ಧಾರವಾಡ prajakiran.com : ಕೋವಿಡ್ -19 ಸೋಂಕು ದೃಢಪಟ್ಟು ಕಳೆದ ಮೇ 23 ರಂದು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಾಗಿದ್ದ ಹುಬ್ಬಳ್ಳಿಯ ಗಿರಣಿ ಚಾಳ ನಿವಾಸಿ ಪಿ-1943 ನೇ ಸೋಂಕಿತ 58 ವರ್ಷದ ವ್ಯಕ್ತಿ ಜೂನ್ 9 ರಂದು ರಾತ್ರಿ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಪ್ರವಾಸ ಹಿನ್ನೆಲೆ ಹೊಂದಿದ್ದ ಇವರಲ್ಲಿ ಕೋವಿಡ್ ಪಾಸಿಟಿವ್ ಜೊತೆಗೆ ತೀವ್ರ ಉಸಿರಾಟದ ತೊಂದರೆ , ಮಧುಮೇಹ ,ಬಹು ಅಂಗಾಂಗ ವೈಫಲ್ಯ ಮತ್ತಿತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು.
ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸರ್ಕಾರದ ಮಾರ್ಗಸೂಚಿಗಳನ್ವಯ ಹುಬ್ಬಳ್ಳಿಯ ಹೆಗ್ಗೇರಿ ರುದ್ರಭೂಮಿಯಲ್ಲಿ ಜರುಗಿದೆ ಎಂದು ಧಾರವಾಡ ಜಿಲ್ಲಾಡಳಿತ ಖಚಿತ ಪಡಿಸಿದೆ.
ಆ ಮೂಲಕ ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಕರೋನಾ ಸೋಂಕಿಗೆ ಮೊದಲ ಬಲಿಯಾದಂತಾಗಿದೆ. ಈವರೆಗೆ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಪ್ರಕರಣ 70 ಕ್ಕೆ ಏರಿಕೆಯಾಗಿದೆ.
ಈ ಪೈಕಿ ಈಗಾಗಲೇ 45 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ . ಉಳಿದವರು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.