ರಾಜ್ಯ

ಕೈಗಾರಿಕೆಗಳಿಗೆ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ

ಸದನದಲ್ಲಿ ಸಚಿವ ಮುರುಗೇಶ್ ನಿರಾಣಿ ಹೇಳಿಕೆ

ಬೆಳಗಾವಿ ಸುವರ್ಣಸೌಧ prajakiran.com ಡಿ.17;

ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯಮಗಳಲ್ಲಿ ಈಗಾಗಲೇ ಡಾ.ಸರೋಜಿನಿ ಮಹಿಷಿ ವರದಿ ಅನುಸಾರ ಉದ್ಯೋಗಗಳನ್ನು ಒದಗಿಸಲಾಗುತ್ತಿದೆ.

ಉದ್ಯೋಗ ದೊರೆಯದ ಅಭ್ಯರ್ಥಿಗಳ ಪಟ್ಟಿ ನೀಡಿದರೆ ವಿವಿಧ ಕೈಗಾರಿಕೆಗಳಲ್ಲಿ ಉದ್ಯೋಗ ನೀಡಲು ಸೂಚಿಸಿ ಶಿಫಾರಸ್ಸು ಮಾಡಲಾಗುವುದು ಎಂದು ಬೃಹತ್ ಮತ್ತು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು ಧಾರವಾಡ ತಾಲೂಕಿನ ಬೇಲೂರು ಕೈಗಾರಿಕಾ ಪ್ರದೇಶವನ್ನು 1984 ರಲ್ಲಿ ಅಂದಿನ ಸಚಿವರಾಗಿದ್ದ ಎಸ್.ಆರ್.ಬೊಮ್ಮಾಯಿ ಅವರು ಮಹತ್ವಾಕಾಂಕ್ಷೆಯೊಂದಿಗೆ ಸ್ಥಾಪಿಸಿದ್ದಾರೆ.

ಇಲ್ಲಿ ಭೂಮಿ ಕಳೆದುಕೊಂಡಿರುವ ರೈತರಿಗೆ ನೀಡಿರುವ ಪರಿಹಾರ ಹಾಗೂ ಅವರ ಮಕ್ಕಳಿಗೆ ನೀಡಿರುವ ಉದ್ಯೋಗದ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸುತ್ತ ಈ ಮಾಹಿತಿ ನೀಡಿದರು.

ಧಾರವಾಡ ಬಳಿಯ ಬೇಲೂರು ಕೈಗಾರಿಕೆ ಪ್ರದೇಶ ಸ್ಥಾಪನೆಗೆ 1984 ಬೇಲೂರಿನಲ್ಲಿ 497 ಎಕರೆ,1985 ರಲ್ಲಿ ಮುಮ್ಮಿಗಟ್ಟಿಯಲ್ಲಿ 891 ಎಕರೆ, ನೀರಲಕಟ್ಟಿಯಲ್ಲಿ 116 ಹಾಗೂ ಗುಗ್ಗರಕಟ್ಟಿಯಲ್ಲಿ 488 ಎಕರೆ ಸೇರಿ ಒಟ್ಟು 1992 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ಪ್ರತಿ ಎಕರೆ ಖುಷ್ಕಿ ಭೂಮಿಗೆ ತಲಾ 12 ಸಾವಿರ,ನೀರಾವರಿ ಭೂಮಿಗೆ ತಲಾ 15 ಸಾವಿರ ರೂ.ಗಳಿಂದ 18 ಸಾವಿರ ರೂ.ಗಳವರೆಗೆ ಪರಿಹಾರ ಒದಗಿಸಲಾಗಿದೆ.

ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 1614 ಉದ್ಯೋಗಗಳನ್ನು ನೀಡಲಾಗಿದೆ.

ಇವರಲ್ಲಿ 1538 ಜನ ಸ್ಥಳೀಯರಾಗಿದ್ದಾರೆ.ಭೂಮಿ ಕಳೆದುಕೊಂಡ 76 ಜನರು ಇದ್ದಾರೆ.

ಪ್ರಸ್ತುತ ಬೇಲೂರು ಕೈಗಾರಿಕಾ ಪ್ರದೇಶಕ್ಕೆ ಕೋಟೂರು ಮತ್ತು ಬೇಲೂರು ಗ್ರಾಮಗಳಲ್ಲಿ 594 ಎಕರೆ 34 ಗುಂಟೆ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲು 2016 ರ ಫೆಬ್ರವರಿ 18 ರಂದು ಅಧಿಸೂಚನೆ ಹೊರಡಿಸಲಾಗಿದೆ.

ಪ್ರತಿ ಎಕರೆಗೆ 30 ಲಕ್ಷ ರೂ.ಗಳಂತೆ ಈವರೆಗೆ 521 ಎಕರೆ ಜಮೀನಿಗೆ ಪರಿಹಾರ ಪಾವತಿಸಲಾಗಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಹಂಚಿಕೆದಾರರೊಂದಿಗೆ ಮಾಡಿಕೊಳ್ಳುವ ಗುತ್ತಿಗೆ ಕರಾರು ಪತ್ರದಲ್ಲಿ ಸರ್ಕಾರದ ಕೈಗಾರಿಕಾ ನೀತಿಯನುಸಾರ ಉದ್ಯೋಗ ಕಲ್ಪಿಸಬೇಕೆಂಬ ಷರತ್ತನ್ನು ವಿಧಿಸಲಾಗಿದೆ.

ಜಮೀನು ಕಳೆದುಕೊಂಡ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗವಕಾಶ ಕಲ್ಪಿಸಬೇಕೆಂದು ಕರಾರಿನಲ್ಲಿ ತಿಳಿಸಲಾಗಿರುತ್ತದೆ.
ಉದ್ಯೋಗದ ನಿರೀಕ್ಷೆಯಲ್ಲಿರುವ ರೈತರ ಮಕ್ಕಳ ವಿವರಗಳನ್ನು ನೀಡಿದರೆ ಬೇಲೂರು ಹಾಗೂ ಇತರೆ ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯೋಗ ಒದಗಿಸಲು ಕೈಗಾರಿಕಾ ಸಂಸ್ಥೆಗಳಿಗೆ ಸೂಚಿಸಲಾಗುವುದು ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *