ಜಂಟಿ ಸಮೀಕ್ಷೆಗೆ ಜಿಲ್ಲಾಡಳಿತ ನಿರ್ಧಾರ
ಧಾರವಾಡ prajakiran.com : ಜಿಲ್ಲೆಯ ತುಪ್ಪರಿ ಹಾಗೂ ಬೆಣ್ಣೆ ಹಳ್ಳದ ಪ್ರವಾಹದಿಂದ ಹಾಗೂ ಮಳೆಯಿಂದಾಗಿ ಜಿಲ್ಲೆಯ ಸುಮಾರು ೧೨೮೫೭ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ.
ಹೀಗಾಗಿ ಕೃಷಿ, ತೋಟಗಾರಿಕೆ, ರೇಷ್ಮೆ, ಸಾಂಖ್ಯಿಕ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಆರಂಭಿಸಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಆಗಸ್ಟ್ ತಿಂಗಳ ಮಳೆಯಿಂದಾಗಿ ಒಂದು ಜೀವ ಹಾನಿಯಾಗಿದ್ದು, ರೂ.೫ ಲಕ್ಷ ಪರಿಹಾರ ವಿತರಿಸಲಾಗಿದೆ. ೪ ಸಣ್ಣ ಹಾಗೂ ೯ ದೊಡ್ಡ ಜಾನುವಾರುಗಳ ಹಾನಿಯಾಗಿದ್ದು, ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ ಹೇಳಿದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಈಗಾಗಲೇ ನೊಂದಾಯಿತ ರೈತರ ಬೆಳೆಹಾನಿಗೆ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗಿದ್ದು, ಭಾರತಿ ಆಕ್ಸಾ ವಿಮಾ ಕಂಪನಿಯ ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿ.ಪಂ. ಸಿಇಓ ಡಾ.ಬಿ.ಸಿ. ಸತೀಶ್ ಮಾತನಾಡಿ, ಮನೆ ಹಾನಿ ಕುರಿತು ವರದಿ ಹಾಗೂ ಮನೆ ಪುನರ್ ನಿರ್ಮಾಣ, ದುರಸ್ತಿ ಕುರಿತು ಪರಿಶೀಲಿಸಲು ಪಿಡಿಓಗಳೊಂದಿಗೆ ಪ್ರತಿ ಗ್ರಾಮಕ್ಕೆ ಓರ್ವ ನೋಡಲ್ ಅಧಿಕಾರಿ ನೇಮಿಸಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ಲೋಕೋಪಯೋಗಿ, ಸಣ್ಣ ನೀರಾವರಿ, ಪಂಚಾಯತ್ ರಾಜ್ ಇಂಜಿನೀಯರಿಂಗ್ ಇಲಾಖೆ, ರಾಷ್ಟ್ರೀಯ ಹೆದ್ದಾರಿ, ಕೃಷಿ, ತೋಟಗಾರಿಕೆ, ಹೆಸ್ಕಾಂ, ಮಹಾನಗರ ಪಾಲಿಕೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಅತಿವೃಷ್ಟಿ ಹಾನಿ ಕುರಿತು ಇಲಾಖಾವಾರು ಅಂದಾಜು ವರದಿಯನ್ನು ಸಭೆಗೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಐ.ಬಿ. ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.