ಬೆಳಗಾವಿ prajakiran.com : ಗೋಕಾಕ್ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದ ಮಹಿಳೆ ಕೊನೆಗೂ ಪತ್ತೆಯಾಗಿದ್ದಾರೆ.
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಪತ್ತೆಯಾದ ಮಹಿಳೆ ತನ್ನ ಪತಿಯೊಂದಿಗೆ ತೆರಳಿದ್ದರು.
ಬೆಳಗಾವಿ ಜಿಲ್ಲೆ ಗೋಕಾಕ್ ಕ್ವಾರಂಟೈನ್ ಕೇಂದ್ರದಿಂದ ನಿನ್ನೆ ಮಧ್ಯಾಹ್ನ 30 ವರ್ಷದ ಮಹಿಳೆ ಕಾಲು ಕಿತ್ತಿದ್ದರು.
ಮಹಿಳೆ ಅಲ್ಲಿಂದ ತೆರಳಿದ್ದರಿಂದ ತೀವ್ರ ಆತಂಕ ಎದುರಾಗಿತ್ತು. ಮಹಿಳೆಗೆ ಕರೋನಾ ದೃಢಪಟ್ಟರೆ ಹೇಗೆ ಎಂಬ ಆತಂಕ ಎದುರಾಗಿತ್ತು.
ಮಹಾರಾಷ್ಟ್ರದ ನೂಲ್ ಗ್ರಾಮದಿಂದ ಪಂಜಾನಟ್ಟಿ ಗ್ರಾಮಕ್ಕೆ ಬಂದಿದ್ದ ಮಹಿಳೆ ಇವರಾಗಿದ್ದರು. ಹೀಗಾಗಿ ಇವರನ್ನು ಗೋಕಾಕ್ನ ಬಿಸಿಎಂ ಹಾಸ್ಟೆಲ್ನಲ್ಲಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ನಲ್ಲಿಡಲಾಗಿತ್ತು.
ಈ ವೇಳೆ ಕ್ವಾರಂಟೈನ್ ಕೇಂದ್ರದಿಂದ ಯಾರಿಗೂ ಕೇಳದೆ, ಹೇಳದೆ ಪರಾರಿಯಾಗಿದ್ದ ಮಹಿಳೆ ಯ ಪತ್ತೆಗಾಗಿ ಬೆಳಗಾವಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಬೆನ್ನು ಬಿದ್ದಿತ್ತು.
ಕೊನೆಗೂ ಆ ಮಹಿಳೆ ಬೆಲ್ಲದ ಬಾಗೇವಾಡಿಯಲ್ಲಿ ಪತ್ತೆಯಾಗಿರುವುದು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಬೆಲ್ಲದ ಬಾಗೇವಾಡಿಯಿಂದ ಕ್ವಾರಂಟೈನ್ ಕೇಂದ್ರಕ್ಕೆ ಕರೆತಂದ ಪೊಲೀಸರು ಈ ಕುರಿತು ಗೋಕಾಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.