ರಾಜ್ಯ

ರಾಯಚೂರಿನಲ್ಲಿ ಅಕ್ರಮ ಮರಳು ಸಾಗಾಣೆಗೆ ನಕಲಿ ರಾಜಧನ ಚೀಟಿ ಪತ್ತೆ : ಸರ್ಕಾರಕ್ಕೆ ಕೋಟ್ಯಾಂತರ ನಷ್ಟ ಬಯಲು.

ರಾಯಚೂರು prajakiran.com : ಅನ್ಯ ಜಿಲ್ಲೆಯಲ್ಲಿ ರೈತರಿಗೆ ನೀಡಿದ ರಾಜಧನ (ರಾಯಲ್ಟಿ) ಚೀಟಿಗಳು ದೇವದುರ್ಗದ ಅಕ್ರಮ ಮರಳು ದಂಧೆಕೋರರಿಗೆ ಮಾರಾಟ ಮಾಡಿದ ಬಹುದೊಡ್ಡ ಜಾಲ ರಾಯಚೂರಿನಲ್ಲಿ ಪತ್ತೆಯಾಗಿದೆ.

ಸಹಾಯಕ ಆಯುಕ್ತ ಸಂತೋಷ್ ಕಾಮೇಗೌಡ ನೇತೃತ್ವದ ತಂಡ ದೇವದುರ್ಗದಲ್ಲಿ ದಾಳಿ ನಡೆಸಿ ಈ ಜಾಲ ಪತ್ತೆ ಮಾಡಿದೆ.

ಗದಗ, ಬಳ್ಳಾರಿ, ಮತ್ತು ಕೊಪ್ಪಳ ಜಿಲ್ಲೆಯಲ್ಲಿ ರೈತರು ತಮ್ಮ ಹೊಲದಲ್ಲಿ ಮರಳು ಸಾಗಾಣಿಕೆ ಮಾಡಲು ಆಯಾ ಜಿಲ್ಲಾಧಿಕಾರಿಗಳಿಂದ ಪಡೆದ ರಾಜಧನ (ರಾಯಲ್ಟಿ) ಚೀಟಿ ದೇವದುರ್ಗದಲ್ಲಿ ಮರಳು ಸಾಗಾಣಿಕೆಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಸಹಾಯಕ ಆಯುಕ್ತ ಸಂತೋಷ್ ಕಾಮೇಗೌಡ ಗಣಿ ಇಲಾಖೆಯ ಮಂಜುನಾಥ್ ನೇತೃತ್ವದಲ್ಲಿ ದಾಳಿ ಮಾಡಿ ಅಕ್ರಮ ಭೇದಿಸಿದ್ದಾರೆ.

ದೇವದುರ್ಗ ಪಟ್ಟಣದ ಎಸ್ ಬಿಐ ಬ್ಯಾಂಕ್ ಬಳಿಯ ಸಿದ್ಧಲಿಂಗರೆಡ್ಡಿ ಪಾಟೀಲ್ ಅಂಚೆಸುಗೂರು ಇವರ ಔಷಧಿ ವಿತರಣಾ ಮಳಿಗೆ ಮೇಲೆ ದಾಳಿ ನಡೆಸಿದಾಗ ಗದಗ, ಕೊಪ್ಪಳ, ಬಳ್ಳಾರಿ ಜಿಲ್ಲೆಯ ಪಟ್ಟಾ ಭೂಮಿಯಲ್ಲಿ ಮರಳು ಮಾರಾಟ ಮಾಡಲು ಪಡೆದ ಪರವಾನಿಗೆಯ ರಾಜಧನ ಚೀಟಿಗಳು ಪತ್ತೆಯಾಗಿವೆ.

ರೈತರು ತಮ್ಮ ಜಮೀನಿನಲ್ಲಿರುವ ಮರಳು ಮಾರಾಟ ಮಾಡಲು ಗದಗ, ಕೊಪ್ಪಳ, ಬಳ್ಳಾರಿ ಜಿಲ್ಲಾಧಿಕಾರಿಗಳಿಂದ ಪ್ರತಿ ಟನ್ ಗೆ ತೊಂಬತ್ತು(90) ರೂಪಾಯಿಗಳಂತೆ ರಾಜಧನ ಪಾವತಿಸಿ ಮಾರಾಟ ಮಾಡಲು ಪಡೆದ ರಾಜಧನ ಚೀಟಿ (ರಾಯಲ್ಟಿ)ಗಳು ದೇವದುರ್ಗದಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಸುವವರಿಗೆ ಮಾರಾಟ ಮಾಡಿದ್ದು ಈ ದಾಳಿಯಲ್ಲಿ ಪತ್ತೆಯಾಗಿದೆ.

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಬದನಗೋಡ ಗ್ರಾಮದ ಶಶಿಕಾಂತ್ ಎಸ್ ವಡ್ಡರ್, ಅಮರಗೋಳ ಗ್ರಾಮದ ಯಲ್ಲಪ್ಪ ಬಿ ಗುಡ್ಡಗಾಡು, ಹಾಗೂ ಎಂಎಂ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗಂಗನಾಳ ಗ್ರಾಮದ ಶರಣಬಸಪ್ಪ ಸಿ, ಚಂದ್ರ ಶೆಟ್ಟಿ ಸೇರಿದಂತೆ ಕೆಲವರು ತಮ್ಮ ಹೆಸರಿನಲ್ಲಿ ಇರುವ ಪಟ್ಟಾ ಭೂಮಿಯಲ್ಲಿ ಮರಳು ಸಾಗಾಣಿಕೆ ಮಾಡಲು ಸರ್ಕಾರದಿಂದ ಆಯಾ ಜಿಲ್ಲಾಡಳಿತದಿಂದ ರಾಯಲ್ಟಿ ಪಡೆದಿದ್ದು ಅವುಗಳನ್ನು ದೇವದುರ್ಗದ ಮರಳು ದಂಧೆಕೋರರಿಗೆ ಮಾರಾಟ ಮಾಡಿರುವುದು ದಾಳಿ ವೇಳೆ ಪತ್ತೆಯಾಗಿದೆ.

ರೈತರು ತಮ್ಮ ಹೊಲದಲ್ಲಿ ಮರಳು ಮಾರಾಟ ಮಾಡಲು ಕೇವಲ ಟನ್ ಗೆ ತೊಂಬತ್ತು(90) ರುಪಾಯಿಗೆ ಕಡಿಮೆ ದರದಲ್ಲಿ ರಾಜಧನ ನಿಗದಿ ಪಡಿಸುತ್ತಾರೆ.

ಆದರೆ ದೇವದುರ್ಗದಲ್ಲಿ ಪ್ರತಿ ಹತ್ತು ಟನ್ ಮರಳಿಗೆ ೧೫ ಸಾವಿರ ರೂಪಾಯಿಗಳ ರಾಜಧನ ಪಾವತಿಸಬೇಕು.

ಹೀಗಾಗಿ ಗದಗ, ಕೊಪ್ಪಳ, ಬಳ್ಳಾರಿ ಜಿಲ್ಲೆಯಲ್ಲಿ ರೈತರು ಪಡೆದ ಕಡಿಮೆ ದರದ ರಾಯಲ್ಟಿ ಚೀಟಿಗಳ ಮರಳು ಸಾಗಾಣಿಕೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ನಷ್ಟ ಉಂಟು ಮಾಡಿರುವುದು ಬೆಳಕಿಗೆ ಬಂದಿದೆ.

ಈ ದಾಳಿಯಲ್ಲಿ ಪತ್ತೆಯಾದ 307 ರಾಯಲ್ಟಿ ಚೀಟಿಗಳಿಂದ 3 ಲಕ್ಷ ಮೊತ್ತ ಮಾತ್ರ ಪಾವತಿಸಲಾಗಿದೆ. ಆದರೆ ರಾಯಚೂರು ಜಿಲ್ಲೆಯಲ್ಲಿ ಮರಳು ದರಕ್ಕೆ ಲೆಕ್ಕಾಚಾರ ಮಾಡಿದರೆ ಸುಮಾರು ನಲವತ್ತು(40) ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಮರಳು ಕಡಿಮೆ ದರದ ರಾಯಲ್ಟಿ ಚೀಟಿ ನೀಡಿ ಮರಳು ಮಾರಾಟ ಮಾಡಿರುವುದನ್ನು ಅಂದಾಜಿಸಲಾಗಿದೆ.

ಈ ರೀತಿ ಎಷ್ಟು ದಿನಗಳಿಂದ ಅಕ್ರಮ ದಂಧೆ ನಡೆಸುತ್ತಿದ್ದರು ಎನ್ನುವ ಬಗ್ಗೆ ತನಿಖೆ ನಡೆಸಿದಾಗ ಕೋಟ್ಯಾಂತರ ರಾಯಲ್ಟಿ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗಿರುವುದು ಲೆಕ್ಕಕ್ಕೆ ಸಿಗಲಿದೆ. ದಾಳಿಯಲ್ಲಿ ಕಂಪ್ಯೂಟರ್, ಪ್ರಿಂಟರ್ ಮತ್ತಿತರ ಸಾಮಗ್ರಿ ಜಪ್ತಿ ಮಾಡಿಕೊಂಡಿದೆ.

ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ದಾಳಿ ಸಂದರ್ಭದಲ್ಲಿ ತಹಸೀಲ್ದಾರ್ ಮಧುರಾಜ್, ಗಣಿ ಇಲಾಖೆ ಮಂಜುನಾಥ್, ಸೈಯದ್ ಫಸಿಲ್, ಪಿಎಸ್ ಐ ರಂಗಯ್ಯ, ಕಂದಾಯ ನಿರೀಕ್ಷಕ ರಂಗಯ್ಯ ಮತ್ತಿತರಿದ್ದರು.

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿಸಿಎಂ ಲಕ್ಷ್ಮಣ ಸವದಿ ಇತ್ತಿಚೆಗೆ
ಕೆಡಿಪಿ ಸಭೆಯಲ್ಲಿ ಮರಳು ಸಾಗಣೆ, ಮಟ್ಕಾ ದಂಧೆ ತಡೆಯುವಲ್ಲಿ ವಿಫಲವಾದರೆ ಅದಕ್ಕೆ ಜಿಲ್ಲಾಡಳಿತವನ್ನೇ ಹೊಣೆಯಾಗಿಸುವ ಎಚ್ಚರಿಕೆ ನೀಡಿದ ಎರಡನೇ ದಿನದಲ್ಲಿ ಈ ಅಕ್ರಮ ಬಯಲಾಗಿರುವುದು ಗಮನಾರ್ಹವಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *