ರಾಜ್ಯ

ಎಸ್.ಪಿ, ಡಿಸಿಪಿ ಹೊಣೆ ಮಾಡಿ ಕ್ರಮ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ ಸಿಎಂ

*90 ದಿನಗಳ ಒಳಗೆ ಆರೋಪ ಪಟ್ಟಿ ಸಲ್ಲಿಸದಿದ್ದರೆ ಆರೋಪಿಗಳಿಗೆ ಜಾಮೀನು ಸಿಗತ್ತೆ*

*ಜಾಮೀನು ಪಡೆದವರಿಗೆ ಕಾನೂನಿನ ಭಯ ಇರತ್ತಾ?*

*ದೌರ್ಜನ್ಯ ನಡೆದು 120 ಕಳೆದರೂ ಆರೋಪ ಪಟ್ಟಿ ಏಕೆ ದಾಖಲಾಗಿಲ್ಲ: ಖಾರವಾಗಿ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ*

ಬೆಂಗಳೂರು ಸೆ 7: ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಮತ್ತು ಜಾತಿ ದೌರ್ಜನ್ಯದ ಕೊಲೆ ಪ್ರಕರಣಗಳಲ್ಲಿ 120 ದಿನ ಕಳೆದರೂ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಏಕೆ ದಾಖಲಾಗಿಲ್ಲ ಎಂದು ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೀಗೇ ಆದರೆ ಎಸ್.ಪಿ, ಡಿಸಿಪಿ ಗಳನ್ನು ಹೊಣೆ ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಂಕಿ ಅಂಶಗಳನ್ನು ಮುಂದಿಟ್ಟು ಅಧಿಕಾರಿಗಳನ್ನು ತೀವ್ರವಾಗಿ ಪ್ರಶ್ನಿಸಿದರು.

ಕಳೆದ ಐದು ವರ್ಷಗಳಲ್ಲಿ ದಾಖಲಾದ 10893 ಪ್ರಕರಣಗಳಲ್ಲಿ 1100 ಪ್ರಕರಣಗಳಲ್ಲಿ 120 ದಿನಗಳಲ್ಲಿಯೂ ಚಾರ್ಜ್‌ ಶೀಟ್‌ ಹಾಕಿಲ್ಲ. ಇದು ಪರಿಶಿಷ್ಟ ಜಾತಿ, ಪಂಗಡದವರ ಬಗ್ಗೆ ಅಧಿಕಾರಿಗಳ ಅಸಡ್ಡೆಯನ್ನು ತೋರಿಸುತ್ತದೆ. ಇದರಿಂದ ಸಂತ್ರಸ್ತರಿಗೆ ನ್ಯಾಯ ಕೊಡಿಸಿದಂತಾಗುವುದಿಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಅಪರಾಧ ಪ್ರಕ್ರಿಯಾ ಸಂಹಿತೆ (CRPC) ಅಡಿಯಲ್ಲಿ 90 ದಿನಗಳೊಳಗೆ ಚಾರ್ಜ್‌ ಶೀಟ್‌ ಹಾಕದಿದ್ದರೆ, ಎಸ್ ಸಿ /ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ 60 ದಿನಗಳೊಳಗೆ ಆರೋಪ ಪಟ್ಟಿ ದಾಖಲಾಗದಿದ್ದರೆ ಆರೋಪಿಗಳಿಗೆ ಸಲೀಸಾಗಿ ಜಾಮೀನು ಸಿಗುತ್ತದೆ. ಹೀಗೆ ಜಾಮೀನು ಪಡೆದವರಿಗೆ ಕಾನೂನಿನ ಭಯ ಇರುತ್ತದಾ ಎಂದು ಖಾರವಾಗಿ ಪ್ರಶ್ನಿಸಿದರು.

ಕರ್ನಾಟಕ ಪೊಲೀಸ್ ದೇಶದಲ್ಲೇ ನಂಬರ್ ಒನ್ ಎನ್ನುವ ಅಭಿಪ್ರಾಯ ಇದೆ. ಆದರೆ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಶಿಕ್ಷೆ ಪ್ರಮಾಣ ಕೇವಲ 3.44 ಇದೆ.

ಅಂದರೆ ಪೊಲೀಸ್ ಇಲಾಖೆ ಕಳೆದ ಐದು ವರ್ಷಗಳಲ್ಲಿ ಎಸ್ ಸಿ/ಎಸ್ ಟಿ ದೌರ್ಜನ್ಯ ಪ್ರಕರಣಗಳ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿತ್ತಾ ಎಂದು ಪ್ರಶ್ನಿಸಿ ಇದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಇದಕ್ಕೆ ಎಸ್.ಪಿ. ಹಾಗೂ ಡಿಸಿಪಿಗಳನ್ನು ನೇರವಾಗಿ ಹೊಣೆ ಮಾಡಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ವರಿಸಿ ಪ್ರಕರಣಗಳ ತನಿಖಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಜಿ&ಐಜಿಗೆ ಸೂಚಿಸಿದರು.

*ಇತರೆ ಹೈಲೈಟ್ಸ್*

*ಈ ಪ್ರಕರಣಗಳ ತನಿಖೆಯ ಪ್ರಗತಿಯ ಕುರಿತು ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಮಾಡಬೇಕು*

*ರಾಜ್ಯದಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಕಾಯ್ದೆಯಡಿ Conviction rate 3.44% ಇದೆ. ಅಂದರೆ prosecution has failed. ಶಿಕ್ಷೆ ಪ್ರಮಾಣದಲ್ಲಿ ರಾಜ್ಯ ದೇಶದಲ್ಲಿ 21 ನೇ ಸ್ಥಾನದಲ್ಲಿದೆ. ಶಿಕ್ಷೆ ಪ್ರಮಾಣ ಕಡಿಮೆ ಇರುವುದರಿಂದ ಚಾಳಿ ಬಿದ್ದ ಆರೋಪಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು*

*ಎಲ್ಲ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆಗಳಲ್ಲಿ ದೌರ್ಜನ್ಯ ಪ್ರಕರಣಗಳ ಪ್ರಗತಿ ಪರಿಶೀಲನೆ ಮಾಡುವ ಕುರಿತು ಸುತ್ತೋಲೆ ಹೊರಡಿಸುತ್ತೇನೆ*

*ಜಿಲ್ಲಾಧಿಕಾರಿಗಳೂ ಕಡ್ಡಾಯವಾಗಿ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಮತ್ತೊಂದು ಸುತ್ತೋಲೆ ಹೊರಡಿಸಲಾಗುವುದು. ಜಿಲ್ಲಾ ಮತ್ತು ತಾಲೂಕು ಕೆಡಿಪಿ ಸಭೆಗಳಲ್ಲಿ ಜಾತಿ ದೌರ್ಜನ್ಯ ಪ್ರಕರಣಗಳ ರಿವ್ಯೂ (ಪರಿಶೀಲನೆ) ನಡೆಸದ ಕಾರಣದಿಂದ ಹೀಗಾಗುತ್ತದೆ. ಆದ್ದರಿಂದ ಶಾಸಕರು, ಜಿಲ್ಲಾ ಸಚಿವರು, ಡಿಸಿ-ಎಸ್ ಪಿ ಗಳು ಕಡ್ಡಾಯವಾಗಿ ರಿವ್ಯೂ ಮಾಡಬೇಕು ಎಂದು ಸ್ಪಷ್ಟವಾಗಿ ಸೂಚಿಸಿದರು*

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *