ರಾಜ್ಯ

ಗಜೇಂದ್ರಗಡದಲ್ಲಿ ಜೋರಾಗಿದೆ “ಪಡಿತರ ಅಕ್ಕಿ ಮಾಫಿಯಾ”

ಸರ್ಕಾರದ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ

ಅಕ್ರಮಕ್ಕೆ ಕೋಟೆನಾಡು ಹಾಟ್ ಸ್ಪಾಟ್

ಪ್ರಬಲ ರಾಜಕೀಯ ಮುಖಂಡರದ್ದೇ ಅಭಯಹಸ್ತ

ಕೈಕಟ್ಟಿ ಕುಳಿತ ಅಧಿಕಾರಿಗಳು

ಮಂಜುನಾಥ ಎಸ್. ರಾಠೋಡ

ಗದಗ prajakiran.com :  ಪಡಿತರ ಅಕ್ಕಿಯನ್ನು ರಾಜಕೀಯ ಮುಖಂಡರ ರಾಜಾಶ್ರಯದಲ್ಲಿ ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿದ್ದು, ಗಜೇಂದ್ರಗಡ ನಗರವೇ ಅಕ್ರಮಕ್ಕೆ ಹಾಟ್ ಸ್ಪಾಟ್ ಆಗಿದೆ‌.

ಈ ಪಡಿತರ ಅಕ್ಕಿ ಗಜೇಂದ್ರಗಡ ಮೂಲಕ ನೆರೆ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟ ಆಗಿದೆ. ಮಹಾರಾಷ್ಟ್ರಕ್ಕೆ ಗಜೇಂದ್ರಗಡದಿಂದ ಬಡವರಿಗೆ ನೀಡಿದ ಪಡಿತರ ಅಕ್ಕಿ ಅಕ್ರಮವಾಗಿ ಸಾಗಾಟವಾಗುತ್ತಿದ್ದರೂ ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆ ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದೆ.

ಮಾಫಿಯಾದವರು ಇಲ್ಲಿ ಕಡಿಮೆ ಬೆಲೆಗೆ ಧಾನ್ಯವನ್ನು ಖರೀದಸಿ ಹೆಚ್ಚಿನ ಬೆಲೆಗೆ ಮಹಾರಾಷ್ಟ್ರದಲ್ಲಿ ಮಾರಾಟ ಮಾಡಿದ್ದಾರೆ.

ರವಿವಾರ ಗಜೇಂದ್ರಗಡ ದಿಂದ ಮಹಾರಾಷ್ಟ್ರ ಕ್ಕೆ ಸಾಗಿಸಲು ಸಿದ್ಧವಾಗಿದ್ದ ಅನ್ನಭಾಗ್ಯ ಯೋಜನೆಯ ೧೧೦ ಕ್ವಿಂಟಲ್ ಪಡಿತರ ಅಕ್ಕಿಯನ್ನು ಬಾಗಲಕೋಟಿ ನವನಗರದ ಎಪಿಎಂಸಿಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಅಲ್ಲದೆ, ಗರೀಬ್ ಕಲ್ಯಾಣ ಹಾಗೂ ಅನ್ನಭಾಗ್ಯದ ಅಕ್ಕಿಯನ್ನು ಕಳ್ಳ ಸಾಗಣೆ ಮಾಡುತ್ತಿರುವ ಕುರಿತು ನ.೧೭ ರಂದು ಕಾಂಗ್ರೆಸ್ ಮುಖಂಡರು ಪತ್ತೆ ಹಚ್ಚಿ, ಸಾಗಾಣಿಕೆ ಮುಂದಾಗಿದ್ದ ಲಾರಿ ಸಹಿತ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗುವಂತೆ ಮಾಡಿದರು.

ಬಳಿಕ ಗದಗನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದೇ ಹೆಚ್ಚು ಎಂಬುದು ಕಾಂಗ್ರೆಸ್ ನವರ ಆರೋಪ.

ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ ನೆರವಾಗುವ ದೃಷ್ಠಿಯಿಂದ ಸರ್ಕಾರ ಅಕ್ಕಿ, ಬೆಳೆ ಹಾಗೂ ಗೋಧಿಯನ್ನು ವಿತರಣೆ ಮಾಡಿತ್ತು.

ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿದ ಜನರಿಗೆ ಆಹಾರ ವಿತರಣೆ ಮಾಡಲಾಗಿತ್ತು. ಇದನ್ನು ದಂಧೆಕೋರರು ಅಕ್ರಮವಾಗಿ ಸಾಗಾಟಕ್ಕೆ ಮುಂದಾಗಿದ್ದಾರೆ.

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ನಡುವಿನ ಜನರ ಓಡಾಟಕ್ಕೆ ಪಾಸ್ ಕಡ್ಡಾಯ ಮಾಡಲಾಗಿದೆ.

ಆದರೆ, ಆಹಾರ ಸಾಮಗ್ರಿಗಳ ಸಾಗಾಟಕ್ಕೆ ಯಾವುದೇ ಅಡೆತಡೆ ಇಲ್ಲ. ಹೀಗಾಗಿ ಇದನ್ನು ಬಳಸಿಕೊಂಡ ದಂಧೆಕೋರರು ಅಕ್ರಮ ಅಕ್ಕಿಯನ್ನು ಸಾಗಾಟ ಮಾಡಿ ಇದೀಗ ಸಿಕ್ಕಿ ಬಿದ್ದಿದ್ದಾರೆ.

 ರಾಜ್ಯದಲ್ಲಿ ಎಗ್ಗಿಲ್ಲದೇ ಅಕ್ಕಿ ಮಾಫಿಯಾ ನಡೆಯುತ್ತಿದೆ. ಇತ್ತಿಚೆಗೆ ಗದಗ ಬೆಟಗೇರಿಯ ಮೂರು ಗೋದಾಮುಗಳ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ೮೦ ಟನ್‌ಗೂ ಹೆಚ್ಚು ಅಕ್ಕಿ ಅಕ್ರಮ ದಾಸ್ತಾನು ವಶಪಡಿಸಿಕೊಂಡಿದ್ದಾರೆ.

ಕೊಪ್ಪಳ ತಾಲೂಕಿನ ಹೊಸಗೊಂಡಬಾಳ ಗ್ರಾಮದಲ್ಲಿ ಪಡಿತರ ಧಾನ್ಯಗಳನ್ನು ಅಕ್ರಮವಾಗಿ ಸಾಗಿಸಿದ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಡಳಿತದ ಅಧಿಕಾರಿಗಳು, ಗ್ರಾಮದ ೧೦ ಮನೆಗಳ ಮೇಲೆ ದಾಳಿ ನಡೆಸಿ ೧೧,೬೬,೪೯೦ ರೂ. ಮೌಲ್ಯದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ಇದಲ್ಲದೆ ಜಿಲ್ಲೆಯ ಹಲವು ಕಡೆ ಇಂಥ ದಂಧೆ ಪತ್ತೆಯಾಗಿದೆ. ಮೈಸೂರಿನ ನಂಜನಗೂಡಿನ ಅಕ್ಕಿ ಗಿರಣಿಯೊಂದರ ಗೋದಾಮಿನಲ್ಲಿಅಕ್ರಮವಾಗಿ ಸಂಗ್ರಹಿಸಲಾಗಿದ್ದ ೩.೫ ಟನ್ ತೂಕದ ಪಡಿತರ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರುವ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಗೊಳಿಸಲಾಗುವುದು.

ಜತೆಗೆ, ಪಡಿತರ ಅಕ್ಕಿಯನ್ನು ಮಾರಿಕೊಳ್ಳುವ ಗ್ರಾಹಕರ ‘ಪಡಿತರ ಚೀಟಿ’ಯನ್ನು ರದ್ದುಪಡಿಸುವ ಸಂಬಂಧ ಹೊಸ ಕಾನೂನು ತರಲು ಚಿಂತನೆ ನಡೆಸಲಾಗಿದೆ,” ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತರಾದ ಡಾ. ಶಮ್ಲಾಇಕ್ಬಾಲ್ ಹೇಳಿದ್ದಾರೆ

ಕೆಲವು ನ್ಯಾಯಬೆಲೆ ಅಂಗಡಿಯವರೂ ಅಕ್ರಮ ದಾಸ್ತಾನು ಮಾಡಿ ವ್ಯಾಪಾರಿಗಳಿಗೆ ಮಾರಿಕೊಳ್ಳುತ್ತಿದ್ದಾರೆ. ಇನ್ನು ಕೆಲವು ಕಡೆ ಮದ್ಯಕ್ಕಾಗಿ ಪಡಿತರ ಮಾರುತ್ತಿರುವುದೂ ಗಮನಕ್ಕೆ ಬಂದಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *