ಅಂತಾರಾಷ್ಟ್ರೀಯ

ನಾನು ಯಾವತ್ತೂ ಜಾತಿ ರಾಜಕಾರಣ ಮಾಡುವವನಲ್ಲ. ಸಾಮಾಜಿಕ ನ್ಯಾಯ ನನ್ನ ಉಸಿರು

*ಶೆಫರ್ಡ್ ಇಂಟರ್ ನ್ಯಾಷನಲ್ ಈ ಸಮಾವೇಷದ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ*

*ಇಡಿ ದೇಶದ ಬಾಂದವರ ಒತ್ತಾಸೆಯಂತೆ ನಾನು ಐತಿಹಾಸಿಕ ಸಮಾವೇಶಕ್ಕೆ ಬಂದು ಸನ್ಮಾನ ಸ್ವೀಕರಿಸಿದ್ದೇನೆ*

*ಸಮಾಜದ ಎಲ್ಲಾ ಜಾತಿ-ವರ್ಗದ ಜನಗಳು ಸಂಘಟಿತರಾಗಿ ಸಂವಿಧಾನಬದ್ದ ಹಕ್ಕುಗಳನ್ನು ಪಡೆದುಕೊಳ್ಳಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ*

ಬೆಳಗಾವಿ ಪ್ರಜಾಕಿರಣ.ಕಾಮ್ ಅ 3: ಸಮಾಜದ ಎಲ್ಲಾ ಜಾತಿ-ವರ್ಗದ ಜನಗಳು ಸಂಘಟಿತರಾಗಿ ಸಂವಿಧಾನಬದ್ದ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ನೆಹರೂ ನಗರದ ಜಿಲ್ಲಾ ಕ್ರೀಡಾ ಮೈದಾನದಲ್ಲಿ ನಡೆದ ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ನ 9ನೇ ರಾಷ್ಟ್ರೀಯ ಸಮಾವೇಷದಲ್ಲಿ ಮಾತನಾಡಿದರು.

ನಾನು ಯಾವತ್ತೂ ಜಾತಿ ಮಾಡುವವನಲ್ಲ. ಸಾಮಾಜಿಕ ನ್ಯಾಯ ನನ್ನ ಉಸಿರು. ಅವಕಾಶ ವಂಚಿತ ಜಾತಿಗಳ ಜನ ತಮ್ಮ ಸಂವಿಧಾನಬದ್ದ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತ ಸಮಾವೇಶ ನಡೆಸುವುದು ತಪ್ಪಲ್ಲ ಎಂದು ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಹೇಳಿದ್ದರು. ಅದರಂತೆ ಈ ಸಮಾವೇಷ ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳು ಟೀಕಾಕಾರರಿಗೆ ಉತ್ತರ ನೀಡಿದರು.

ನಾನು ಈ ಜಾತಿ ವ್ಯವಸ್ಥೆಗೆ ಯಾವತ್ತಿದ್ದರೂ ವಿರುದ್ಧ. ಆದರೆ ಅಶಕ್ತ ಜನ ಸಮುದಾಯಗಳು ತಮ್ಮ ಸಂವಿಧಾನಬದ್ದ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತರಾಗುವುದು ತಪ್ಪಲ್ಲ ಎಂದು ನಂಬಿದ್ದೇನೆ ಎಂದರು.

ಅಶಕ್ತ ಸಮುದಾಯಗಳು ಸಂಘಟಿತರಾಗದೇ ಇರುವುದರಿಂದ ಮತ್ತು ತಮ್ಮಲ್ಲಿ ನಾಯಕತ್ವ ಬೆಳೆಸಿಕೊಳ್ಳದೇ ಇರುವುದರಿಂದ ಅವರ ಪಾಲಿನ ಹಕ್ಕುಗಳು ಮತ್ತು ರಾಜಕೀಯ ಅಧಿಕಾರದಿಂದ ವಂಚಿತವಾಗಿವೆ ಎಂದು ವಿವರಿಸಿದರು.

ನಮ್ಮ ಸಮುದಾಯಕ್ಕೆ ರಾಜಕೀಯ ಇತಿಹಾಸ ಇದೆ. ಸಂಸ್ಕೃತಿಕ ಭವ್ಯತೆ ಇದೆ. ಹಕ್ಕ ಬುಕ್ಕರಿಂದ ಹಿಡಿದು ಅಹಲ್ಯಾಬಾಯಿ ಹೋಳ್ಕರ್ ವರೆಗೂ ನಮಗೊಂದು ಚರಿತ್ರೆ ಇದೆ.

ಆದರೆ ಸಂಘಟನೆ ಇಲ್ಲದಿದ್ದರಿಂದ ನಮಗೆ ಸಲ್ಲಬೇಕಾಗಿದ್ದು ಸಲ್ಲುತ್ತಿರಲಿಲ್ಲ. ಸಂಘಟನೆ ಇಲ್ಲದಿದ್ದರೆ ಕಾಗಿನೆಲೆ ಗುರುಪೀಠ, ಸಂಸ್ಥಾನ ಆಗುತ್ತಿರಲಿಲ್ಲ. ಕಾಗಿನೆಲೆ ಪೀಠ ಒಂದು ಜಾತಿಯ ಮಠ ಅಲ್ಲ. ಎಲ್ಲಾ ಶೋಷಿತ ಸಮುದಾಯಗಳಿಗೆ ಸೇರಿದ್ದು ಕಾಗಿನೆಲೆ ಪೀಠ ಎಂದರು.

ಪ್ರತಿ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬೆಳೆದರೆ ಮಾತ್ರ ಸಮಸಮಾಜದ ನಿರ್ಮಾಣ ಸಾಧ್ಯ. ಎಲ್ಲರಿಗೂ ಅವರವರ ಪಾಲಿನ ಅಧಿಕಾರ , ಅವಕಾಶ ಸಿಗಬೇಕು. ಈ ಸಾಮಾನ್ಯ ಜ್ಞಾನ ನಮ್ಮನ್ನು ಟೀಕಿಸುವವರಿಗೆ ಇಲ್ಲವಾಗಿದೆ ಎಂದರು.

ನಮ್ಮದು ಹೇಳಿ ಕೇಳಿ ಜಾತಿ ಮತ್ತು ತಾರತಮ್ಯದಿಂದ ಕೂಡಿರುವ ಸಮಾಜ. ಹೀಗಾಗಿ ಅವಕಾಶಗಳ ಹಂಚಿಕೆಯಲ್ಲೂ ತಾರತಮ್ಯ ಇರುತ್ತದೆ. ಇವನ್ನೆಲ್ಲಾ ಸರಿದೂಗಿಸಬೇಕಾದರೆ ಸಂಘಟನೆ, ಸಮಾವೇಶಗಳು ಅಗತ್ಯ ಎಂದರು.

ನಾನು ರೂಪಿಸಿದ ಐದು ಗ್ಯಾರಂಟಿ ಯೋಜನೆಗಳು ಒಂದು ಸಮಾಜಕ್ಕೆ, ಒಂದು ಧರ್ಮಕ್ಕೆ, ಒಂದು ಜಾತಿಗೆ ಸೀಮಿತವಾದವುಗಳಲ್ಲ. ಸರ್ವ ಜಾತಿ ಜನಗಳ ಬದುಕಿಗೆ ಅನುಕೂಲ ಕಲ್ಪಿಸುತ್ತಿವೆ ಎಂದು ಮುಖ್ಯಮಂತ್ರಿಗಳು ಉದಾಹರಿಸಿದರು.

ಕಾಗಿನೆಲೆ ಕನಕ ಗುರು ಪೀಠದ ಶ್ರೀ ಶ್ರೀ ನಿರಂಜನಾನಂದ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಸಿದ್ದರಾಮಾನಂದಪುರಿ ಸ್ವಾಮೀಜಿ ಹಾಗೂ ಅರ್ಜುನಾಭಾಯಿಪುರಿ ಸ್ವಾಮೀಜಿಯವರುಗಳ ದಿವ್ಯ ಸನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.

ಹರಿಯಾಣದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಸಮಾವೇಷ ಉದ್ಘಾಟಿಸಿದ ಕಾರ್ಯಕ್ರಮವನ್ನು ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ನ ಅಧ್ಯಕ್ಷರಾದ ಮಾಜಿ ಮಂತ್ರಿ ಹೆಚ್.ವಿಶ್ವನಾಥ್ ಅವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿಯ ರಾಜ್ಯ ಸಚಿವ ಫಗ್ಗಾನ್ ಸಿಂಗ್ ಕುಲಾಸ್ತೆ, ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಗೋವಾ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಚಂದ್ರಕಾಂತ್ ಬಾಬು ಕಾವಲೇಕರ್, ಮಹಾರಾಷ್ಟ್ರ ರಾಜ್ಯದ ಮಾಜಿ ಸಚಿವ ಮಹದೇವ್ ಜನಕಾರ್, ದತ್ತಾತ್ರೇಯ ಭರ್ನೆ, ರಾಮ ಶಂಕರ್ ಶಿಂದೆ, ಶೆಫರ್ಡ್ ಇಂಟರ್ ನ್ಯಾಷನಲ್ ಉಪಾಧ್ಯಕ್ಷ ಹೆಚ್.ಎಂ.ರೇವಣ್ಣ, ಮಾಜಿ ಸಚಿವ ಬಂಡೆಪ್ಪ ಕಾಶಂಪುರ್, ಆಂಧ್ರ. ಪ್ರದೇಶ ರಾಜ್ಯದ ಸಚಿವೆ ಕೆ.ವಿ.ಉಷಾಶ್ರೀ ಚರಣ್, ಮಾತಾ ಅಹಿಲ್ಯಾಬಾಯಿ ಹೋಳ್ಕರ್ ಅವರ ಮೊಮ್ಮಗ ಭೂಷಣ್ ರಾಜೆ ಹೋಳ್ಕರ್, ಗುಜರಾತ್ ರಾಜ್ಯದ ಮುಖಂಡರಾದ ಸಾಗರ್ ರಾಯ್ಕ ಸೇರಿ 60 ಕ್ಕೂ ಹೆಚ್ಚು ಮಂದಿ ನಾನಾ ರಾಜ್ಯಗಳ ಕುರುಬ ಮತ್ತು ಗೋಪಾಲಕ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *