ರಾಜ್ಯ

ಮೂರು ನಾಲ್ಕು ತಿಂಗಳು ಕಾಲ ಶಾಲೆ ಆರಂಭ ಬೇಡವೆಂದ ವೈದ್ಯರ ಪತ್ರ ವೈರಲ್

ಬೆಂಗಳೂರು prajakiran.com : ರಾಜ್ಯಾದ್ಯಂತ ಶಾಲೆಗಳ ಆರಂಭಕ್ಕೆ ಸಂಬಂಧಿಸಿ ವೈದ್ಯರೊಬ್ಬರು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಬರೆದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅದರ ಪೂರ್ಣ ರೂಪ ಇಲ್ಲಿದೆ.

ಮುಖ್ಯ ಮಂತ್ರಿ ಬಿ.ಎಸ್. ಯಡ್ಡಿಯೂರಪ್ಪ , ಶಿಕ್ಷಣ ಸಚಿವ ಸುರೇಶಕುಮಾರ್ , ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್ ಅವರಿಗೆ ಬರೆದ ಪತ್ರದ ಸಾರಾಂಶ  ಹೀಗಿದೆ.

ಮಾನ್ಯರೇ, ನಾನು ಒಬ್ಬ ವೈದ್ಯನಾಗಿ ನಾನು ಈ ಕೆಳಗಿನ ವಿಷಯಗಳನ್ನು ತಮ್ಮ ಅವಗಾಹನೆಗೆ ತರಲು ಬಯಸುತ್ತೇನೆ.

ಈಗ ದೇಶ ಮತ್ತು ರಾಜ್ಯದಲ್ಲಿರುವ ಕರೋನಾ ಸಾಂಕ್ರಾಮಿಕ ರೋಗದ ತೀವ್ರತೆ ಮತ್ತು ಅದರಿಂದಾಗುವ ಪರಿಣಾಮಗಳ ಅರಿವು ತಮಗೆಲ್ಲರಿಗೂ ಇದೆ.

ಕರೋನಾ ಸೋಂಕಿತರು ದಿನದಿಂದ ದಿನಕ್ಕೆ ಹೆಚ್ಚುತ್ತಲಿರುವುದು ತಮ್ಮ ಗಮನಕ್ಕೆ ಬಂದಿರಬಹುದಾಗಿ ನಂಬಿದ್ದೇನೆ. ಅಲ್ಲದೆ ಸೋಂಕಿತರ ಮರಣ ಪ್ರಮಾಣವು ಇನ್ನೂ ಹತೋಟಿಗೆ ಬಂದಿರುವುದಿಲ್ಲ.

ಈ ರೋಗವು ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಹರಡಬಹುದೆಂದು ಲಭ್ಯವಿರುವ ಅಂಕಿ ಅಂಶಗಳ ಮೂಲಕ ತಮ್ಮ ಗಮನಕ್ಕೆ ಬಂದಿರಬಹುದು.

ಅಷ್ಟೇ ಅಲ್ಲದೆ ನಮ್ಮಲ್ಲಿ ಅಲ್ಲದಿದ್ದರೂ ಸಹ ಅನ್ಯ ಕಡೆಗಳಲ್ಲಿ ಸಣ್ಣ ಮಕ್ಕಳ ಜೀವಹಾನಿಯಾಗಿರುವುದೂ ಸಹ ತಾವು ತಿಳಿದುಕೊಂಡಿರಬಹುದು.

ಈ ಪೀಠಿಕೆಯನ್ನು ನಾನು ಏಕೆ ಹೇಳುತ್ತಿರುವೆನೆಂದರೆ, ಈಗ ನಮ್ಮ /ನಿಮ್ಮ ಸರಕಾರವು ತೆಗೆದುಕೊಂಡ ಅಥವಾ ತೆಗೆದುಕೊಳ್ಳಲಿರುವ ಶಾಲಾ ಪುನರಾರಂಭದ ನಿರ್ಣಯದ ಬಗ್ಗೆ. ಶೈಕ್ಷಣಿಕ ವರ್ಷದ ಆರಂಭದ ಸಂಬಂಧ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿರುವಿರಾಗಿ ತಾವು ತಿಳಿಸುತ್ತೀರಿ.

ಆದರೆ ಈ ಮಹಾಮಾರಿ ರೋಗವು ಇನ್ನೂ ಏರುಗತಿಯಲ್ಲಿ ಇರುವ ಈ ಸಂದರ್ಭದಲ್ಲಿ ಶಾಲೆಗಳನ್ನು ಆರಂಭಿಸುವುದು ಎಷ್ಟು ಸೂಕ್ತ ಎಂಬುದನ್ನು ಮತ್ತೊಮ್ಮೆ ಆಲೋಚಿಸಿ. ಆರೋಗ್ಯ ಇಲಾಖೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೋಶದಿಂದ ಹಸಿರು ನಿಶಾನೆ ನಿಮಗೆ ಸಿಗಬಹುದು ಅಥವಾ ಸಿಗುವಂತೆ ಮಾಡಲೂ ತಾವುಗಳು ಸಮರ್ಥರಿದ್ದೀರಿ.

ಆದರೆ ಈ ಕಾಲಘಟ್ಟದಲ್ಲಿ ಶಾಲೆಗಳನ್ನು ಆರಂಭಿಸುವುದು ಸಮಂಜಸವಲ್ಲವೆಂದು ಬಹುಜನರ ಮತ್ತು ಪೋಷಕರ ಅಭಿಪ್ರಾಯವಾಗಿರಬಹುದು.

ದಯವಿಟ್ಟು ಆದಷ್ಟು ಹೆಚ್ಚಿನ ಪೋಷಕರ ಅಭಿಪ್ರಾಯವನ್ನು ಸಂಗ್ರಹಿಸಿ ಒಂದು ಒಳ್ಳೆಯ ನಿರ್ಣಯಕ್ಕೆ ಬರಬೇಕಾಗಿ ನನ್ನ ಒಂದು ಭಿನ್ನಹ.

ಅಲ್ಲದೆ ತಮ್ಮ ಮಂತ್ರಿಮಂಡಲದಲ್ಲಿಯೇ ಇರುವ ವೈದ್ಯ ಡಾ. ಸುಧಾಕರ್ ಅವರನ್ನೊಳಗೊಂಡ ಕೆಲವು ವೈದ್ಯರ ಸಮಿತಿಯನ್ನು ನಿರ್ಮಿಸಿ ಅವರ ಅಭಿಪ್ರಾಯವನ್ನೂ ಕೇಳಿ ತಿಳಿದುಕೊಳ್ಳಿರಿ.

ಮಕ್ಕಳಿಗೆ ಶಾಲೆಯಲ್ಲಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಕೈ ತೊಳೆಯುವುದು, ಸ್ಯಾನಿಟೈಸರ್ ಉಪಯೋಗಿಸುವುದು ಇತ್ಯಾದಿಗಳನ್ನು ಕಲಿಸಿಕೊಡಬಹುದು.

ಆದರೆ ಮಕ್ಕಳು ಮಕ್ಕಳೇ ಆಗಿರುತ್ತಾರೆ. ಅವರಿಂದ ಈ ಕೆಲಸಗಳನ್ನು ಪ್ರತಿದಿನ ಮಾಡಿಸುವುದು ಕಷ್ಟದ ಕೆಲಸ. ಅಲ್ಲದೆ ಅಧ್ಯಾಪಕರಿಗೆ ಪಾಠವನ್ನು ಕಲಿಸುವುದನ್ನು ಬಿಟ್ಟು ಇದರಲ್ಲಿಯೇ ಕಾಲಹರಣ ಮಾಡಬೇಕಾಗಿ ಬರಬಹುದು.

ಮಕ್ಕಳಲ್ಲಿ ಬೆಳೆದು ಬಂದಿರುವ ಕೈ ಕೈ ಹಿಡಿಯುವುದು, ಪೆನ್ಸಿಲ್, ಪುಸ್ತಕ, ಪೆನ್ನುಗಳನ್ನು ಅದಲು ಬದಲು ಮಾಡುವುದು ಮುಂತಾದವುಗಳನ್ನು ಒಂದೇ ಸಲ ನಿಲ್ಲಿಸುವಂತೆ ಮಾಡುವುದು ಕಷ್ಟದ ಕೆಲಸ.

ಅಲ್ಲದೆ ಒಂದು ತರಗತಿಯಲ್ಲಿ ಒಂದು ಮಗುವಿಗೆ ಸೋಂಕಾದರೂ ಆ ತರಗತಿಯ ಮತ್ತು ಶಾಲೆಯ ಇತರ ಮಕ್ಕಳಿಗೂ ಅಲ್ಲದೆ ಅಧ್ಯಾಪಕರಿಗೂ ಹರಡುವ ಸಾಧ್ಯತೆ ಇದೆ.

ನಂತರ ಕೆಲವು ದಿನಗಳ ಕಾಲ ಶಾಲೆಯನ್ನು ಸೀಲ್ ಡೌನ್ ಮಾಡಬೇಕಾಗಿ ಬರಬಹುದು. ಅಷ್ಟೇ ಅಲ್ಲದೆ ಮನೆಯಲ್ಲಿ ಮಕ್ಕಳನ್ನು ಕೆಲವು ದಿನಗಳವರೆಗೆ ಬೇರ್ಪಡಿಸಿ ಇಡುವುದೂ ಅಸಾಧ್ಯದ ಮಾತು.

ಎಲ್ಲಾ ಮಕ್ಕಳಿಗೆ ತಮ್ಮದೇ ಆದ ವಾಹನವಿರಲಾರದು ಅವರು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಬೇಕಾಗಬಹುದು. ಇದು ಎಷ್ಟೊಂದು ಸುರಕ್ಷಿತ ಎಂಬುದೇ ಪ್ರಶ್ನೆ !

ಈಗ ಯಾವ ಪೋಷಕನೂ ಶಾಲೆ ಬೇಗನೇ ಆರಂಭ ಮಾಡಿರೆಂದು ತಮ್ಮ ದುಂಬಾಲು ಬಿದ್ದಿರಲಿಕ್ಕಿಲ್ಲ. ಈಗಲೇ ಆನ್ ಲೈನ್ ಪಾಠಗಳು ನಿರಾತಂಕವಾಗಿ ನಡೆಯುತ್ತಿರಬಹುದೆಂದು ನನ್ನ ಭಾವನೆ.

ಇಂತಹ ಹೊತ್ತಿನಲ್ಲಿ ಇಷ್ಟು ಬೇಗನೇ ಶಾಲೆ ಗಳನ್ನು ಆರಂಭ ಮಾಡುವುದರಲ್ಲಿ ಬೇರೇನಾದರೂ ಕಾರಣಗಳಿರಬಹುದೇ ಎಂದು ನಮಗೆಲ್ಲರಿಗೆ ಸಂಶಯ ಬರುವುದು ಸ್ವಾಭಾವಿಕ.

ಶಾಲಾ ಮಂಡಳಿಯವರ ಲಾಬಿಗೆ ಮಣಿದು ಈ ನಿರ್ಣಯವನ್ನು ತೆಗೆದುಕೊಂಡಿರಬಹುದೇ ಎಂಬ ಎಂಬ ಅನುಮಾನ ಯಾರಿಗಾದರೂ ಬರದೇ ಇರಲಾರದು.

ಈ ಎಲ್ಲಾ ಕಾರಣಗಳಿಂದ ಕಡಿಮೆ ಪಕ್ಷ ಇನ್ನೂ ಮೂರು ನಾಲ್ಕು ತಿಂಗಳುಗಳ ಕಾಲವಾದರೂ ಆರಂಭ ಮಾಡುವುದು ಖಂಡಿತವಾಗಿಯೂ ಸೂಕ್ತವಲ್ಲ.

ಶಾಲೆಯನ್ನು ಆರಂಭ ಮಾಡಿದರೆ ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಬೇರೆ ಮಾರ್ಗವಿಲ್ಲ. ಅವರು ಈಗ ತಮ್ಮ ತಂದೆ ತಾಯಿಯವರೊಂದಿಗೆ ಮನೆಯಲ್ಲಿ ನಿಶ್ಚಿಂತೆಯಿಂದ ಇದ್ದಾರೆ.

ಒಂದು ವೇಳೆ ಈ ನಿರ್ಣಯದಿಂದ ಏನಾದರೂ ಆಗಬಾರದ ಗಂಡಾಂತರ ಸಂಭವಿಸಿದರೆ ಇದಕ್ಕೆ ತಾವೇ ನೇರ ಹೊಣೆಗಾರರಾಗುತ್ತೀರೆಂದು ಮರೆಯದಿರಿ.

✍ ಡಾ.‌ ಎಂ. ಆರ್.‌ ನಾಯಕ್

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *