ರಾಜ್ಯ

ಗದಗ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಹೆರಿಗೆ

ಕರೋನಾದಲ್ಲೂ ಡಿಸಿ ಎಂ.ಸುಂದರೇಶ ಬಾಬು ದಿಟ್ಟ ಹೆಜ್ಜೆ:

ಮಾದರಿ ನಿರ್ಧಾರಕ್ಕೆ ಎಲ್ಲಡೆ ಶ್ಲಾಘನೆ

ಮಂಜುನಾಥ ಎಸ್. ರಾಠೋಡ

ಗದಗ prajakiran.com : ದೊಡ್ಡ ದೊಡ್ಡ ಹುದ್ದೆ, ಕೈ ತುಂಬಾ ಸಂಬಳ, ಶ್ರೀಮಂತರು ಸರ್ಕಾರಿ ಆಸ್ಪತ್ರೆ ಕಡೆಗೆ ಮುಖ ಮಾಡುವುದೇ ಇಲ್ಲ. ಅನಾರೋಗ್ಯ, ಹೆರಿಗೆ ಅಂತಹ ಸಂದರ್ಭದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳ ಮುಖ ಮಾಡುವುದು ಸಹಜ.

ಆದರೆ, ಇದಕ್ಕೆ ಅಪವಾದ ಎನ್ನುವಂತೆ ಗದಗ ಜಿಲ್ಲಾಧಿಕಾರಿ ಸುಂದರೇಶ ಬಾಬು ತಮ್ಮ ಪತ್ನಿ ಹೆರಿಗೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ನೆರವೇರಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಭಾನುವಾರ ನಗರದ ಕೆಸಿ ರಾಣಿ ರಸ್ತೆಯ ದುಂಡಪ್ಪ ಮಾನ್ವಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಿ ಸರಳತೆ ಮೆರೆದಿದ್ದಾರೆ. ಆ ಮೂಲಕ ಸರ್ಕಾರಿ ಆಸ್ಪತ್ರೆಯಲ್ಲಿಯೂ ನುರಿತ ವೈದ್ಯರಿದ್ದಾರೆ, ಉತ್ತಮ ವೈದ್ಯಕೀಯ ಸೌಲಭ್ಯ ದೊರೆಯುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಮಹಿಳಾ ವೈದ್ಯರಾದ ಡಾ. ಜಯಶ್ರೀ ಮತ್ತು ಡಾ. ಶೃತಿ ನೇತೃತ್ಬದಲ್ಲಿ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ. ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ದೇಶಾದ್ಯಂತ ಕರೋನಾ ಭೀತಿಯಿಂದಾಗಿ ಜನ ಸಾಕಷ್ಟು ಚಿಂತಿತರಾಗಿದ್ದಾರೆ. ಸಾಮಾನ್ಯ ಜ್ವರ ಬಂದರೂ ಭಯಪಡುವಂತಹ ಸ್ಥಿತಿಯಿದೆ.

ಅದರಲ್ಲೂ ಗರ್ಭಿಣಿ ಮಹಿಳೆಯರು ಈ ಸಂದರ್ಭದಲ್ಲಿ ಹೆಚ್ಚು ಪ್ಯಾನಿಕ್ ಆಗಿ, ಹೆರಿಗೆಗೆಂದು ಹೋಗುವ ಆಸ್ಪತ್ರೆಗಳು ಅದೆಷ್ಟರ ಮಟ್ಟಿಗೆ ಸೇಫ್?  ಎಂದು ಚಿಂತಾಕ್ರಾಂತರಾಗಿರುವಾಗ ಸಂದರ್ಭದಲ್ಲಿ ಜಿಲ್ಲಾಧಿಕಾರಿಯ ಈ ನಡೆಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ಮತ್ತೇ ಜೀವ ತುಂಬಿದಂತಾಗಿದೆ. 

ಪ್ರಶಂಶೆಯ ಮಹಾಪೂರ:

ಗದಗ ಜಿಲ್ಲಾಧಿಕಾರಿ ಸುಂದರೇಶ ಬಾಬು ನಿರ್ಧಾರಕ್ಕೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗಿದ್ದು, ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ತಾಯಿ, ಮಗುವನ್ನು ಹರಸಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಗರ್ಭಿಣಿ ಕೆಲ ಮುನ್ನೆಚ್ಚರಿಕೆ ವಹಿಸುವುದು ಅವಶ್ಯವಾಗಿದ್ದು, ಕೈಗಳನ್ನು ಆಗಾಗ ತೊಳೆದುಕೊಳ್ಳುತ್ತಿರಬೇಕು. ಜ್ವರ ಲಕ್ಷಣ ಕಂಡುಬಂದರೆ ತಕ್ಷಣ ಸ್ಥಳೀಯ ವೈದ್ಯರನ್ನು ಸಂಪರ್ಕಿಸಬೇಕು. ಅನಗತ್ಯ ಭಯಪಡುವ ಮೊದಲು ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕು ಎಂದು ವೈದ್ಯ ಡಾ. ಲಕ್ಷ್ಮಣ್ ಪೂಜಾರ ಸಲಹೆ ನೀಡುತ್ತಾರೆ.

“ಕರೋನಾದ ಸಂಕಷ್ಟ ಕಾಲದಲ್ಲಿ ಸರ್ಕಾರಿ ಆಸ್ಪತ್ರೆಗಳು ಅತ್ಯಂತ ಸುರಕ್ಷಿತ.  ನುರಿತ ವೈದ್ಯ, ಉತ್ತಮ ವೈದ್ಯಕೀಯ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಯಲ್ಲಿವೆ. ಕೇವಲ ಕಡು ಬಡವರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ ಎನ್ನುವ ತಪ್ಪು ಕಲ್ಪನೆ ಹೋಗಬೇಕಿದೆ. ಪ್ರಧಾನಿಯವರ ಸುರಕ್ಷಿತ ಮಾತೃತ್ವ ಯೋಜನೆಯ ಬಗ್ಗೆ ಜನರಲ್ಲಿ ಮೂಡಬೇಕಿದೆ.”

 ಎಂ. ಸುಂದರೇಶಬಾಬು, ಜಿಲ್ಲಾಧಿಕಾರಿ ಗದಗ.

“ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ತಮ್ಮ ಪತ್ನಿಯ ಹೆರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿರುವುದು ಸರ್ಕಾರಿ ಆಸ್ಪತ್ರೆಯ ಕುರಿತು ಜನಸಾಮಾನ್ಯರಲ್ಲಿರುವ ತಪ್ಪು ಭಾವನೆ ಹೊಗಲಾಡಿಸಿದಂತಾಗಿದೆ.”

ರಾಮಣ್ಣ ಲಮಾಣಿ, ಶಾಸಕರು ಶಿರಹಟ್ಟಿ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *