ರಾಜ್ಯ

ಧಾರವಾಡದ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ೫ ಸಾವಿರಕ್ಕೂ ಅಧಿಕ ಹಾಸಿಗೆ  ಸಿದ್ಧ

ಧಾರವಾಡ prajakiran.com  : ಧಾರವಾಡ ಜಿಲ್ಲಾಡಳಿತದ ವತಿಯಿಂದ ಕೋವಿಡ್ ಕೇರ್ ಸೆಂಟರುಗಳಲ್ಲಿ ಸುಮಾರು ೫ ಸಾವಿರಕ್ಕೂ ಅಧಿಕ ಹಾಸಿಗೆಗಳನ್ನು ಸಿದ್ಧಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಕೊರೊನಾ ವೈರಾಣು ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ  ಜೀವ ಉಳಿಸುವುದು ಅತಿಮುಖ್ಯ ಕರ್ತವ್ಯವಾಗಿದೆ.

ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇದೆ. ಹೀಗಾಗಿ ಅಂತಹ ವ್ಯಕ್ತಿಗಳಿಗೆ ತೀವ್ರ ಉಸಿರಾಟದ ತೊಂದರೆ ಹಾಗೂ ಇತರ ಲಕ್ಷಣಗಳಿರುವ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.

ಯಾವುದೇ ಆಸ್ಪತ್ರೆಗಳು ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಣಿಯಾಗಲು ಬಯಸಿದರೆ ತಕ್ಷಣ ಅಗತ್ಯ ಆಡಳಿತಾತ್ಮಕ ಕ್ರಮ ಕೈಗೊಂಡು ಸಹಕರಿಸಲಾಗುವುದು ಎಂದು ಭರವಸೆ ನೀಡಿದರು.

ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲ ಹಾಗೂ ಹಾಸಿಗೆಗಳ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಕ್ರೋಢೀಕರಿಸಿಕೊಂಡು ದೇಶಕ್ಕೆ ಎದುರಾಗಿರುವ ಕೋವಿಡ್ ಸಂಕಷ್ಟ ಸಮರ್ಥವಾಗಿ ಎದುರಿಸಲು ಕೈಜೋಡಿಸಬೇಕು ಎಂದರು.

ಸೋಂಕಿತರಿಗೆ ಭರವಸೆದಾಯಕ ಚಿಕಿತ್ಸೆ  ನೀಡಿ, ಆತ್ಮಸ್ಥೈರ್ಯ ಹೆಚ್ಚಿಸಬೇಕು.  ಅನಗತ್ಯವಾಗಿ ಭಯ, ಆತಂಕಕ್ಕೆ ಒಳಗಾಗಿರುವವನ್ನು ಆ ಪರಿಸ್ಥಿತಿಯಿಂದ ಹೊರತರಲು ಪ್ರಯತ್ನಿಸಬೇಕು. ಸರ್ಕಾರ ಮತ್ತು ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳಿಗೆ ಎಲ್ಲಾ ಸಹಕಾರ ನೀಡುತ್ತಿವೆ ಎಂದರು.

ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿಯೊಬ್ಬ ಸೋಂಕಿತರಿಗೂ ಹಾಸಿಗೆ,ಚಿಕಿತ್ಸೆ ದೊರೆಯುವಂತೆ ಮಾಡುವುದು ಸರ್ಕಾರದ ಜೊತೆಗೆ  ಖಾಸಗಿ ಆಸ್ಪತ್ರೆಗಳ ಜವಾಬ್ದಾರಿಯೂ ಕೂಡ ಆಗಿದೆ.

ಖಾಸಗಿ ಆಸ್ಪತ್ರೆಗಳು ಸೌಮ್ಯ ಲಕ್ಷಣ ಇರುವ ಹಾಗೂ ಲಕ್ಷಣರಹಿತ ರೋಗಿಗಳನ್ನು ಹೋಂ ಐಸೋಲೇಷನ್ ಗೆ ಶಿಫಾರಸ್ಸು ಮಾಡಬೇಕು ಎಂದರು.

ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು ಮಾತನಾಡಿ,   ಮಕ್ಕಳು, ಹೆರಿಗೆ, ಕ್ಯಾನ್ಸರ್ ಮತ್ತಿತರ ವಿಶೇಷ ಪ್ರಕರಣಗಳಿಗೆ ಮೀಸಲಾಗಿರುವ ಆಸ್ಪತ್ರೆಗಳಿಗೆ ಅದೇ ವರ್ಗದ ಕೋವಿಡ್ ಸೋಂಕಿತರನ್ನು ಕಳುಹಿಸಿದರೆ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ ಎಂದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ವಿಶೇಷ ಚಿಕಿತ್ಸೆಯ ಆಸ್ಪತ್ರೆಗಳಿಗೆ ಅದೇ ಮಾದರಿಯ ಸೋಂಕಿತರನ್ನು ಕಳುಹಿಸಲು ನಿರ್ಧರಿಸಲಾಗಿದೆ ಎಂದರು.

ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ  ಇಬ್ರಾಹಿಂ ಮೈಗೂರ, ಡಿಮ್ಹಾನ್ಸ್ ಮುಖ್ಯ ಆಡಳಿತಾಧಿಕಾರಿ ಡಾ.ಷಣ್ಮುಖ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್, ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ.ಎಸ್. ಎಮ್. ಹೊನಕೇರಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಶಶಿ ಪಾಟೀಲ, ಹಿರಿಯ ಕೆಎಎಸ್ ಅಧಿಕಾರಿ ಶಾರದಾ ಕೋಲಕಾರ, ಐಎಂಎ ಆಧ್ಯಕ್ಷ ಡಾ.ಸಂದೀಪ್ ಪ್ರಭು ಸೇರಿದಂತೆ ಅವಳಿನಗರದ ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು ಸಭೆಯಲ್ಲಿ ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *