ರಾಜ್ಯ

ಗರಗ ಮಡಿವಾಳೇಶ್ವರ ಮಠದ ಉತ್ತರಾಧಿಕಾರಿ ವಿವಾದ : ಮಠಧೀಶರ ಧರಣಿ

*ತಾರಕಕ್ಕೇರಿದ ಗರಗ ಮಡಿವಾಳೇಶ್ವರ ಮಠದ ಉತ್ತರಾಧಿಕಾರಿ ನೇಮಕ ವಿವಾದ*

*ನಾಡಿನ ವಿವಿಧ ಮಠಾಧೀಶರಿಂದ ಗರಗ ಮಠದಲ್ಲಿ ಧರಣಿ, ಕಾನೂನು ಹೋರಾಟಕ್ಕೆ ಕೂಡ ನಾವು ಸಿದ್ದ ಎಂದ ಸ್ವಾಮೀಜಿ*

*ಕೇವಲ ದೇಸಾಯಿ ಮನೆತನದ ಟ್ರಸ್ಟ್ ಗೆ ತೀವ್ರ ವಿರೋಧ* 

*ಅಶೋಕ ದೇಸಾಯಿ ಮನವೊಲಿಕೆಗೆ ಒಪ್ಪದ ಮಠಾಧೀಶರು*

*ನಾಳೆಯೇ ನೂತನ ಉತ್ತರಾಧಿಕಾರಿ ಪ್ರಶಾಂತ ದೇವರು ಪುರಪ್ರವೇಶ*

ಧಾರವಾಡ ಪ್ರಜಾಕಿರಣ.ಕಾಮ್ :ಉತ್ತರ ಕರ್ನಾಟಕ ಭಾಗದ ಲಕ್ಷಾಂತರ ಭಕ್ತ ಸಮೂಹದ ಆರಾಧ್ಯ ದೈವ  ಧಾರವಾಡ ತಾಲೂಕಿನ ಗರಗ ಗ್ರಾಮದ ಪವಾಡ ಪುರುಷ ಮಡಿವಾಳೇಶ್ವರ ಮಠದ ಉತ್ತರಾಧಿಕಾರಿ ನೇಮಕ ವಿವಾದ ಇದೀಗ ತಾರಕಕ್ಕೇರಿದೆ.

ಗರಗ ಮಡಿವಾಳೇಶ್ವರ ಮಠಕ್ಕೆ ಹಿಂದಿನಿಂದಲೂ ವೀರಶೈವ ಲಿಂಗಾಯತ ಸಮಾಜದವರನ್ನೇ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿಕೊಂಡು ಬರಲಾಗಿದ್ದು, ಇದೀಗ ಜಂಗಮ ಸಮಾಜದವರನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡುತ್ತಿರುವುದು ಸರಿಯಲ್ಲ ಹಾಗೂ ಈ ದೇವಸ್ಥಾನದ ಟ್ರಸ್ಟ್ ಕಮಿಟಿಯಲ್ಲಿ ದೇಸಾಯಿ ಕುಟುಂಬದವರ ಜೊತೆ ಬೇರೆಯವರನ್ನೂ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ರಾಯಭಾಗ, ಜಮಖಂಡಿ, ಬೈಲಹೊಂಗಲ, ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಯ ಲಿಂಗಾಯತ ಮಠಾಧೀಶರು ಗರಗ ಮಠದಲ್ಲಿ ಹೋರಾಟ ಆರಂಭಿಸಿದರು.

ದೇವಸ್ಥಾನದ ಕಾರ್ಯಾಧ್ಯಕ್ಷ ಅಶೋಕ ದೇಸಾಯಿ ಹಾಗೂ ಸದಸ್ಯರೊಂದಿಗೆ ಕೆಲ ಕಾಲ ಸಭೆ ನಡೆಸಿ, ಮನವೊಲಿಸಿದರು.

ಚೆನ್ನಬಸವ ಸ್ವಾಮೀಜಿಗಳು ಲಿಂಗೈಕ್ಯರಾದ ನಂತರ ಪ್ರಶಾಂತ ದೇವರನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಅಲ್ಲದೇ ಚೆನ್ನಬಸವ ಸ್ವಾಮೀಜಿ ಇದ್ದಾಗಲೇ ಉತ್ತರಾಧಿಕಾರಿಯನ್ನು ಗುರುತಿಸಿ ಇಡಲಾಗಿತ್ತು.

ಅವರ ವಿದ್ಯಾಭ್ಯಾಸಕ್ಕೂ ಮಠದ ಟ್ರಸ್ಟ್‌ನಿಂದಲೇ ಹಣ ಸಂದಾಯ ಮಾಡಲಾಗುತ್ತಿತ್ತು. ಆಗ ಯಾರೂ ಏನನ್ನೂ ಪ್ರಶ್ನೆ ಮಾಡಿಲ್ಲ.

ಹಂಗರಕಿ ಮತ್ತು ಗರಗ ಗ್ರಾಮದ ಗ್ರಾಮಸ್ಥರು ಪ್ರಶಾಂತ ದೇವರನ್ನೇ ಒಪ್ಪಿಕೊಂಡಿದ್ದಾರೆ. ನಾಳೆ ಅವರನ್ನೇ ಪುರ ಪ್ರವೇಶ ಮಾಡಿಸುತ್ತೇವೆ.

ಇನ್ನು ಟ್ರಸ್ಟ್‌ನಲ್ಲಿ ಬೇರೆಯವರನ್ನೂ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ತಯಾರಿ ನಡೆದಿದೆ. ಬೈಲಾ ಪ್ರಕಾರವೇ ನಾವು ಎಲ್ಲವನ್ನೂ ಮಾಡಿದ್ದೇವೆ. ಕಾನೂನು ಬಿಟ್ಟು ಏನನ್ನೂ ಮಾಡಿಲ್ಲ ಎಂದು ಅಶೋಕ ದೇಸಾಯಿ ಅವರು ಮಠಾಧೀಶರಿಗೆ ತಿಳಿಸಿದರು.

ಇನ್ನು ಜಂಗಮ ಸಮಾಜದ ಉತ್ತರಾಧಿಕಾರಿಯನ್ನು ನಾವು ಪುರ ಪ್ರವೇಶಕ್ಕೆ ಬಿಡುವುದಿಲ್ಲ. ದೇವಸ್ಥಾನದಲ್ಲೇ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇವೆ.

ಈ ಬಗ್ಗೆ ಕಾನೂನು ಹೋರಾಟವನ್ನೂ ಮಾಡುತ್ತೇವೆ. ಜಂಗಮರನ್ನು ಬಿಟ್ಟು ಬೇರೆ ಯಾವ ಸಮಾಜದವರನ್ನಾದರೂ ಉತ್ತರಾಧಿಕಾರಿ ಮಾಡಲು ನಮ್ಮ ಸಹಮತವಿದೆ ಎಂದು ಬೆಂಗಳೂರು ರಾಮೋಹಳ್ಳಿ ಸಿದ್ಧ ಆರೂಢಾಶ್ರಮದ ಡಾ.ಆರೂಢ ಭಾರತಿ ಸ್ವಾಮೀಜಿ ಹೇಳಿದ್ದಾರೆ.

 

ಡಾ.ಆರೂಢ ಭಾರತಿ ಸ್ವಾಮೀಜಿ

ಇನ್ನು ಮಠದಲ್ಲಿ ಭಕ್ತರು ಮತ್ತು ಮಠಾಧೀಶರ ಸಭೆ ನಡೆದಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಬಿಗಿ ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗಿತ್ತು. ಈ ಎಲ್ಲ ವಿದ್ಯಮಾನಗಳ ನಡುವೆಯೂ ನಾಳೆ ಗರಗ ಮತ್ತು ಹಂಗರಕಿ ಭಕ್ತರು ಪ್ರಶಾಂತ ದೇವರ ಪುರ ಪ್ರವೇಶಕ್ಕೆ ಸಜ್ಜಾಗಿದ್ದು, ಮಠದಲ್ಲಿ ವಿವಿಧ ಲಿಂಗಾಯತ ಮಠಾಧೀಶರು ಧರಣಿ ಕುಳಿತಿದ್ದಾರೆ.

ಇದು ತಾರಕಕ್ಕೇರಿದ್ದು, ನಾಳೆ ಯಾವ ಸ್ವರೂಪ ಪಡೆದುಕೊಳ್ಳಲಿದೆಯೋ ಕಾದು ನೋಡಬೇಕಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *