ರಾಜ್ಯ

ಬಿ ಎಡ್ ಪರೀಕ್ಷೆ ಕೈ ಬಿಟ್ಟ ವಿಜಯನಗರ, ದಾವಣಗೆರೆ ವಿಶ್ವವಿದ್ಯಾಲಯ

ಪರೀಕ್ಷೆ ನಡೆಸದೆ ಬಡ್ತಿ ನೀಡಲು ನಿರ್ಧಾರ

 ಕರ್ನಾಟಕ ವಿಶ್ವವಿದ್ಯಾಲಯದ ಹೆಜ್ಜೆ ಮಾತ್ರ ಗೊಂದಲ

ಧಾರವಾಡ prajakiran.com : ಬಿ ಎಡ್ ಪ್ರಥಮ ಹಾಗೂ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ನಡೆಸದೆ ಬಡ್ತಿ ನೀಡಲು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯ ನಿರ್ಧರಿಸಿದೆ.

ಆದರೆ ಕರ್ನಾಟಕ ವಿಶ್ವವಿದ್ಯಾಲಯ ಮಾತ್ರ  ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ ನಾರಾಯಣ ಅವರ ಆದೇಶವನ್ನು ಗಾಳಿಗೆ ತೂರಿ ಪರೀಕ್ಷೆ ನಡೆಸಲು ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ವಿದ್ಯಾರ್ಥಿ ಸಮೂಹವನ್ನು ಕಾಡಲಾರಂಭಿಸಿದೆ.

ಇದು ವಿದ್ಯಾರ್ಥಿಗಳ ಬದುಕಿನ ಪ್ರಶ್ನೆಯಾಗಿದೆ. ಅವರ ಜೊತೆಗೆ ಚೆಲ್ಲಾಟವಾಡುವುದನ್ನು ಕೈ ಬಿಟ್ಟು ಪರೀಕ್ಷೆ ನಡೆಸುವುದಾದರೂ ಕನಿಷ್ಟ ಒಂದು ತಿಂಗಳ ಸಮಯಾವಕಾಶ ನೀಡಿ, ಅಲ್ಲದೆ, ಪ್ರತಿ ಪರೀಕ್ಷೆ ನಂತರ ಎರಡು ಮೂರು ದಿನ ಸಮಯ ನೀಡಿ ಎಂಬುದು ವಿದ್ಯಾರ್ಥಿಗಳ ಅಳಲಾಗಿದೆ.

ಆದರೆ ಕವಿವಿ ಮಾತ್ರ ಬಿಎಡ್ ಪ್ರಥಮ ಸೆಮಿಸ್ಟರ್  ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಯಾವುದೇ ಸಮಯ ನೀಡದೆ, ಸೆ. 11ರಿಂದ 19ರವರೆಗೆ ನಿರಂತರವಾಗಿ 5 ವಿಷಯಗಳ ಕುರಿತು ಪರೀಕ್ಷೆ ಹಮ್ಮಿಕೊಂಡಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇಷ್ಟು ದಿನ ಪರೀಕ್ಷೆ ಇಲ್ಲ ಎಂದುಕೊಂಡಿದ್ದ ವಿದ್ಯಾರ್ಥಿಗಳಿಗೆ ಕೇವಲ 10 ದಿನಗಳ ಅವಕಾಶ ನೀಡಿ ಕೊನೆ ಕ್ಷಣದಲ್ಲಿ ಬಿಎಡ್  ಪರೀಕ್ಷೆ ನಡೆಸಲು ಕರ್ನಾಟಕ ವಿಶ್ವವಿದ್ಯಾಲಯ ಸಜ್ಜಾಗಿರುವುದು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ನೂರಾರು ಕಾಲೇಜಿಗಳ  ಸಾವಿರಾರು ವಿದ್ಯಾರ್ಥಿಗಳಿಗೆ ಆತಂಕ ಮತ್ತು ಕಳವಳ, ಸಂಕಷ್ಟ ತಂದಿದೆ

ಹೀಗಾಗಿ ಗೊಂದಲಕ್ಕೊಳಗಾದ ಕೆಲ ವಿದ್ಯಾರ್ಥಿಗಳು ಎದ್ನೋ ಬಿದ್ನೋ ಅಂತ ಓದಲು ಹರಸಾಹಸ ಮಾಡುತ್ತಿದ್ದರೆ ಇನ್ನೂ ಕೆಲವರು ಹೋರಾಟದ ಹಾದಿ ತುಳಿಯಲು ನಿರ್ಧರಿಸಿದ್ದಾರೆ.

ಅಲ್ಲದೆ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಪ್ರಾಧ್ಯಾಪಕರು ವಿಶ್ವವಿದ್ಯಾಲಯದ ನಡೆಗೆ ಅಸಮಾಧಾನ ವ್ಯಕ್ತಪಡಿಸದೆ ಮೌನಕ್ಕೆ ಶರಣಾಗಿರುವುದು ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.    

ಕರ್ನಾಟಕ ವಿಶ್ವವಿದ್ಯಾಲಯ ತರಾತುರಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿರುವುದಾದರೂ ಏಕೆ ಎಂಬ ಪ್ರಶ್ನೆ ವಿದ್ಯಾರ್ಥಿಗಳದ್ದಾಗಿದೆ.

ಕರ್ನಾಟಕ ವಿಶ್ವವಿದ್ಯಾಲಯ ಈಗಲಾದರೂ ಎಚ್ಚೆತ್ತುಕೊಂಡು ತನ್ನ ಪ್ರಮಾದ ಸರಿಪಡಿಸಿಕೊಳ್ಳದಿದ್ದರೆ ವಿದ್ಯಾರ್ಥಿಗಳು ಹೋರಾಟದ ಹಾದಿ ತುಳಿಯುವುದು ನಿಶ್ಚಿತ ಎಂದು ನೋಂದ ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.

ಕವಿವಿ ಆಡಳಿತ ಕುಲಸಚಿವರು ಹಾಗೂ ಮೌಲ್ಯಮಾಪನ ಕುಲಸಚಿವರು ಸೆ. 5 ರಂದು ಸಭೆ ಸೇರಿ ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಿ, ದಾವಣಗೆರೆ ಹಾಗೂ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಹೆಜ್ಜೆ ಅನುಸರಿಸಿದರೆ ವಿದ್ಯಾರ್ಥಿಗಳು ನಿರಾಳರಾಗಲಿದ್ದಾರೆ.

ಇಲ್ಲದಿದ್ದರೆ ಹೋರಾಟದ ಹಾದಿ ಹಿಡಿಯುವ ಅವರಿಗೆ ಹಲವು ವಿದ್ಯಾರ್ಥಿ ಸಂಘಟನೆಗಳು ಕೂಡ ಸಾಥ್ ನೀಡಲು ಮುಂದಾಗಿರುವುದು ವಿಶ್ವವಿದ್ಯಾಲಯಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಹೀಗಾಗಿ ಸೆ. 5ರಂದು ಕವಿವಿ ಆಡಳಿತ ಕುಲಸಚಿವರು ಹಾಗೂ ಮೌಲ್ಯಮಾಪನ ಕುಲಸಚಿವರು ಬಿ ಎಡ್ ಪರೀಕ್ಷೆಗಳನ್ನ ರದ್ದುಪಡಿಸಿ ಆ ವಿಶ್ವವಿದ್ಯಾಲಯಗಳ ಮಾದರಿಯನ್ನು ಅನುಸರಿಸುತ್ತಾರಾ ಇಲ್ಲವೇ ಬೇರಾವ ನಿರ್ಧಾರ ಪ್ರಕಟಿಸುತ್ತಾರೆ ಎಂಬುದನ್ನು ವಿದ್ಯಾರ್ಥಿಗಳು ಸಹ ಕಾತರದಿಂದ ಎದುರು ನೋಡುತ್ತಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *