ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನವಾಗಿ ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕಾಲ ಕಳೆಯುತ್ತಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಲಾಯಿತು .
ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾರ್ಯಮೂರ್ತಿ ಕೆ. ನಟರಾಜನ್ ಅವರು ಅರ್ಜಿ ವಿಚಾರಣೆಯ ವಾದ ಪ್ರತಿವಾದ ವನ್ನು ಎಪ್ರಿಲ್ 15 ಮಧ್ಯಾಹ್ನಕ್ಕೆ ಮುಂದೂಡಿ ಮಹತ್ವದ ಆದೇಶ ಹೊರಡಿಸಿದರು.
ಈ ಹಿಂದೆ ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ಕೆ. ನಟರಾಜನ್ ಅವರು ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದರು.
ಇದೀಗ ಸಿಬಿಐ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಮತ್ತೆ ಅವರ ಎದುರು ಜಾಮೀನು ಅರ್ಜಿ ವಿಚಾರಣೆಗೆ ಬಂದಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಸಿಬಿಐ ಅಧಿಕಾರಿಗಳ ಪರ ವಕೀಲರು ಏನೆಲ್ಲಾ ತಕರಾರು ಹಾಗೂ ಮಾಜಿ ಸಚಿವ
ವಿನಯ ಕುಲಕರ್ಣಿ ಪರ ವಕೀಲರು
ಎನೆಲ್ಲಾ ಪ್ರತಿ ವಾದ ಮಂಡಿಸಲಿದ್ದಾರೆ ಎಂಬುದರ ಮೇಲೆ ಅವರಿಗೆ ಜಾಮೀನು ನೀಡಬೇಕಾ ಬೇಡವಾ ಎಂಬುದನ್ನು ಹೈಕೋರ್ಟ್ ನ್ಯಾಯಮೂರ್ತಿ ಕೆ. ನಟರಾಜನ್ ಅವರು ನಿರ್ಧರಿಸಲಿದ್ದಾರೆ.
ಈಗಾಗಲೇ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಧಾರವಾಡ ಜಿಲ್ಲೆಯ ಮೂರನೇ ಅಧಿಕ ಹಾಗೂ ಸಿಬಿಐ ವಿಶೇಷ ನ್ಯಾಯಾಲಯ, ಧಾರವಾಡ ಹೈಕೋರ್ಟ್ ಮತ್ತು ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.