ರಾಜ್ಯ

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಬಿದ್ದ ಮನೆಯಲ್ಲಿಯೇ ಗ್ರಾಮ ವಾಸ್ತವ್ಯ ಮಾಡಿ ಸರ್ಕಾರದ ವಿರುದ್ಧ ಚಾಟಿ ಬೀಸಿದ ಬಸವರಾಜ ಕೊರವರ

ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಗಮನ ಸೆಳೆಯಲು ವಿಭಿನ್ನ ಹಾಗೂ ಅರ್ಥಪೂರ್ಣ ಪ್ರತಿಭಟನೆ ನಡೆಸಿದ ಜನಜಾಗೃತಿ ಸಂಘ

ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡರು ಸೇರಿದಂತೆ
ಹತ್ತಾರು ಹಳ್ಳಿಯ ನೂರಾರು ಗ್ರಾಮಸ್ಥರು ಸಾಥ್

ಹತ್ತು ಜನರಿಂದ 50 ಸಾವಿರ ಪರಿಹಾರದ ಚೆಕ್ ಸಾಂಕೇತಿಕವಾಗಿ ಹಿಂತಿರುಗಿಸಿ ಸಾತ್ವಿಕ ಆಕ್ರೋಶ

ಧಾರವಾಡ ಪ್ರಜಾಕಿರಣ.ಕಾಮ್  : ತಾಲೂಕಿನಲ್ಲಿ ಕಳೆದ ಮೂರು ತಿಂಗಳ ಹಿಂದೆ ಸುರಿದ ಅಕಾಲಿಕ ಮಳೆಗೆ ಸೂರು ಕಳೆದುಕೊಂಡ ಧಾರವಾಡ ತಾಲೂಕಿನ ವಿವಿಧ ಹಳ್ಳಿಯ ಸಂತ್ರಸ್ಥರಿಗೆ ಸೂರು ಒದಗಿಸಲು ಒತ್ತಾಯಿಸಿ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಮಣಿರಾಮ್ ತೇಲಿಯವರ ಬಿದ್ದ ಮನೆಯಲ್ಲಿಯೇ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ಹಲವಾರು ಗ್ರಾಮಸ್ಥರು ವಾಸ್ತವ್ಯ ಹೂಡಿ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿ ರಾಜ್ಯದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಗಮನ ಸೆಳೆದರು.

ಈ ಸಂದರ್ಭದಲ್ಲಿ ಹಲವು ಜನರ 50 ಸಾವಿರ ಪರಿಹಾರ ಧನವನ್ನು ಸಾಂಕೇತಿಕವಾಗಿ ಹಿಂತಿರುಗಿಸಿ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ, ಸಂಪೂರ್ಣ ಬಿದ್ದ ಮನೆಗಳನ್ನು ಸಹ ಭಾಗಶಃ ಬಿದ್ದ ಸಿ ಕೆಟಗೇರಿಗೆ ಸೇರ್ಪಡೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಲಾಯಿತು.

ಅಲ್ಲದೆ, ರಾಜೀವ ಗಾಂಧಿ ವಸತಿ ಯೋಜನೆ ಪೋರ್ಟಲ್ ನಲ್ಲಿ ಬದಲಾವಣೆ ಮಾಡಲು ಮತ್ತೊಮ್ಮೆಅವಕಾಶ ಕಲ್ಪಿಸಬೇಕು ಎಂದು ಈ ವೇಳೆ ಆಗ್ರಹಿಸಿದರು.

ಇಡೀ ಧಾರವಾಡ ತಾಲೂಕಿನಲ್ಲಿರುವ ಹಲವಾರು ಹಳ್ಳಿಗಳ ಸಾವಿರಾರು ಜನ ಸಂತ್ರಸ್ತರಿಗೆ ಸೂರು ನೀಡುವಲ್ಲಿ ಧಾರವಾಡ ತಾಲೂಕಿನ ಆಡಳಿತ ಹಾಗೂ ಜಿಲ್ಲಾಡಳಿತ ವಿಫಲವಾಗಿದೆ.

ಈ ಹಿನ್ನೆಲೆಯಲ್ಲಿ ನಾವು ನ.5 ರಂದು ಧಾರವಾಡ ತಾಲೂಕಿನ ಹಲವಾರು ಹಳ್ಳಿಯ ನೂರಾರು ನೋಂದ ಜನರೊಂದಿಗೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಹಾಗೂ ನ.9 ರಂದು ತಹಶೀಲ್ದಾರ ಕಚೇರಿ ಎದುರು ಅಡುಗೆ ಮಾಡಿ ಪ್ರತಿಭಟನೆ ನಡೆಸಿದ್ದೇವೆ.

ಇದಕ್ಕೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಡಿ.22 ರಂದು ಗುರುವಾರ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಮಣಿರಾಮ್ ತೇಲಿಯವರ ಬಿದ್ದ ಮನೆಯಲ್ಲಿಯೇ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಸೊಕ್ಕಿನ ಸರಕಾರಕ್ಕೆ ಹಕ್ಕಿನ ಉತ್ತರ ನೀಡಲಾಗಿದೆ ಎಂದು ಜನಜಾಗೃತಿ ಸಂಘ ಅಧ್ಯಕ್ಷರಾದ ಬಸವರಾಜ ಕೊರವರ ಹೇಳಿದರು.

ಇದು ಧಾರವಾಡ ಗ್ರಾಮೀಣ ಶಾಸಕರಿಗೆ ಕೊನೆ ಎಚ್ಚರಿಕೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಅವರ ವಿರುದ್ದವೇ ನಮ್ಮ ಹೋರಾಟ ಎಂದು ಗುಡುಗಿದರು.

ಹಾನಿಗೀಡಾದ ಮನೆಗಳ ಪುನರ್ ಪರಿಶೀಲನೆ ನಡೆಸಿ, ಎಲ್ಲಾ ಸಂತ್ರಸ್ತರಿಗೆ ಸೂರು ಒದಗಿಸುವ ಪ್ರಾಮಾಣಿಕ ಕೆಲಸ ರಾಜ್ಯದ ಘನ ಸರಕಾರ ಹಾಗೂ ಧಾರವಾಡ ಜಿಲ್ಲಾಡಳಿತ ಮಾಡಬೇಕು.

ಮನೆಕಳೆದುಕೊಂಡ ಪ್ರತಿಯೊಬ್ಬರಿಗೂ ವಿಳಂಬ ಮಾಡದೆ ಮನೆ ನಿರ್ಮಾಣಕ್ಕೆ ಧನ ಸಹಾಯ ನೀಡಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಚ್ಚರಿಸಿದರು.

ಪ್ರೊ. ನಂಜುಂಡ ಸ್ವಾಮಿ ಸ್ಥಾಪಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡರು ಮಾತನಾಡಿ, ಬಿದ್ದ ಮನೆಗಳಿಗೆ ಪರಿಹಾರ ನೀಡದ ಭ್ರಷ್ಟ
ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದರು.

ಬಿದ್ದ ಮನೆಯಲ್ಲಿಯೇ ಮಲಗಿ ಆಕ್ರೋಶ ವ್ಯಕ್ತಪಡಿಸುವ ವಿಭಿನ್ನ ರೀತಿಯ ಹೋರಾಟ ರಾಜ್ಯದ ಇತಿಹಾಸದಲ್ಲಿಯೇ ಇದು ಮೊದಲು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಆನಂದ ಪಾಟೀಲ, ಹೆಬ್ಬಳ್ಳಿ ಗ್ರಾಮದ ಗ್ರಾಪಂ ಸದಸ್ಯ ಬಸವರಾಜ ಹೆಬ್ಬಾಳ, ಮುಖಂಡರಾದ ಹಟೇಲಸಾಬ ಗುಡಿಸಲಮನಿ, ನಿಂಗಪ್ಪ ಅಳಗವಾಡಿ, ರಮೇಶ ದೊಡ್ಡಮನಿ, ಅಶೋಕ ಲಕ್ಕಮ್ಮನವರ, ಈರಣ್ಣ ಹಡಪದ, ಯಲ್ಲಪ್ಪ ಬಾವಿಕಟ್ಟಿ,ಅಡಿವೆಪ್ಪ ಲಕ್ಕಮ್ಮನವರ, ಚಂದ್ರು ಲಕ್ಕಮ್ಮನವರ, ಅರ್ಜುನ ಹಡಪದ, ಕಲ್ಲಪ್ಪ ಹಡಪದ, ನಿಂಗಪ್ಪ ಜ್ಯೋತ‌ನಾಯ್ಕರ, ಗಂಗಪ್ಪ ಹುಬ್ಬಳ್ಳಿ, ದ್ಯಾಮಣ್ಣ ದೇಸಾಯಿ, ವೀರೇಶ ಚವ್ಹಾಣ, ಪ್ರಕಾಶ ಸುಣಗಾರ, ಈರಣ್ಣ ತೇಗೂರ, ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ ಜೋಶಿ, ಸೇರಿದಂತೆ ಅನೇಕ ಮುಖಂಡರು ಈ ಅರ್ಥಪೂರ್ಣವಾದ ಗ್ರಾಮ ವಾಸ್ತವ್ಯದಲ್ಲಿ ಪಾಲ್ಗೊಂಡಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *