ಧಾರವಾಡ prajakiran.com : ಧಾರವಾಡದಲ್ಲಿ ದಿನದಿಂದ ದಿನಕ್ಕೆ ಕರೊನಾ ಅಟ್ಟಹಾಸ ಮುಂದುವರೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಹೊಂದಿಕೊಂಡಿರುವ ಕೆಲಗೇರಿ ಗ್ರಾಮವನ್ನು ಗ್ರಾಮಸ್ಥರೇ ಸ್ವಯಂ ಪ್ರೇರಿತವಾಗಿ ಲಾಕಡೌನ್ ಮಾಡಲು ನಿರ್ಧಾರ ಕೈಗೊಂಡಿದ್ದಾರೆ.
ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯರೆಲ್ಲ ಸೇರಿಕೊಂಡು ಇಂತಹದೊಂದು ನಿರ್ಧಾರ ಕೈಗೊಂಡಿದ್ದು, ಗ್ರಾಮದ ಹಿರಿಯರು ಹಾಗೂ ಯುವಕರು ತಾವೇ ಸುತ್ತಾಡಿ ಎಲ್ಲವನ್ನೂ ಬಂದ್ ಮಾಡಿಸಿದ್ದಾರೆ.
ಅಲ್ಲದೆ, ಈ ಕುರಿತು ಸ್ಥಳೀಯ ನಿವಾಸಿಗಳಿಗೆ ಮಾಹಿತಿ ನೀಡಿ, ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಒಂದು ವಾರದ ಮಟ್ಟಿಗೆ ಗ್ರಾಮವನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಇಲ್ಲಿಗೆ ಬೇರೆ ಕಡೆಯಿಂದ ಯಾರೂ ಬರಬಾರದು ಹಾಗೂ ಯಾರೂ ಅಂಗಡಿ ಮುಂಗಟ್ಟುಗಳನ್ನು ತೆರೆಯಬಾರದು ಎಂದು ಮೈಕ್ ಮೂಲಕ ಘೋಷಣೆ ಮಾಡಿದ್ದಾರೆ.
ಸ್ಥಳೀಯರು ಕೂಡ ಇದಕ್ಕೆ ಸಂಪೂರ್ಣ ಸಹಕಾರ ನೀಡುವ ಮೂಲಕ ಸ್ವಯಂಪ್ರೇರಿತ ಲಾಕ್ ಡೌನ್ ಯಶಸ್ವಿಗೆ ಸಹಕರಿಸುತ್ತಿರುವುದು ಸ್ವಲ್ಪ ಸಮಾಧಾನದ ಸಂಗತಿಯಾಗಿದೆ.