ರಾಜ್ಯ

ಧಾರವಾಡದಲ್ಲಿ 120 ಜನ ಇರುವ ಮನೆಯ ಕುಟುಂಬದ ಸದಸ್ಯನಿಗೆ ಸೋಂಕು…!

ಮಂಜುನಾಥ ಕವಳಿ

ಧಾರವಾಡ prajakiran.com : ಬರೋಬ್ಬರಿ 120 ಜನ ವಾಸವಿರುವ ಮನೆಯ ಕುಟುಂಬದ ಸದಸ್ಯನಿಗೆ ಸೋಂಕು ವಕ್ಕರಿಸಿರುವುದು ಗ್ರಾಮಸ್ಥರಿಗೆ ಆತಂಕ ಮೂಡಿಸಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಕರೊನಾ ಸೋಂಕು ದಿನದಿಂದ ದಿನಕ್ಕೆ ಹಬ್ಬುತ್ತಿರುವ ಬೆನ್ನ ಹಿಂದೆಯೇ ಈಗ ಅದರ ಪಕ್ಕದಲ್ಲೇ ಇರುವ ಶಿರಕೋಳ ಗ್ರಾಮಕ್ಕೂ ಕರೊನಾ ಪಾದಾರ್ಪಣೆ ಮಾಡಿರುವುದು ಸುತ್ತಲಿನ ಗ್ರಾಮಸ್ಥರಿಗೆ ಬೆಚ್ಚಿಬೀಳಿಸಿದೆ.

ಅದರಲ್ಲೂ ಶಿರಕೋಳ ಗ್ರಾಮದ ಕೂಡು ಕುಟುಂಬವೊಂದಕ್ಕೆ ಮಹಾಮಾರಿ ಕರೊನಾ ತಾಕಿದ್ದು, ಗ್ರಾಮಸ್ಥರಿಗೆ ಬಹಳಷ್ಟು ಆತಂಕ ಸೃಷ್ಟಿಸಿದೆ.

ಹೌದು! 120 ಜನ ಒಂದೇ ಮನೆಯಲ್ಲಿ ಇರುವ ಕುಟುಂಬದ ಸದಸ್ಯನೊಬ್ಬನಿಗೆ ಸೋಂಕು ತಗುಲಿರುವುದು ಆ ಕುಟುಂಬದ ಎಲ್ಲ ಸದಸ್ಯರಿಗೂ ಕರೊನಾ ಆತಂಕ ಎದುರಾಗಿದ್ದಲ್ಲದೇ ಇಡೀ ಗ್ರಾಮಸ್ಥರು ಕೂಡ ಎಲ್ಲಿ ತಮಗೆ ಸೋಂಕು ಹರಡುತ್ತಾ ಎಂಬ ಆತಂಕದಲ್ಲಿಯೇ ದಿನದೂಡುತ್ತಿದ್ದಾರೆ.  

ಶಿರಕೋಳ ಗ್ರಾಮದ 36 ವರ್ಷದ ಯುವಕನಿಗೆ ಸೋಂಕು ಇರುವುದು ನಿನ್ನೇಯಷ್ಟೇ ದೃಢಪಟ್ಟಿದೆ. ಆತನನ್ನು ಪಿ-12121 ಎಂದು ಗುರುತಿಸಲಾಗಿದೆ. ಈತನಿಗೆ ಕಳೆದ ಒಂದು ವಾರದಿಂದ ತೀವ್ರ ಜ್ವರ ಕಾಣಿಸಿಕೊಂಡಿತ್ತು.

ಅದು ವಿಷಮ ಶೀತ ಜ್ವರ ಇರಬಹುದು ಎಂದು ಅದೇ ಗ್ರಾಮದ ಸ್ಥಳೀಯ ವೈದ್ಯರೊಬ್ಬರು ಚಿಕಿತ್ಸೆ ನೀಡಿದ್ದರು. ಆದರೆ ಪರೀಕ್ಷೆ ಮಾಡಲಾಗಿ ಆ ಯುವಕನಿಗೆ ಕರೊನಾ ಇರುವುದು ದೃಢಪಟ್ಟಿರುವುದರಿಂದ ಚಿಕಿತ್ಸೆ ನೀಡಿದ ವೈದ್ಯನಿಗೂ ಕರೊನಾ ಆತಂಕ ಎದುರಾಗಿದೆ. 

ಸದ್ಯ ಕರೊನಾ ಪಾಸಿಟಿವ್ ಬಂದಿರುವ ವ್ಯಕ್ತಿಯ ಮನೆಯಲ್ಲಿ 120 ಜನ ಸದಸ್ಯರಿದ್ದು, ಅದೊಂದು ದೊಡ್ಡ ಕೂಡು ಕುಟುಂಬವಾಗಿದೆ. ಲಾಕಡೌನ್ ಸಮಯದಲ್ಲಿ ಈ ವ್ಯಕ್ತಿ ಕಿರಾಣಿ ಸಾಮಾನುಗಳನ್ನು ತರುವುದಕ್ಕೋಸ್ಕರ ಹುಬ್ಬಳ್ಳಿ, ಧಾರವಾಡ ಸುತ್ತಾಡಿದ್ದ.

ಆಗ ಈತನಿಗೆ ಸೋಂಕು ತಗುಲಿರಬಹುದು ಎನ್ನಲಾಗುತ್ತಿದೆ. ಈ ಸೋಂಕಿತ ವ್ಯಕ್ತಿ ಕೆಲ ದಿನಗಳ ಹಿಂದಷ್ಟೇ ಗ್ರಾಮದ ತುಂಬ ಸುತ್ತಾಡಿದ್ದಾನೆ ಎಂದೂ ಹೇಳಲಾಗುತ್ತಿದೆ. ಇದರಿಂದಾಗಿ ಶಿರಕೋಳ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. 

ಈಗಾಗಲೇ ಶಿರಕೋಳದಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದ್ದರಿಂದ ಗ್ರಾಮಕ್ಕೆ ತಹಸೀಲ್ದಾರ ನವೀನ್ ಹುಲ್ಲೂರು ಸೇರಿದಂತೆ ಪೊಲೀಸರು ಭೇಟಿ ನೀಡಿ ಗ್ರಾಮವನ್ನು ಸೀಲ್ ಡೌನ್ ಮಾಡಿದ್ದಾರೆ.

ಇನ್ನೂ ಎಷ್ಟು ಕರೊನಾ ಪಾಸಿಟಿವ್ ಪ್ರಕರಣಗಳು ಈ ಗ್ರಾಮದಲ್ಲಿ ಸಿಗುತ್ತವೆಯೋ ಎಂಬುದನ್ನು ಕಾದು ನೋಡಬೇಕಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *