡಿಕಲ್ ಸಿಬ್ಬಂದಿ ನಿಯೋಜಿಸಲಾಗಿದೆ.

ಪ್ರತಿ ಪರೀಕ್ಷಾ ಕೇಂದ್ರಕ್ಕೆ ೨೦೦ ಮಕ್ಕಳಿಗೆ ಒಂದರಂತೆ ಥರ್ಮಲ್ ಸ್ಕ್ಯಾನರ್ ಅನುಸಾರ ಒಟ್ಟು ೧೮೪ ಥರ್ಮಲ್ ಸ್ಕ್ಯಾನರ್‌ಗಳು ಶಿಕ್ಷಣ ಇಲಾಖೆಯಿಂದ ಪೂರೈಕೆಯಾಗಿವೆ. ಈಗಾಗಲೇ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ವಿತರಿಸಲಾಗಿದೆ.



ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಾರಿಗೆ ಕುರಿತ ವಿಚಾರಣೆಗಾಗಿ  ಸಹಾಯವಾಣಿ ೧೦೭೭ನ್ನು ಪ್ರಾರಂಭಿಸಲಾಗಿದೆ. ತಾಲೂಕಾ ಮಟ್ಟದಲ್ಲಿಯೂ ಕೂಡ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ ಎಂದರು.

ಪರೀಕ್ಷಾ ಕೇಂದ್ರಗಳ ಕುರಿತು: ವಿದ್ಯಾರ್ಥಿಗಳು ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆಯ ಮುನ್ನಾದಿನ ಅಂದರೆ ಜೂನ್ ೨೪ ರಂದು ಮುಂಜಾನೆ ೧೦-೩೦ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಆಗಮಿಸಿ ಆಸನ ವ್ಯವಸ್ಥೆಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಯಾವುದೇ ಪರೀಕ್ಷಾ ಕೇಂದ್ರವು ಘೋಷಿತ ಕಂಟೈನ್‌ಮೆಂಟ್ ವಲಯದಲ್ಲಿರುವುದಿಲ್ಲ.

 ಯಾವುದೇ ಪರೀಕ್ಷಾ ಕೇಂದ್ರವನ್ನು ಕ್ವಾರಂಟೈನ್ ಕೇಂದ್ರವಾಗಿ ಬಳಕೆ ಮಾಡಿಕೊಂಡಿಲ್ಲ. ಜಿಲ್ಲೆಯ ಒಟ್ಟು ಪರೀಕ್ಷಾ ಕೇಂದ್ರಗಳ ಪೈಕಿ ೪೬ ಶಹರ ಹಾಗೂ ೪೪ ಗ್ರಾಮೀಣ ವಲಯಗಳಲ್ಲಿ ಇರುತ್ತವೆ.

ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಹಾಗೂ ಪ್ರಶ್ನೆ ಪತ್ರಿಕೆಗಳನ್ನು ಖಜಾನೆಗಳಿಂದ ಒಯ್ಯುವಾಗ ಮಾರ್ಗಾಧಿಕಾರಿಗಳ ಜೊತೆಗೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.  ಕಂಟೈನ್‌ಮೆಂಟ್ ವಲಯದಿಂದ ಬರುವ ಮಕ್ಕಳಿಗೆ ಪ್ರತ್ಯೇಕವಾಗಿ ವಿಶೇಷ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದರು.



 ಪರೀಕ್ಷಾ ಕೇಂದ್ರಗಳ ಸ್ಯಾನಿಟೈಸೇಶನ್ :

ಪ್ರತಿ ಪರೀಕ್ಷಾ ಕೇಂದ್ರವನ್ನು ಪರೀಕ್ಷೆಗೆ ೩ ದಿನಗಳ ಮೊದಲು ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಿ ಸ್ವಚ್ಛಗೊಳಿಸಲು ಸಂಬಂಧಿಸಿದ ನಗರ/ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಆದೇಶ ನೀಡಲಾಗಿದೆ. ಈಗಾಗಲೇ ಎಲ್ಲ ಕೇಂದ್ರಗಳನ್ನು ಸ್ಯಾನಿಟೈಜ್ ಮಾಡಲಾಗಿದೆ. 

ಪ್ರತಿ ಪರೀಕ್ಷೆಯ ನಂತರ ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳನ್ನು/ ಪೀಠೋಪಕರಣಗಳನ್ನು ಸ್ಯಾನಿಟೈಸ್ ಮಾಡಲು ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ನಗರ/ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೂಲಕ ಕ್ರಮವಹಿಸಲು ಸೂಚಿಸಲಾಗಿದೆ ಎಂದರು.

ಪ್ರತಿ ಕೊಠಡಿಯಲ್ಲಿ ೧೮-೨೦ ವಿದ್ಯಾರ್ಥಿಗಳಂತೆ ಆಸನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನೀರಿನ ಬಾಟಲಿಯನ್ನು ವಿದ್ಯಾರ್ಥಿಗಳೇ ತಮ್ಮ ಮನೆಯಿಂದ ತರಲು ತಿಳಿಸಲಾಗಿದೆ.



ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ಸ್ನ್ಯಾಕ್ಸ್, ಬಿವರೇಜಗಳ ವ್ಯವಸ್ಥೆಯನ್ನು ಇಸ್ಕಾನ್ ಹಾಗೂ ಇನ್ನಿತರೆ ಸಂಸ್ಥೆಗಳ ವತಿಯಿಂದ ವಿತರಿಸಲಾಗುತ್ತಿದೆ.        

ಹೆಚ್ಚುವರಿ ಕೊಠಡಿ ಮೀಸಲು : ಅನಾರೋಗ್ಯದ ಲಕ್ಷಣ ಕಂಡುಬರುವ ಮಕ್ಕಳಿಗಾಗಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ೨ ಹೆಚ್ಚುವರಿ ಕೊಠಡಿಗಳನ್ನು ಮೀಸಲಿರಿಸಿದೆ. ಇಂತಹ ಕೊಠಡಿಗಳಲ್ಲಿ ಅಭ್ಯರ್ಥಿಗಳ ನಡುವಿನ ಅಂತರ ೬ ಅಡಿಯಿರುತ್ತದೆ.

ಪ್ರತಿ ತಾಲೂಕಿನಲ್ಲಿ ಎರಡು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಕಾಯ್ದಿರಿಸಿ ಅಲ್ಲಿಯೂ ಎಲ್ಲ ಮೂಲಭೂತ ಸೌಲಭ್ಯ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ್ ಎಲ್.ಹಂಚಾಟೆ, ಜಿಲ್ಲಾ ನೋಡಲ್ ಅಧಿಕಾರಿ ಪೂರ್ಣಿಮಾ ಮುಕ್ಕುಂದಿಮಠ, ವಿಷಯ ಪರಿವೀಕ್ಷಕ ಸಂಜಯ್ ಮಾಳಿ ಮತ್ತಿತರರು ಉಪಸ್ಥಿತರಿದ್ದರು.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *