ರಾಜ್ಯ

ಗ್ರಾಮ ಪಂಚಾಯತ್ ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗೆ ಸಂಬಂಧಿಸಿದಂತೆ ಲಾಭದಾಯಕ ಹುದ್ದೆ ವಿವರಣೆ

ಧಾರವಾಡ prajakiran.com : ಪ್ರಸ್ತುತ ಜರುಗುತ್ತಿರುವ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸಬಯಸುವ ಅಭ್ಯರ್ಥಿಯು ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು ಎಂಬ ನಿಯಮವಿದೆ.

ರಾಜ್ಯ ಚುನಾವಣಾ ಆಯೋಗವು ಲಾಭದಯಕ ಹುದ್ದೆಯ ಕುರಿತು ಅಭ್ಯರ್ಥಿ, ಮತದಾರ ಮತ್ತು ಸಾರ್ವಜನಿಕರ ತಿಳುವಳಿಕೆಗಾಗಿ ಮಾಹಿತಿಯನ್ನು ನೀಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರದ ಅಥವಾ ಯಾವುದೇ ಸ್ಥಳೀಯ ಸಂಸ್ಥೆ ಅಥವಾ ಬೇರೆ ಯಾವುದೇ ಪ್ರಾಧಿಕಾರದಡಿಯಲ್ಲಿ ಲಾಭದಾಯಕ ಹುದ್ದೆ ಹೊಂದಿದ್ದರೆ ಅಂತಹ ವ್ಯಕ್ತಿಯು ಗ್ರಾಮ ಪಂಚಾಯಿತಿ ಸದಸ್ಯನಾಗಲು ಅನರ್ಹನಾಗುತ್ತಾನೆ.

ಆದರೆ ಸ್ಥಳೀಯ ಸಂಸ್ಥೆಗಳ (ನಗರ ಸ್ಥಳೀಯ ಸಂಸ್ಥೆಗಳ ಅಥವಾ ಪಂಚಾಯತ್ ಸಂಸ್ಥೆಗಳ) ಅಧ್ಯಕ್ಷ ಅಥವಾ ಉಪಾಧ್ಯಕ್ಷ ಹುದ್ದೆ ಹೊಂದಿರುವ ವ್ಯಕ್ತಿ ಮೇಲಿನ ಉದ್ದೇಶಕ್ಕೆ ಲಾಭದಾಯಕ ಹುದ್ದೆ ಹೊಂದಿರುವನೆಂದು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ವಿಧಾನ ಮಂಡಲ (ಅನರ್ಹತೆ ತಡೆಯುವಿಕೆ) ಅಧಿನಿಯಮ 1956 ರಡಿಯಲ್ಲಿ ವ್ಯಕ್ತಿಗಳು ಹೊಂದಿರುವ ಕೆಲವು ಹುದ್ದೆಗಳನ್ನು ಲಾಭದಾಯಕ ಹುದ್ದೆ ಹೊಂದಿದ್ದಾರೆಂದು ಪರಿಗಣಿಸುವಂತಿಲ್ಲ.

ಅನುದಾನಿತ ಶಾಲೆ ಮತ್ತು ಕಾಲೇಜುಗಳಲ್ಲಿನ ಭೋದನಾ ಸಿಬ್ಬಂದಿಯು ಯಾವುದೇ ಸರ್ಕಾರ ಅಥವಾ ಬೇರಾವುದೇ ಪ್ರಾಧಿಕಾರದಡಿಯಲ್ಲಿ ಲಾಭದಾಯಕ ಹುದ್ದೆ ಹೊಂದಿರುವುದಿಲ್ಲ.

ಗ್ರಾಮ ಸಹಾಯಕರು ನಿಗದಿತ ಗೌರವಧನ ಪಡೆಯುತ್ತಿದ್ದಾರೆಂದು ಹಾಗೂ ಸದರಿಯವರುಗಳನ್ನು ರಾಜ್ಯ ಸರ್ಕಾರದ ಯಾವುದೇ ಸೇವೆಯ ಯಾವುದೇ ನಿರ್ದಿಷ್ಟ ಹುದ್ದೆಗೆ ನೇಮಕವಾಗಿಲ್ಲವೆಂದು ಪರಿಗಣಿಸಲಾಗಿದೆ.

ಅವರು ರಾಜ್ಯ ಸರ್ಕಾರದಿಂದ ಸ್ವಲ್ಪ ಮೊತ್ತದ ಹಣ ಪಡೆಯುತ್ತಿದ್ದಾಗ್ಯೂ ಅವರು ಯಾವುದೇ ನಿರ್ದಿಷ್ಟ ಹುದ್ದೆ, ಕಛೇರಿ ಹೊಂದಿರುವುದಿಲ್ಲವಾದ್ದರಿಂದ ಅವರು ಸರ್ಕಾರದಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆ ಹೊಂದಿದವರಾಗುವುದಿಲ್ಲ.

ಪಡಿತರ ಅಂಗಡಿಗಳನ್ನು ಹೊಂದಿರುವವರು ಯಾವುದೇ ಲಾಭದಾಯಕ ಹುದ್ದೆ ಹೊಂದಿರುವುದಿಲ್ಲ.

ಸಹಕಾರಿ ಸಂಘಗಳ ಕಾಯ್ದೆಯಡಿಯಲ್ಲಿ ಸಹಕಾರಿ ಸಂಘಗಳನ್ನು ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಸಹಕಾರಿ ಸಂಸ್ಥೆಯ ಆಡಳಿತ ಸಮಿತಿಯು ಚುನಾಯಿತ ಸದಸ್ಯರನ್ನೊಳಗೊಂಡ ಸಮಿತಿಯಾಗಿದ್ದು ಸಹಕಾರಿ ಸಂಘಗಳ ನೌಕರರನ್ನು ಸೇವೆಗೆ ನೇಮಕ ಮಾಡಿಕೊಳ್ಳುವ ಜವಾಬ್ದಾರಿ, ಹಾಗೂ ಸೇವೆಯಿಂದ ತೆಗೆದುಹಾಕುವ ಅಧಿಕಾರವನ್ನು ಹೊಂದಿರುತ್ತದೆ.

ಉಚ್ಛ ನ್ಯಾಯಾಲಯವು ಆದೇಶಿಸಿದಂತೆ ಸಹಕಾರಿ ಸಂಘಗಳಲ್ಲಿ ಲಾಭದಾಯಕ ಹುದ್ದೆ ಹೊಂದಿರುವ ವ್ಯಕ್ತಿಯನ್ನು ಪಂಚಾಯತಿ ಚುನಾವಣೆಗೆ ಅನರ್ಹಗೊಳಿಸುವಂತಿಲ್ಲವೆಂದು ತೀರ್ಪಿರುತ್ತದೆ.

ಆದುದರಿಂದ ಸಹಕಾರಿ ಸಂಘಗಳ ನೌಕರರು ಲಾಭದಾಯಕ ಹುದ್ದೆಯನ್ನು ಹೊಂದಿರುವರೆಂದು ಪರಿಗಣಿಸುವಂತಿಲ್ಲ.

ಅಂಗನವಾಡಿ ಕಾರ್ಯಕರ್ತರು ಲಾಭದಾಯಕ ಹುದ್ದೆ ಹೊಂದಿದವರಾಗುವುದಿಲ್ಲವಾದ್ದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗುತ್ತಾರೆ.

ಶಿಕ್ಷಣ ಇಲಾಖೆಯಲ್ಲಿ ಪ್ರೇರಕ ಎಂದು ನೇಮಕಾತಿ ಹೊಂದಿ ಗೌರವಧನ ಪಡೆದು ಕೆಲಸ ಮಾಡುತ್ತಿರುವವರು ಲಾಭದಾಯಕ ಹುದ್ದೆ ಅರ್ಥ ವ್ಯಾಪ್ತಿಯಲ್ಲಿ ಬರುವುದಿಲ್ಲವಾದ್ದರಿಂದ ಅವರುಗಳು ಚುನಾವಣೆಗಳಲ್ಲಿ ಸ್ಪರ್ಧಿಸಲು ಅರ್ಹರಾಗುತ್ತಾರೆ.

ಗ್ರಂಥಾಲಯಗಳಲ್ಲಿ ಮೇಲ್ವಿಚಾರಕರಾಗಿ ಅಯ್ಕೆಗೊಂಡು ಮಾಸಿಕ ವೇತನ ರೂ.750/- ಗೌರವಧನವನ್ನಾಗಿ ಪಡೆದು ಕರ್ತವ್ಯ ನಿರ್ವಹಿಸುತ್ತಿರುವವರು ಚುನಾವಣೆಯಲ್ಲಿ ಸ್ಪರ್ಧಿಸಬಹುದು.

ಬಿಸಿಯೂಟ ಯೋಜನೆಯಡಿ ನೇಮಕಗೊಂಡ ಅಡಿಗೆಯವರು ಉಚ್ಛನ್ಯಾಯಾಲದ ತೀರ್ಪಿನಂತೆ ಬಿಸಿಯೂಟ ಯೋಜನೆಯಡಿಯಲ್ಲಿ ಅಡುಗೆ ಕೆಲಸವನ್ನು ನಿರ್ವಹಿಸುವವರು ಲಾಭದಾಯಕ ಹುದ್ದೆಯನ್ನು ಹೊಂದಿದವರಾಗುವುದಿಲ್ಲವೆಂದು ತೀರ್ಪು ನೀಡಿದೆ.

ಆದುದರಿಂದ ಬಿಸಿಯೂಟ ಯೋಜನೆಯಡಿಯಲ್ಲಿ ಕೆಲಸ ಮಾಡುವ ಅಡುಗೆಯವರು ಚುನಾವಣೆಗಳಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ.

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 12 ರಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿರಲು ಅನರ್ಹತೆ ವಿವರಿಸಲಾಗಿದೆ.

ವಿಶ್ವವಿದ್ಯಾಲಯಗಳು ರಾಜ್ಯ ಸರ್ಕಾರದ ನಿಯಂತ್ರಣಕ್ಕೊಳಪಟ್ಟಿದ್ದು ಅವುಗಳು ಇತರೆ ಪ್ರಾಧಿಕಾರ ಪದವ್ಯಾಪ್ತಿಯಲ್ಲಿ ಬರುತ್ತವೆ. ವಿಶ್ವವಿದ್ಯಾಲಯ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯದ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಉಪನ್ಯಾಸಕರು ಸರ್ಕಾರದ ನಿಯಂತ್ರಣಕ್ಕೊಳಪಡುವ ಇತರೆ ಪ್ರಾಧಿಕಾರ ಅಡಿಯಲ್ಲಿ ಲಾಭದಾಯಕ ಹುದ್ದೆ ಹೊಂದಿದವರಾಗಿರುತ್ತಾರೆ.

ಸಾರ್ವಜನಿಕ ಉದ್ದಿಮೆಗಳು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅವುಗಳ ನೌಕರರು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ನಿಯಂತ್ರಣಕ್ಕೊಳಪಟ್ಟ ಪ್ರಾಧಿಕಾರದ ಅಡಿಯಲ್ಲಿ ಲಾಭದಾಯಕ ಹುದ್ದೆ ಹೊಂದಿರುವವರೆಂದು ಪರಿಗಣಿಸಲಾಗುತ್ತದೆ.

ರಾಷ್ಟ್ರೀಕೃತಗೊಳ್ಳದ ಬ್ಯಾಂಕುಗಳನ್ನು ಸರ್ಕಾರದ ನಿಯಂತ್ರಣಕ್ಕೊಳಪಟ್ಟ ಪ್ರಾಧಿಕಾರವೆಂದು ಅರ್ಥೈಸುವಂತಿಲ್ಲ. ಅದರ ನೌಕರರು ಯಾವುದೇ ಲಾಭದಾಯಕ ಹುದ್ದೆ ಹೊಂದಿದವರಾಗುವುದಿಲ್ಲ.

ಆದರೆ ರಾಷ್ಟ್ರೀಕೃತ ಬ್ಯಾಂಕುಗಳು ಕೇಂದ್ರ ಸರ್ಕಾರದ ನಿಯಂತ್ರಣ ಅಥವಾ ಸ್ವಾಮ್ಯಕ್ಕೆ ಒಳಪಟ್ಟಿರುವುದರಿಂದ ಹಾಗೂ ಅವು ಸರ್ಕಾರಿ ಪ್ರಾಧಿಕಾರ ಪದದ ವ್ಯಾಪ್ತಿಗೊಳಪಡುವುದರಿಂದ ರಾಷ್ಟ್ರೀಕೃತ ಬ್ಯಾಂಕ್ ನೌಕರರು ಪಂಚಾಯತ್ ಸಂಸ್ಥೆಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರಾಗಲು ಅನರ್ಹರಾಗುತ್ತಾರೆ.

ಸರ್ಕಾರ ರಚಿಸಿರುವ ಸಮಿತಿಗಳ ಸದಸ್ಯರು ಹಾಗೂ ಸರ್ಕಾರಿ ನಿಗಮಗಳ ನಿರ್ದೇಶಕರು ಮತ್ತು ಶಾಸನಬದ್ಧ ಮತ್ತು ಶಾಸನಬದ್ಧವಲ್ಲದ ಮಂಡಳಿಗಳ ನಿರ್ದೇಶಕರು ಪರಿಹಾರ ಭತ್ಯೆ ಹೊರತುಪಡಿಸಿದ ಪರಿಹಾರಧನ ಪಡೆಯುತ್ತಿದ್ದರೆ ಅಥವಾ ಪಡೆಯಲು ಅರ್ಹರಾಗಿದ್ದಲ್ಲಿ ಅವರು ಅನರ್ಹತೆಗೆ ಗುರಿಯಾಗುತ್ತಾರೆ.

ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ಪಟ್ಟಣ ಪಂಚಾಯತಿ, ಮುನ್ಸಿಪಾಲಿಟಿ, ನಗರಸಭೆ ಮತ್ತು ನಗರ ಪಾಲಿಕೆಗಳು ಸ್ಥಳೀಯ ಸಂಸ್ಥೆಗಳಾಗಿದ್ದು ಅವುಗಳು ರಾಜ್ಯ ಸರ್ಕಾರದ ನಿಯಂತ್ರಣಕ್ಕೊಳಪಟ್ಟಿವೆ. ಆದುದರಿಂದ ಈ ಸ್ಥಳೀಯ ಸಂಸ್ಥೆ ನೌಕರರು ಲಾಭದಾಯಕ ಹುದ್ದೆ ಹೊಂದಿದವರಾಗಿರುತ್ತಾರೆ.

ರಾಜ್ಯ ವಿಧಾನಮಂಡಲಗಳಿಗೆ ನಡೆಯುವ ಚುನಾವಣಾ ಉದ್ದೇಶಗಳಿಗಾಗಿ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೆ ಕಾನೂನಿನಿಂದ ಅಥವಾ ಅದರಡಿಯಲ್ಲಿ ಹಾಗೂ ಅನರ್ಹರಾಗಿದ್ದರೆ ಆತನು ಗ್ರಾಮ ಪಂಚಾಯತಿ ಸದಸ್ಯನಾಗಿ ಚುನಾಯಿತನಾಗಲು ಮತ್ತು ಸದಸ್ಯನಾಗಿರಲು ಅನರ್ಹನಾಗಿರುತ್ತಾನೆ.

ಈ ಕುರಿತು 1951 ರ ಪ್ರಜಾಪ್ರಾತಿನಿತ್ಯ ಅಧಿನಿಯಮದ ಪ್ರಕರಣ 8.9.9ಎ. ಮತ್ತು 120 ರಲ್ಲಿ ವಿವರಿಸಲಾಗಿದೆ.

ಗ್ರಾಮ ಪಂಚಾಯತ್ ಚುನಾವಣಾಧಿಕಾರಿಗಳು ರಾಜ್ಯ ಚುನಾವಣಾ ಆಯೋಗವು ಲಾಭದಾಯಕ ಹುದ್ದೆಯ ಕುರಿತು ನೀಡಿರುವ ಮಾರ್ಗಸೂಚಿಗಳನ್ನು ಮತ್ತು ಉಚ್ಛ ನ್ಯಾಯಾಲಯದ ಆದೇಶಗಳನ್ನು ಚಾಚೂ ತಪ್ಪದೇ ಪಾಲಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *