ರಾಜ್ಯ

ಹುಬ್ಬಳ್ಳಿ ರೈಲ್ವೆ ಸ್ವಚ್ಛತಾ ಕಾರ್ಮಿಕರ ಸಮಸ್ಯೆ : ಶೀಘ್ರವೇ ಹೈಕೋರ್ಟ್‍ಗೆ ವರದಿ

ಧಾರವಾಡ ಪ್ರಜಾಕಿರಣ.ಕಾಮ್ ಫೆ.9: ಹುಬ್ಬಳ್ಳಿಯ ರೈಲ್ವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರನ್ನು ಮಾನವೀಯ ದೃಷ್ಟಿಯಿಂದ ಹಾಗೂ ಕರ್ಮಚಾರಿ ಕಲ್ಯಾಣ ದೃಷ್ಟಿಯಿಂದ ಪುನ: ಕೆಲಸಕ್ಕೆ ಸೇರಿಸಿಕೊಳ್ಳುವಂತೆ ವರದಿಯನ್ನು ಫೆ.13 ರೊಳಗಾಗಿ ಹೈಕೋರ್ಟ್‍ಗೆ ಸಲ್ಲಿಸಲಾಗುವುದೆಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಕೋಟೆ ತಿಳಿಸಿದರು.

ರೈಲ್ವೆ ಸ್ವಚ್ಛತಾ ಕಾರ್ಮಿಕರ ಕುಂದುಕೊರತೆ ಆಲಿಸಿ ವರದಿ ನೀಡುವಂತೆ ಆಯೋಗಕ್ಕೆ ರಾಜ್ಯ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಇಂದು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಹಾಗೂ ರೈಲ್ವೆ ಅಧಿಕಾರಿ ಆಸಿಫ್ ಆಫೀಜ್ ಜೊತೆಯಲ್ಲಿ ಈ ಕುರಿತು ಸಭೆ ನಡೆಸಲಾಯಿತು.

ಸಧ್ಯದ ಈ ಸಮಸ್ಯೆಯು ಗುತ್ತಿಗೆದಾರರು ಹಾಗೂ ಕಾರ್ಮಿಕರ ನಡುವಿನ ಸಮಸ್ಯೆಯಾಗಿದ್ದು, ಸಂಬಂಧಿಸಿದ ರೈಲ್ವೆ ಗುತ್ತಿಗೆದಾರರು ಕೆಲಸಕ್ಕೆ ಎಷ್ಟು ಕಾರ್ಮಿಕರನ್ನು ತೆಗೆದುಕೊಳ್ಳಬೇಕೆನ್ನುವುದು ಔಟ್‍ಕಮ್ ಆಧಾರಿತ ಗುತ್ತಿಗೆ ಅವಲಂಬಿತವಾಗಿದೆ.

ಗುತ್ತಿಗೆದಾರನ ಮೇಲೆ ಅನೇಕ ಆಪಾದನೆಗಳಿದ್ದು, ಇದನ್ನು ರೈಲ್ವೆ ಮುಖ್ಯ ಕಾರ್ಮಿಕ ಅಧಿಕಾರಿ ಪರಿಶೀಲನೆ ಮಾಡುತ್ತಿರುವ ಬಗ್ಗೆ ಹಿರಿಯ ವಿಭಾಗೀಯ ಸಂಪನ್ಮೂಲ ಅಧಿಕಾರಿ ಆಸೀಫ್ ಆಫೀಜ್ ಅಧ್ಯಕ್ಷರ ಗಮನಕ್ಕೆ ತಂದರು.

ಲಕ್ನೋದ ಗುತ್ತಿಗೆದಾರ ಕಿಂಗ್ಸ್ ಸೆಕ್ಯೂರಿಟಿ ಏಜೆನ್ಸಿಯು ಕಳೆದ ನಾಲ್ಕು ವರ್ಷಗಳಲ್ಲಿ ಕಾರ್ಮಿಕರಿಗೆ ಇಎಸ್‍ಐ, ಪಿಎಫ್ ಕನಿಷ್ಟ ವೇತನ ಹಾಗೂ ಬೋನಸ್‍ನ್ನು ನೀಡದೇ ಕಾನೂನು ಉಲ್ಲಂಘಿಸಿರುವ ಬಗ್ಗೆ ಆರೋಪಗಳಿದ್ದು, ಗುತ್ತಿಗೆದಾರ ಪರವಾನಿಗೆ ಸಹ ಹೊಂದಿರದ ಬಗ್ಗೆ ಆಯೋಗದ ಪರವಾದ ವಕೀಲ ರಮೇಶ ಅಧ್ಯಕ್ಷರ ಗಮನಕ್ಕೆ ತಂದರು.

ಗುತ್ತಿಗೆದಾರನು 92 ಕಾರ್ಮಿಕರ ಪೈಕಿ ಕೇವಲ 54 ಕಾರ್ಮಿಕರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಂಡಿದ್ದು, ಉಳಿದ ಕಾರ್ಮಿಕರ ಕುಟುಂಬ ಸ್ಥಿತಿಗತಿ ದಯನೀಯವಾಗಿದ್ದು, ಉಳಿದವರನ್ನು ಸಹ ಸೇರಿಸಿಕೊಳ್ಳುವ ಬಗ್ಗೆ ಫೆ.13 ರೊಳಗಾಗಿ ಹೈಕೋರ್ಟ್‍ಗೆ ವರದಿ ನೀಡಲಾಗುವುದೆಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಶಿವಣ್ಣ ಕೋಟಿ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಧಾರವಾಡ ಜಿಲ್ಲಾ ಸಫಾಯಿ ಕರ್ಮಚಾರಿ ಜಿಲ್ಲಾಜಾಗೃತಿ ಉಸ್ತುವಾರಿ ಸಮಿತಿ ನಾಮನಿರ್ದೇಶಿತ ಸದಸ್ಯರಾದ ರೇನುಕಪ್ಪಾ ಕೇಲೂರ, ವಿದ್ಯಾ ನರಸಪ್ಪನವರ, ಹನುಮಂತಪ್ಪ ಮಾಲಪಲ್ಲಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ನಂತರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕುರಿತು 12 ಜನ ಪೌರ ಕಾರ್ಮಿಕರ ವೈಯಕ್ತಿಕ ದೂರು ಪ್ರಕರಣಗಳ ಬಗ್ಗೆ ಸಭೆ ನಡೆಯಿತು.

ಕೆಲ ಕಾರ್ಮಿಕರಿಗೆ ಪಿಎಫ್, ಇಎಸ್‍ಐ ಕನಿಷ್ಟ ವೇತನ, ಕೆಲಸದಿಂದ ತೆಗೆದುಹಾಕಿರುವ ಕುರಿತು ಚರ್ಚಿಸಲಾಯಿತು.

ಮಹಾನಗರಪಾಲಿಕೆ ಜಂಟಿ ಆಯುಕ್ತರಾದ ಶಂಕರಾನಂದ ಬನಶಂಕರಿ ಹಾಗೂ ಕಾರ್ಮಿಕ ಅಧಿಕಾರಿಗಳು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *