ರಾಜ್ಯ

ಜು. 29ರಂದು ಗರಗದ ಮಠದಲ್ಲಿ ಮಠಾಧೀಶರ ಪ್ರತಿಭಟನೆ

ಧಾರವಾಡ ಪ್ರಜಾಕಿರಣ.ಕಾಮ್ : ನಾಡಿನ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಧಾರವಾಡ ಜಿಲ್ಲೆಯ ಗರಗದ ಮಡಿವಾಳೇಶ್ವರ ಮಠಕ್ಕೆ ಜಾತಿ ಜಂಗಮ ಪ್ರಶಾಂತ ದೇವರನ್ನು ಬರಮಾಡಿಕೊಳ್ಳುವುದನ್ನು ವಿರೋಧಿಸಿ ಹಾಗೂ ಲಿಂಗಾಯತರನ್ನೇ ಮಠಾಧಿಪತಿ ಮಾಡಲು ಆಗ್ರಹಿಸಿ, ವೀರಶೈವ ಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟದ ವತಿಯಿಂದ ಶನಿವಾರ 29ರಂದು ಗರಗದ ಮಠದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಒಕ್ಕೂಟದ ಅಧ್ಯಕ್ಷ ಜಮಖಂಡಿ – ಆಲಗೂರು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಷ. ಬ್ರ. ಶ್ರೀ ಮಹಾದೇವ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು.

ಅಂದಾಜು ಮೂವತ್ತಕ್ಕೂ ಹೆಚ್ಚು ಮಠಾಧೀಶರು ಈ ಹೋರಾಟದಲ್ಲಿ ಪಾಲ್ಗೊಳ್ಳುವರು.

19ನೇ ಶತಮಾನದಲ್ಲಿದ್ದ ಸಂಸ್ಕೃತ ವಿದ್ವಾಂಸರೂ ಅದ್ವೈತ ಪ್ರತಿಪಾದಕರೂ ಜಾತ್ಯಾತೀತ ನಿಲುವಿನವರೂ ಕಿತ್ತೂರಿನ ಕಲ್ಮಠದ ಅಧಿಪತಿಗಳೂ ಆಗಿದ್ದ ಮಡಿವಾಳ ಶಿವಯೋಗಿಗಳಿಗೆ ಜಾತಿಜಂಗಮರು ಕಿರುಕುಳ ನೀಡಿ ಪದಚ್ಯುತಗೊಳಿಸಿದ್ದರಿಂದ ಗರಗಕ್ಕೆ ಬಂದು ಸ್ವತಂತ್ರ ಮಠ ಕಟ್ಟಿದರು.

ಜಾತಿ ಭೇದವಿಲ್ಲದ ಅಸಂಖ್ಯಾತ ಜನರು ಈ ಮಠದ ಭಕ್ತರಿದ್ದಾರೆ. ಇದುವರೆಗೆ ಪಾರಂಪರಿಕವಾಗಿ ಲಿಂಗಾಯತರೇ ಈ ಮಠದ ಅಧಿಪತಿಗಳಾಗಿದ್ದು, ಇತ್ತೀಚೆಗೆ ಮಠದ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಇದೀಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸೇರಿ ಜಂಗಮ ಜಾತಿಯ ಪ್ರಶಾಂತ ದೇವರನ್ನು ಮಠಾಧಿಪತಿ ಮಾಡಲು ಹೊರಟಿವೆ.

ಆಸನ ಒಂದಿಂಚಾದರೂ ಎತ್ತರಿರಬೇಕೆನ್ನುವ ಜಂಗಮರ ಕೈಗೆ ಒಮ್ಮೆ ಮಠ ಸೇರಿದರೆ ಇನ್ನೆಂದಿಗೂ ಮಠ ಜಾತ್ಯಾತೀತವಾಗಿ ಉಳಿಯದು.

ಮಡಿವಾಳ ಶಿವಯೋಗಿಗಳಂತೆ ಮತ್ತೊಂದು ಮಠವನ್ನೇ ಕಟ್ಟಬೇಕಾದೀತು.

ಮೂಲ ಮಡಿವಾಳ ಸ್ವಾಮೀಜಿಯಿಂದ ಮಠ ಕಿತ್ತುಕೊಂಡವರ ಕೈಗೇ ಈ ಮಠವನ್ನೂ ಇಡಲು ಮುಂದಾಗಿರುವುದು ವಿಪರ್ಯಾಸ.

ಇದನ್ನು ತಡೆಯಲೆಂದೇ ಈ ಪ್ರತಿಭಟನೆ ಹಮ್ಮಿಕೊಂಡಿದ್ದು ಮುಂದಿನ ನಡೆಯ ಬಗ್ಗೆ ಅಲ್ಲಿಯೇ ತೀರ್ಮಾನಿಸಲಾಗುವುದು ಎಂದು ಒಕ್ಕೂಟದ ಪ್ರಕಟಣೆ ತಿಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *