ರಾಜ್ಯ

ಮುದ್ರಣಕಾಶಿಯ ಇಬ್ಬರು ಸಾಧಕರಿಗೆ ರಾಜ್ಯೋತ್ಸವ ಪುರಸ್ಕಾರ

 ಶೈಕ್ಷಣಿಕ ಸಾಧನೆಗೆ ಬಿ.ಎಫ್.ದಂಡಿನ್; ಸಾಹಿತ್ಯ (ವಿಶೇಷ ಚೇತನ) ಕ್ಷೇತ್ರದಲ್ಲಿ ರಾಮಣ್ಣ ಬ್ಯಾಟಿಗೆ ರಾಜ್ಯೋತ್ಸವ ಪ್ರಶಸ್ತಿ

ಮಂಜುನಾಥ ಎಸ್.ರಾಠೋಡ

ಗದಗ prajakiran.com : ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಇಬ್ಬರು ಸಾಧಕರು ಭಾಜನರಾಗಿದ್ದು, “ಶಿಕ್ಷಣ ಕ್ಷೇತ್ರಕ್ಕೆ” ಕನಕದಾಸ ಶಿಕ್ಷಣ ಸಮಿತಿ ರೂವಾರಿ ಬಿ.ಎಫ್.ದಂಡಿನ ಮತ್ತು “ಸಾಹಿತ್ಯ ಕ್ಷೇತ್ರಕ್ಕೆ” ಅನಕ್ಷರಸ್ಥರಾದರೂ ಪುರಾಣ, ಮಹಾಕಾವ್ಯದಂತ ಸಾಹಿತ್ಯ ಕೃಷಿ ಮಾಡಿದ ವಿಶೇಷಚೇತನ ರಾಮಣ್ಣ ಬ್ಯಾಟಿ ಪ್ರಶಸ್ತಿ ಪುರಷ್ಕೃತರಾಗಿದ್ದಾರೆ.

ಶಿಕ್ಷಣ ಸಂತ ಡಾ.ಬಿ.ಎಫ್.ದಂಡಿನ:

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ದ್ಯಾಮುಣಸಿ ಗ್ರಾಮದಲ್ಲಿ ೧೯೩೫ರ ಆಗಷ್ಟ ೫ ರಂದು ರೈತ ದಂಪತಿ ಫಕೀರಪ್ಪ ಹಾಗೂ ದ್ಯಾಮವ್ವನ ಉದರದಲ್ಲಿ ಜನಿಸಿದ ಬಿ.ಎಫ್. ದಂಡಿನ ಅವರು, ಕಳೆದ ಆರು ದಶಕದಿಂದ ಉತ್ತರ ಕರ್ನಾಟಕದ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಆಶೋತ್ತರಗಳನ್ನು ಈಡೇರಿಸುತ್ತಿರುವ ಏಕೈಕ ಸಂಸ್ಥೆ ಕನಕದಾಸ ಶಿಕ್ಷಣ ಸಮಿತಿ ರೂವಾರಿಯಾಗಿದ್ದಾರೆ.

ಡಾ.ಬಿ.ಎಫ್.ದಂಡಿನ ಅವರು, ಪ್ರಾಥಮಿಕ ಶಿಕ್ಷಣವನ್ನು ಸೂಡಿ ಗ್ರಾಮದಲ್ಲಿ, ರೋಣದ ವಿ.ಎಫ್.ಪಾಟೀಲ ಹೈಸ್ಕೂಲ್‌ನಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದರು. ಪದವಿ ಶಿಕ್ಷಣವನ್ನು ಬೆಳಗಾವಿಯ ಆರ್.ಎಲ್.ಎಸ್. ಕಾಲೇಜು ಹಾಗೂ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ.

ಸ್ನಾತಕೋತ್ತರ ಪದವಿ ಪೂರೈಸಿದ ಬಳಿಕ ೬೦ರ ದಶಕದಲ್ಲಿ ಹಿಂದೂಳಿದ ಮತ್ತು ಹೆಣ್ಣು ಮಕ್ಕಳ ಶಿಕ್ಷಣ ಶೋಚನೀಯ ಸ್ಥಿತಿಯಲ್ಲಿರುವದನ್ನು ಕಂಡು ಕೈಗೆಟಕುವ ಶುಲ್ಕದೊಂದಿಗೆ ಕನಕದಾಸ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು. ಕನಕದಾಸರ ಹೆಸರಿನಲ್ಲಿಉಚಿತ ಪ್ರಸಾದ ನಿಲಯ ಆರಂಭಿಸಿ ಹಳ್ಳಿಹಳ್ಳಿಗೆ ಹೋಗಿ ಪಾಲಕರ ಮನವೊಲಿಸಿ ಹಾಸ್ಟೆಲ್‌ಗೆ ಕರೆದುಕೊಂಡು ಬಂದು ಉಚಿತ ಶಿಕ್ಷಣ ನೀಡಿದರು.

ಸಧ್ಯ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಾಥಮಿಕ ಹಂತದಿAದ ಸ್ನಾತಕೋತ್ತರ ಹಂತದವರೆಗೆ ೬೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ.

ಇವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ೨೦೧೧ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಕನ್ನಡ ಸಾರಸ್ವತ ಲೋಕಕ್ಕೆ ರಾಮಣ್ಣ ಬ್ಯಾಟಿ ಕೊಡುಗೆ ಅಪಾರ:

ಬೆಟಗೇರಿಯ ನಿವಾಸಿಯಾದ ರಾಮಣ್ಣ ಬ್ಯಾಟಿ ಅವರು ೬ ಡಿಸೆಂಬರ್ ೧೯೫೧ ರಂದು ಜನಿಸಿದರು.

ಕಡುಬಡ ಕುಟುಂಬದಲ್ಲಿ ಜನಿಸಿದ ರಾಮಣ್ಣ ಬ್ಯಾಟಿ ಅವರು ನೇಕಾರಿಕೆಯನ್ನು ವೃತ್ತಿಯಾಗಿಸಿಕೊಂಡು, ಸಾಹಿತ್ಯ ಕೃಷಿಯನ್ನು ತಮ್ಮ ಪ್ರವೃತ್ತಿಯಾಗಿಸಿಕೊಂಡಿದ್ದಾರೆ.

ಓದಿದ್ದು ಎರಡನೇ ತರಗತಿವರೆಗೆ. ಆದರೆ ರಚಿಸಿದ ಕೃತಿಗಳು ಅಪಾರ. ಮೂಲತಃ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಮನಿಹಾಳ ಸುರೇಬಾನ ಗ್ರಾಮದವರಾಗಿದ್ದು, ಮಲಪ್ರಭಾ ನದಿಯ ಪ್ರವಾಹಕ್ಕೆ ತತ್ತರಿಸಿ ಅಲ್ಲಿಂದ ೫೦ ವರ್ಷಗಳ ಹಿಂದೆ ಗದಗಕ್ಕೆ
ವಲಸೆ ಬಂದು ನೆಲೆಸಿದ್ದಾರೆ.

ರಾಮಣ್ಣ ಅವರು ಪತ್ನಿ, ಐದು ಜನ ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಹೊಂದಿದ್ದು, ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

ಸಾಹಿತ್ಯ ಕೃಷಿ:

ರಾಮಣ್ಣ ಬ್ಯಾಟಿ ಕೇವಲ ಒಂದನೇ ಕ್ಲಾಸ್ ಓದಿದ್ದರೂ ಅವರಗೆ ಸಾಹಿತ್ಯ ಎನ್ನುವುದು ರಕ್ತಗತವಾಗಿ ಬಂದಿದೆ. ಓದುವುದಕ್ಕೆ ಬಂದರೂ ಬರೆಯುವುದಕ್ಕೆ ಕಷ್ಟ.

ಆದರೂ ಓದಿನಲ್ಲಿ ಪಾಂಡಿತ್ಯ ಪಡೆದಿರುವ ರಾಮಣ್ಣ, ೪ ಕಾವ್ಯಗಳು, ೧೦ ಪುರಾಣಗಳು ಹಾಗೂ ೬೦ಕ್ಕೂ ಅಧಿಕ ಕೃತಿಗಳನ್ನು ಬರೆಸಿದ್ದಾರೆ.

ದೃಷ್ಟಿದೋಷ ಹಾಗೂ ಶಾಲೆಯ ಮೆಟ್ಟಲು ಅಷ್ಟಾಗಿ ಹತ್ತದ ಕಾರಣ ರಾಮಣ್ಣ, ವಿಷಯವನ್ನು ಹೇಳುತ್ತಾ ಮಗಳು ಗಾಯತ್ರಿ, ಪುತ್ರ ದಾನೇಶ, ಆಪ್ತರಾದ ಮುಳಗುಂದ ಶಂಕ್ರಪ್ಪ, ರಾಜೇಶ್ವರಿ ಅವರು ಬರೆಯುತ್ತಾ ಹೋಗುತ್ತಾರೆ.

ಹೀಗೆ ಬರೆದ ವಿಷಯವನ್ನು ಇವರದ್ದೇ ಆದ ಗಾಯತ್ರಿ ಪ್ರಕಾಶನದಲ್ಲಿ ಪ್ರಿಂಟ್ ಹಾಕಲಾಗುತ್ತದೆ. ಪ್ರಿಂಟ್ ಖರ್ಚುಗಳನ್ನು ದಾನಿಗಳೇ ಭರಿಸುತ್ತಾರೆ.

ಮೊದಲು ನೇಕಾರಿಕೆ ಮಾಡುತ್ತಿದ್ದ ರಾಮಣ್ಣ, ಈಗ ವಯಸ್ಸಾಗಿರುವುದರಿಂದ ಆ ಕೆಲಸವನ್ನು ನಿಲ್ಲಿಸಿ ಸಾಹಿತ್ಯ ಕೃಷಿಯಲ್ಲಿ ಹೆಚ್ಚು ತೊಡಗುತ್ತಿದ್ದಾರೆ.

೨೫ನೇ ವಯಸ್ಸಿನಿಂದ ಸಾಹಿತ್ಯ ಕೃಷಿ ಶುರು ಮಾಡಿದ ರಾಮಣ್ಣ, ಸಾವಿತ್ರಿಬಾಯಿ- ಜ್ಯೊತಿಬಾಪುಲೆ ದಂಪತಿ ಪುರಾಣ, ಜಗದ್ಗುರು ತೋಂಟದ ಸಿದ್ಧಲಿಂಗ ಶ್ರೀಗಳ ಪುರಾಣ, ಬ್ರಹ್ಮಶ್ರೀ ನಾರಾಯಣ ಗುರುಗಳ ಪುರಾಣ ಸಹಿತ, ಗೌರಿಶಂಕರ ಚರಿತಾಮೃತ, ಬಾಬಾ ಸಾಹೇಬ್ ಅಂಬೇಡ್ಕರ್ ಪುರಾಣ, ಬಸವ ಪುರಾಣ, ಗಣೇಶ ಚರಿತೆ ಪುರಾಣ ಸೇರಿದಂತೆ ೧೦ ಪುರಾಣಗಳು ಇವರಿಂದ ರಚನೆ ಮಾಡಿದ್ದಾರೆ.

ನಾಲ್ಕು ಸಾವಿರ ಭಾಮಿನಿ ಪದ್ಯಗಳನ್ನು ಒಳಗೊಂಡ “ಕರುನಾಡ ರಾಮಾಯಣ” ಎಂಬ ಕೃತಿ ಅಂತಿಮ ಹಂತದಲ್ಲಿದೆ.

ರಾಮಣ್ಣ ಸಾಧನೆಯನ್ನು ಗಮನಿಸಿರುವ ವಿವಿಧ ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ. ಅಲ್ಲದೇ ಇವರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿಯೂ ಮಾಡಲಾಗಿತ್ತು. ಗೆಳೆಯರ ಸಹಕಾರ, ಮನೆಯವರ ಪ್ರೋತ್ಸಾಹದಿಂದ ರಾಮಣ್ಣ ದೊಡ್ಡ ಸಾಹಿತಿಯಾಗಿ ಹೊರಹೊಮ್ಮುತ್ತಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿಯೂ ಬಂದಿರುವುದು ಕುಟುಂಬವರ್ಗದಲ್ಲಿ ಸಂತಸ ಇಮ್ಮುಡಿಗೊಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *