ಅಂತಾರಾಷ್ಟ್ರೀಯ

ಹುಬ್ಬಳ್ಳಿ ರೈಲ್ವೆ ನಿಲ್ದಾಣ ಇನ್ನು ಸಿದ್ಧಾರೂಢ ರೈಲ್ವೆ ಸ್ಟೇಷನ್

ಹುಬ್ಬಳ್ಳಿ prajakiran.com : ಉತ್ತರ ಕರ್ನಾಟಕ ಭಾಗದ ಪ್ರಮುಖ ರೈಲು ನಿಲ್ದಾಣವಾದ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮಿಗಳ ಹೆಸರನ್ನು ಇಡಬೇಕು ಎಂಬ ಹುಬ್ಬಳ್ಳಿಗರ ಹಲವು ವರ್ಷಗಳ ಬೇಡಿಕೆಯನ್ನು ಕೇಂದ್ರದ ಎನ್​ಡಿಎ ಸರ್ಕಾರ ಕೊನೆಗು ಮಾನ್ಯ ಮಾಡಿದೆ.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಧೀನ ಕಾರ್ಯದರ್ಶಿ ಲಲಿತಾ ಟಿ. ಹೆದಾವೂ ಅವರು ಈ ಕುರಿತು ಕರ್ನಾಟಕದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಇತ್ತೀಚೆಗೆ ಪತ್ರ ಬರೆದಿದ್ದು, ಹುಬ್ಬಳ್ಳಿ ರೈಲು ನಿಲ್ದಾಣವನ್ನು ಶ್ರೀ ಸಿದ್ಧಾರೂಢ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಲು ಕೇಂದ್ರದ ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2019ರ ನವೆಂಬರ್ 22ರಂದು ಈ ಕುರಿತು ಕೇಂದ್ರಕ್ಕೆ ಬರೆದಿದ್ದ ಪತ್ರವನ್ನೂ ಅವರು ಪ್ರಸ್ತಾಪಿಸಿದ್ದಾರೆ.

ರಾಜ್ಯ ಸರ್ಕಾರವು ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ರೈಲು ನಿಲ್ದಾಣ ಎಂದು ಮರುನಾಮಕರಣಗೊಳಿಸಿದ ಮೇಲೆ ಅದನ್ನು ದೇವನಾಗರಿ (ಹಿಂದಿ), ಇಂಗ್ಲಿಷ್ ಮತ್ತು ರಾಜ್ಯ ಭಾಷೆ ಕನ್ನಡದಲ್ಲಿ ಹೇಗೆ ಬರೆಯಬೇಕು ಎಂಬ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸುವಂತೆಯೂ ಅವರು ಕೋರಿದ್ದಾರೆ.

ರಾಜ್ಯ ಸರ್ಕಾರವು ಮರುನಾಮಕರಣದ ಕುರಿತು ರಾಜ್ಯಪತ್ರದಲ್ಲಿ ಪ್ರಕಟಿಸಿದ ನಂತರ ಇಲ್ಲಿಯ ನಿಲ್ದಾಣವು ಶ್ರೀ ಸಿದ್ಧಾರೂಢ ರೈಲು ನಿಲ್ದಾಣ ಎಂದು ಕರೆಯಲ್ಪಡಲಿದೆ.

ಹುಬ್ಬಳ್ಳಿಯ ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢರ ಹೆಸರು ಇಡಬೇಕು ಎಂದು ಶ್ರೀ ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸುತ್ತ ಬಂದಿತ್ತು.  

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೂ ಶ್ರೀ ಸಿದ್ಧಾರೂಢ ಮಠ ಧರ್ಮದರ್ಶಿ ಮಂಡಳಿ ಹಾಗೂ ಸಾರ್ವಜನಿಕರ ಮನವಿ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.   

ನೈಋತ್ಯ ರೈಲ್ವೆಯ ಕೇಂದ್ರ ಕಚೇರಿಯನ್ನೂ ಹೊಂದಿರುವ ಈ ನಗರದಲ್ಲಿರುವ ರೈಲು ನಿಲ್ದಾಣಕ್ಕೆ ಶತಮಾನದ ಇತಿಹಾಸವಿದೆ.

ಇಲ್ಲಿಯ ರೈಲು ನಿಲ್ದಾಣಕ್ಕೆ ಈ ಮೊದಲು ಇಂಗ್ಲಿಷ್​ನಲ್ಲಿ ‘ಹುಬ್ಳಿ ಸ್ಟೇಷನ್’ ಎಂದು ಹೆಸರಿತ್ತು. 5 ವರ್ಷದ ಹಿಂದೆ ಅದನ್ನು ಸರ್ಕಾರಿ ದಾಖಲೆಗಳಲ್ಲಿಯ ಸೂಕ್ತ ತಿದ್ದುಪಡಿಗಳ ಮೇರೆಗೆ ‘ಹುಬ್ಬಳ್ಳಿ’ ಎಂದು ಮರುನಾಮಕರಣ ಮಾಡಲಾಯಿತು.

ಈಗ, ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳ ನಾಮಕರಣಕ್ಕೆ ಕಾಲ ಕೂಡಿ ಬಂದಿದೆ. ಶ್ರೀ ಸಿದ್ಧಾರೂಢರು ನೆಲೆ ನಿಂತಿದ್ದರಿಂದ ಹುಬ್ಬಳ್ಳಿಯ ಪಾವಿತ್ರ್ಯ ಹೆಚ್ಚಿದೆ. ಅದ್ವೈತ ಸಾಮ್ರಾಟ ಸಿದ್ಧಾರೂಢರ ದರ್ಶನಕ್ಕೆ ಬಾಲಗಂಗಾಧರ ತಿಲಕರು, ಮಹಾತ್ಮ ಗಾಂಧಿ ಸೇರಿ ಅನೇಕ ಗಣ್ಯರು ಬಂದಿದ್ದರು.

ಸಿದ್ಧಾರೂಢ ಮಠಕ್ಕೆ ಕರ್ನಾಟಕ ಮಾತ್ರವಲ್ಲದೆ, ಅಕ್ಕಪಕ್ಕದ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ. ಮಹಾನ್ ಆಧ್ಯಾತ್ಮ ಸಾಧಕ ಗುರು ಸಿದ್ದಾರೂಢರ ಹೆಸರನ್ನು ರೈಲು ನಿಲ್ದಾಣಕ್ಕೆ ಇಡಲು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿರುವುದು ಸಹಜವಾಗಿ ಈ ಭಾಗದಲ್ಲಿ ಹರ್ಷಕ್ಕೆ ಕಾರಣವಾಗಿದೆ.

ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ ಮೇಲೆ ನಿಲ್ದಾಣದ ಫಲಕ ಮತ್ತು ದಾಖಲೆಗಳಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣ ಎಂದು ಬದಲಾವಣೆ ಮಾಡಲಾಗುವುದು ಎಂದು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *