ರಾಜ್ಯ

ಧಾರವಾಡ ಜಿಲ್ಲೆಯಾದ್ಯಂತ ಮುಂಗಾರು ಹಂಗಾಮು ಬಿತ್ತನೆ ಬೀಜ ಪೂರೈಕೆ ಕೊರತೆ ಇಲ್ಲ

ಧಾರವಾಡ prajakiran.com : ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಎಲ್ಲ ರೈತ ಸಂಪರ್ಕ ಕೇಂದ್ರಗಳು ಮತ್ತು ಹೆಚ್ಚುವರಿ ಮಳಿಗೆಗಳ ಮೂಲಕ ಬಿತ್ತನೆ ಬೀಜಗಳನ್ನು ಪೂರೈಸಲಾಗುತ್ತಿದೆ.

ಸಾಕಷ್ಟು ಪ್ರಮಾಣದಲ್ಲಿ ಬೀಜ ದಾಸ್ತಾನು ಸಂಗ್ರಹವಿದೆ. ರೈತರಿಗೆ ಯಾವುದೇ ಕೊರತೆಯಾಗುವುದಿಲ್ಲ. ರೈತರ ದಾಖಲೆಗಳನ್ನು ಗಣಕೀಕೃತ ಎಂಐಎಸ್ ವ್ಯವಸ್ಥೆಗೆ ದಾಖಲಿಸಲು ಸಮಯ ತೆಗೆದುಕೊಳ್ಳುತ್ತಿರುವುದರಿಂದ ವಿತರಣೆಯಲ್ಲಿ ಅಲ್ಲಲ್ಲಿ ವಿಳಂಬವಾಗುತ್ತಿದೆ.

ಇದನ್ನು ಸರಿಪಡಿಸಲು ಹೆಚ್ಚುವರಿ ಡಾಟಾ ಎಂಟ್ರಿ ಆಪ್‌ರೇಟರ್‌ಗಳನ್ನು ನಿಯೋಜಿಸಲಾಗುತ್ತಿದೆ. ರೈತರು ಯಾವುದೇ ಆತಂಕಕ್ಕೆ ಒಳಗಾಗದೇ ಬೀಜಗಳನ್ನು ಪಡೆದು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.





ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮುಂಗಾರು ಹಂಗಾಮಿನ ಬಿತ್ತನೆ ಚಟುವಟಿಕೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈವರೆಗೆ ಮುಂಗಾರು ಪೂರ್ವ ಮಳೆಯು ವಾಡಿಕೆಗಿಂತ ಅಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಹೆಸರುಕಾಳು ಮತ್ತು ಸೋಯಾಬೀನ್ ಬೀಜಗಳಿಗೆ ಸಾಕಷ್ಟು ಬೇಡಿಕೆ ಇದೆ.

ಬೇಡಿಕೆಗನುಸಾರವಾಗಿ ಬೀಜ ಪೂರೈಸಬೇಕು. ವಿತರಣಾ ಕೇಂದ್ರಗಳಲ್ಲಿ ಅನಗತ್ಯವಾಗಿ ಜನಸಂದಣಿ ಉಂಟಾಗುವುದನ್ನು ತಡೆಯಲು ರೈತರಿಗೆ ಮುಂಚಿತವಾಗಿಯೇ ಟೋಕನ್ ನೀಡಿ, ನಿಗದಿತ ದಿನಾಂಕಗಳಂದು ಆಗಮಿಸಿ ಬೀಜ ಪಡೆಯಲು ಸೂಚಿಸಬೇಕು.

ನಿಗದಿಪಡಿಸಿದ ದಿನಗಳಂದು ಬೀಜ ದಾಸ್ತಾನು ಇರುವಂತೆ ಕ್ರಮ ವಹಿಸಬೇಕು. ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಬಾರದು.

ಅಧಿಕ ಬೀಜದ ಬೇಡಿಕೆ ಇದ್ದರೆ ಕೂಡಲೇ ಸರ್ಕಾರಕ್ಕೆ ಕೋರಿಕೆ ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಲಭ್ಯವಿರುವ ಜಿಲ್ಲೆಗಳಿಂದ ಖರೀದಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.



ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ: ಬಿ.ಸಿ. ಸತೀಶ್ ಮಾತನಾಡಿ, ಮುಂಗಾರುಮಳೆ ಆಧರಿಸಿ ಹೆಸರುಕಾಳಿನ ಬೇಡಿಕೆ ನಿರೀಕ್ಷೆಗಿಂತ ಹೆಚ್ಚಳವಾಗಬಹುದು.

ಸೋಯಾಬೀನ್ ಬೀಜಗಳಿಗೆ ಬೇಡಿಕೆ ಇದೆ. ಶೇಂಗಾ ಮತ್ತಿತರ ಬೆಳೆಗಳ ಬೀಜಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರುವುದನ್ನು ಖಚಿತಪಡಿಸಿಕೊಳ್ಳಬೇಕು.

ಏಕಾಏಕಿಯಾಗಿ ರೈತರಿಂದ ಬೇಡಿಕೆ ಅಧಿಕವಾಗಿ, ಬೀಜ ವಿತರಣಾ ಕೇಂದ್ರಗಳಲ್ಲಿ ಜನದಟ್ಟಣೆ ಉಂಟಾಗುವ ಸಂಭವ ಕಂಡು ಬಂದರೆ ವಿವಿಧ ಇಲಾಖೆಗಳಲ್ಲಿರುವ ಸಿಬ್ಬಂದಿಯ ಸಹಕಾರ ಪಡೆದು ಪರಿಸ್ಥಿತಿಯನ್ನು ಅಚ್ಟುಕಟ್ಟಾಗಿ ನಿರ್ವಹಿಸಲು ಯೋಜಿಸಿರಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪೂರ ಮಾತನಾಡಿ, ಜಿಲ್ಲೆಯ ೧೪ ರೈತ ಸಂಪರ್ಕ ಕೇಂದ್ರಗಳು ಹಾಗೂ ೧೫ ಹೆಚ್ಚುವರಿ ಮಳೆಗೆಗಳಲ್ಲಿ ಮುಂಗಾರು ಹಂಗಾಮಿನ ಬೀಜ ವಿತರಣೆ ಕಾರ್ಯಗಳು ನಡೆಯಲಿವೆ.



ಕಳೆದ ವರ್ಷ ೨೫೫.೨೫ ಕ್ವಿಂಟಾಲ್ ಹೆಸರುಕಾಳು ಮಾರಾಟವಾಗಿತ್ತು. ೨೦೧೮-೧೯ ರಲ್ಲಿ ೯೦೫.೪ ಕ್ವಿಂಟಾಲ್ ಗರಿಷ್ಠ ಮಾರಾಟವಾಗಿತ್ತು.

ಪ್ರಸಕ್ತ ಸಾಲಿನಲ್ಲಿ ಈವರೆಗೆ ೭೩೨ ಕ್ವಿಂಟಾಲ್ ಮಾರಾಟವಾಗಿದೆ. ಒಟ್ಟು ೯೭೮.೯ ಕ್ವಿಂಟಾಲ್ ಹೆಸರುಕಾಳು ಬೀಜಗಳಿಗೆ ಬೇಡಿಕೆ ನಿರೀಕ್ಷಿಸಲಾಗಿದೆ.

ಕಳೆದ ವರ್ಷ ೧೨೭೬೫.೨೫ ಕ್ವಿಂಟಾಲ್ ಸೋಯಾಬೀನ್ ಮಾರಾಟವಾಗಿದೆ. ೨೦೧೮-೧೯ ರಲ್ಲಿ  ೨೧೩೨೨.೩ ಗರಿಷ್ಠ ಪ್ರಮಾಣದಲ್ಲಿ ಮಾರಾಟವಾಗಿತ್ತು.

ಪ್ರಸಕ್ತ ಸಾಲಿನಲ್ಲಿ ಈವರೆಗೆ ೮೦೮೮.೭ಕ್ವಿಂಟಾಲ್ ಮಾರಾಟವಾಗಿದೆ. ಒಟ್ಟು ೧೪೦೩೦ ಕ್ವಿಂಟಾಲ್ ಸೋಯಬೀನ್ ಬೀಜಗಳಿಗೆ ಬೇಡಿಕೆ ನಿರೀಕ್ಷಿಸಲಾಗಿದೆ.

ಕಳೆದ ವರ್ಷ ೧೫೮೯.೧ ಕ್ವಿಂಟಾಲ್ ಶೇಂಗಾಬೀಜ ಮಾರಾಟವಾಗಿದೆ. ಇದು ಗರಿಷ್ಠ ಪ್ರಮಾಣದ  ಮಾರಾಟವಾಗಿತ್ತು.

ಪ್ರಸಕ್ತ ಸಾಲಿನಲ್ಲಿ ಈವರೆಗೆ ೮೮೩.೫ ಕ್ವಿಂಟಾಲ್ ಮಾರಾಟವಾಗಿದೆ. ಒಟ್ಟು ೧೬೬೪ ಕ್ವಿಂಟಾಲ್ ಶೇಂಗಾ ಬೀಜಗಳಿಗೆ ಬೇಡಿಕೆ ನಿರೀಕ್ಷಿಸಲಾಗಿದೆ ಎಂದರು.

ಮುಂಗಾರಿನ ಜೂನ್ ಅಂತ್ಯದವರೆಗೆ ೧೦೨೦೦ ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದೆ. ಪ್ರಸ್ತುತ ೧೨೫೪೪ ಮೆಟ್ರಿಕ್‌ಟನ್ ರಸಗೊಬ್ಬರಗಳು ದಾಸ್ತಾನು ಇದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ವಿವರಿಸಿದರು.

ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ತೋಟಗಾರಿಕೆ ಉಪನಿರ್ದೇಶಕ ಡಾ: ರಾಮಚಂದ್ರ ಮಡಿವಾಳರ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಎಲ್ಲ ತಹಶೀಲ್ದಾರರು ಸಭೆಯಲ್ಲಿ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *