ರಾಜ್ಯ

ಮಳೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ 97 ಮನೆಗಳಿಗೆ ಭಾಗಶಃ ಹಾನಿ 

ಧಾರವಾಡ prajakiran.com ಮೇ.20:

ಜಿಲ್ಲೆಯಲ್ಲಿ ನಿನ್ನೆಯಿಂದ ನಿರಂತರವಾಗಿ ಆಗುತ್ತಿರುವ ಮಳೆಯಿಂದಾಗಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 97 ಮನೆಗಳಿಗೆ ಭಾಗಶಃ ಹಾನಿ ಆಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ತಾಲ್ಲೂಕಿನಲ್ಲಿ 1, ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 12, ಹುಬ್ಬಳ್ಳಿ ನಗರ ತಾಲೂಕಿನಲ್ಲಿ 5, ಕುಂದಗೋಳ ತಾಲೂಕಿನಲ್ಲಿ 49, ಕಲಘಟಗಿ ತಾಲೂಕಿನಲ್ಲಿ 1, ನವಲಗುಂದ ತಾಲೂಕಿನಲ್ಲಿ 23 ಮತ್ತು ಅಣ್ಣಿಗೇರಿ ತಾಲೂಕಿನಲ್ಲಿ 3 ಮನೆಗಳು ಸೇರಿದಂತೆ ಜಿಲ್ಕೆಯಲ್ಲಿ ಒಟ್ಟು 97 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

 *ಹಳ್ಳಕೊಳ್ಳ ದಾಟುವ ಪ್ರಯತ್ನ ಬೇಡ*
*ಎಲ್ಲಾ ತಾಲ್ಲೂಕುಗಳಲ್ಲಿ ಆಡಳಿತಯಂತ್ರ 24X7 ಸ್ಪಂದನೆ ನೀಡಲಿ*

ಅತಿವೃಷ್ಟಿಯಿಂದ ಎದುರಾಗುವ ಸಮಸ್ಯೆಗಳಿಗೆ ಜಿಲ್ಲೆಯ ಎಲ್ಲಾ ಇಲಾಖೆಗಳು ತಕ್ಷಣ ಸ್ಪಂದನೆ ನೀಡಬೇಕು.ಅಂಗನವಾಡಿ ಹಾಗೂ ಶಾಲಾ ಕಟ್ಟಡಗಳ ಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ವರದಿ ನೀಡಬೇಕು.

ಮನೆಗಳ ಹಾನಿ ಕುರಿತು ಈಗಿನಿಂದಲೇ ನಿಖರ ದಾಖಲೆಗಳ ಸಂಗ್ರಹ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆನ್‌ಲೈನ್ ಮೂಲಕ‌ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಜನ ಜೀವನದ ಮೇಲೆ ಪರಿಣಾಮ ಉಂಟಾಗಿದೆ.

ಅತಿವೃಷ್ಟಿಯಿಂದ ಸಂಕಷ್ಟಕ್ಕೀಡಾಗಿರುವ ಜನತೆಗೆ ಜಿಲ್ಲಾಡಳಿತ ತಕ್ಷಣ ಸ್ಪಂದನೆ ನೀಡಬೇಕು,ಸಂಬಂಧಿಸಿದ ಎಲ್ಲಾ ಇಲಾಖೆಗಳು 24X7 ನಿರಂತರವಾಗಿ ಕಾರ್ಯ ನಿರ್ವಹಿಸಬೇಕು.

ಜೀವರಕ್ಷಕ ಜಾಕೆಟ್,ಟಾರ್ಚ್,ಬೋಟ್ ಮತ್ತಿತರ ತುರ್ತು ಪರಿಸ್ಥಿತಿ ನಿರ್ವಹಣಾ ಸಾಧನಗಳೊಂದಿಗೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಸನ್ನದ್ಧವಾಗಿರಬೇಕು.

ಜಿಲ್ಲೆಯ ಅಂಗನವಾಡಿ ಹಾಗೂ ಶಾಲಾ ಕಟ್ಟಡಗಳ ಸ್ಥಿತಿಗತಿ ಕುರಿತು ಖುದ್ದು ಪರಿಶೀಲನೆ ಮಾಡಿ ಆಯಾ ಇಲಾಖೆಗಳ ಅಧಿಕಾರಿಗಳು ವರದಿ ನೀಡಬೇಕು.

ಹಳ್ಳ ಕೊಳ್ಳಗಳು ತುಂಬಿ ಹರಿಯುವಾಗ ಅವುಗಳನ್ನು ದಾಟುವ ಪ್ರಯತ್ನಗಳಿಗೆ ಕೈ ಹಾಕದಂತೆ ಜನರಲ್ಲಿ ಎಚ್ಚರಿಕೆ ಮೂಡಿಸಲು ಗ್ರಾಮ ಪಂಚಾಯತಿಗಳ ಮೂಲಕ ಡಂಗೂರ ಸಾರಿಸಬೇಕು.

ಕಚ್ಚಾಮನೆಗಳಲ್ಲಿ ಇರುವವರಿಗೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜನತೆಯು ತುರ್ತು ಸಂದರ್ಭಗಳಲ್ಲಿ ಜಿಲ್ಲಾಡಳಿತ, ಪೊಲೀಸ್ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಸಹಾಯವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬೇಕು.

ದೂರು ಸ್ವೀಕರಿಸಿದ ಕೂಡಲೇ ಸಂಬಂಧಿಸಿದ ಇಲಾಖೆಗಳು ತ್ವರಿತ ಸ್ಪಂದನೆ ನೀಡಬೇಕು ಎಂದು ಸೂಚಿಸಿದರು.

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಮಾತನಾಡಿ ,ಹಿಂದಿನ ವರ್ಷಗಳ ಅನುಭವದ ಆಧಾರದಲ್ಲಿ ಅತಿವೃಷ್ಟಿ ನಿರ್ವಹಣೆಗೆ ಅಣಿಯಾಗಬೇಕು

ಅವಳಿನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ತೊಂದರೆ ಎದುರಾದರೆ ಪೊಲೀಸ್ ಸಹಾಯವಾಣಿ 112 ಸಂಪರ್ಕಿಸದರೆ,15 ರಿಂದ 20 ನಿಮಿಷಗಳ ಅವಧಿಯಲ್ಲಿ ನೆರವಿಗೆ ಧಾವಿಸಲಾಗುತ್ತದೆ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಮಾತನಾಡಿ,ಜಿಲ್ಲೆಯ ಎಲ್ಲಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಆನ್‌ಲೈನ್ ಸಭೆ ನಡೆಸಿ,ಹಾನಿಯ ಪ್ರಮಾಣವನ್ನು ಇಂಜಿನಿಯರುಗಳ ಸಹಯೋಗದೊಂದಿಗೆ ದಾಖಲಿಸಲು ನಿರ್ದೇಶನ ನೀಡಲಾಗಿದೆ.ಗ್ರಾಮಸ್ಥರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದನೆ ನೀಡಲಾಗುತ್ತಿದೆ ಎಂದರು.

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ ಮಾತನಾಡಿ,ಅವಳಿನಗರದ ತಗ್ಗು ಪ್ರದೇಶಗಳಲ್ಲಿ ನೀರು ಹೊರ ಹಾಕಲು ತಾತ್ಕಾಲಿಕ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.

ಸಂಕಷ್ಟದಲ್ಲಿರುವ ನಾಗರಿಕರಿಗೆ ಆಹಾರದ ಪೊಟ್ಟಣಗಳ ಪೂರೈಕೆಗೆ ಕ್ರಮವಹಿಸಲಾಗಿದೆ.ಮೂಲಸೌಕರ್ಯ, ಕೃಷಿ,ತೋಟಗಾರಿಕೆ ವಿವಿಧ ಇಲಾಖೆಗಳ ಅಧಿಕಾರಿ,ಸಿಬ್ಬಂದಿಗಳನ್ನೊಳಗೊಂಡ ತಂಡಗಳನ್ನು ಪರಿಹಾರ ಕಾರ್ಯದಲ್ಲಿ ತೊಡಗಿಸಲಾಗುತ್ತಿದೆ.

ಮಳೆಯಲ್ಲಿ ಕರ್ತವ್ಯ ನಿರ್ವಹಿಸಲು ಪೌರಕಾರ್ಮಿಕರಿಗೆ ರೇನ್‌ಕೋಟುಗಳನ್ನು ಪೂರೈಸಲಾಗುತ್ತಿದೆ ಎಂದರು.

ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಅಧಿಕಾರಿ ವಿನಾಯಕ ಹಟ್ಟಿಕಾರ ಮಾತನಾಡಿ,ಜೀವರಕ್ಷಕ ಸಾಮಗ್ರಿಗಳೊಂದಿಗೆ ಇಲಾಖೆ ಸನ್ನದ್ಧವಾಗಿದೆ.

ಧಾರವಾಡ,ಕುಂದಗೋಳ ಹಾಗೂ ಕಲಘಟಗಿಯಲ್ಲಿ ತಲಾ ಒಂದರಂತೆ ಬೋಟುಗಳನ್ನು ಸಿದ್ಧವಾಗಿರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್,ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್‌. ಬಿ.ಚೌಡಣ್ಣವರ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಸಿ.ಕರಿಗೌಡರ್ ,ತೋಟಗಾರಿಕೆ ಉಪನಿರ್ದೇಶಕ ಡಾ.ಕಾಶಿನಾಥ ಭದ್ರಣ್ಣವರ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *