ರಾಜ್ಯ

ಧಾರವಾಡದಲ್ಲಿ ಬಸವರಾಜ ಕೊರವರ ನೇತೃತ್ವದ ಸೌಹಾರ್ದ ಕೂಟ : ಎರಡು ಸಾವಿರಕ್ಕೂ ಅಧಿಕ ಹಿಂದೂ-ಮುಸ್ಲಿಂ ಸಹೋದರರು ಭಾಗಿ

ನಮ್ಮ ಆಚಾರ ವಿಚಾರ ಕಾಯ್ದುಕೊಂಡೇ ಇತರ ಧರ್ಮಗಳನ್ನು ಗೌರವಿಸುವ ದೊಡ್ಡತನ ಬೆಳೆಸಿಕೊಳ್ಳಬೇಕು : ಮಲ್ಲಿಕಾರ್ಜುನ ಸ್ವಾಮೀಜಿ

ಧಾರವಾಡ prajakiran. com : ಜಗತ್ತಿನ ಪ್ರತಿಯೊಂದು ಧರ್ಮವೂ ಪ್ರೀತಿ, ಭ್ರಾತೃತ್ವ, ಸೌಹಾರ್ದತ ಮತ್ತು ಸಹಬಾಳ್ವೆಯಂತಹ ಉನ್ನತ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಆದರೆ ಇಂದು ಜಾತಿ, ಧರ್ಮಗಳ ಆಧಾರದಲ್ಲಿ ಮನುಷ್ಯ, ಮನುಷ್ಯರ ನಡುವೆ ದ್ವೇಷ ಹುಟ್ಟಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ನಗರದ ಜನಜಾಗೃತಿ ಸಂಘ ಆಯೋಜಿಸಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ೧೩೧ ನೇ ಜಯಂತಿ ಮತ್ತು ಸೌಹಾರ್ದ ಕೂಟ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ಜಾತಿ, ಧರ್ಮವನ್ನು ಮೀರಿ ಮನುಷ್ಯತ್ವವನ್ನು ಪ್ರೀತಿಸುವ ವಾತಾವರಣ ನಿರ್ಮಾಣ ಇಂದಿನ ಅಗತ್ಯ. ನಾವು ಮೊದಲು ಮನುಷ್ಯರಾಗಬೇಕಿದೆ.

ನಾವು ಬದುಕಬೇಕು ಮತ್ತು ನಮ್ಮೊಂದಿಗಿರುವವರನ್ನು ಬದುಕಲು ಬಿಡಬೇಕು. ಅಂದಾಗಲೇ ಮನುಷ್ಯ ಜನ್ಮಕ್ಕೆ ಸಾರ್ಥಕತೆ. ನಮ್ಮ, ನಮ್ಮ ಆಚಾರ ವಿಚಾರಗಳನ್ನು ಕಾಯ್ದುಕೊಂಡೇ ಇತರ ಧರ್ಮಗಳನ್ನು ಗೌರವಿಸುವ ದೊಡ್ಡತನ ಬೆಳೆಸಿಕೊಳ್ಳಬೇಕು ಎಂದರು.

ಹೈಕೋರ್ಟ ವಕೀಲ ಕೆ.ಎಸ್.ಕೋರಿಶೆಟ್ಟರ್ ಮಾತನಾಡಿ, ಇಡೀ ಜಗತ್ತಿನಲ್ಲೇ ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾದದ್ದು. ಇದು ಸರ್ವ ಜನಾಂಗದ ಶಾಂತಿತೋಟವಾಗಿದೆ.

ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುವ ತತ್ವದ ಆಧಾರದಲ್ಲಿ ರಚಿತಗೊಂಡಿರುವ ಸಂವಿಧಾನದಲ್ಲಿ ಭಾವೈಕ್ಯತೆ, ಸೌಹಾರ್ದತೆ, ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ಒದಗಿಸಿದೆ.

ಸಮಾನತೆ ಸಹಬಾಳ್ವೆಯಂತಹ ಉದಾತ್ತ ಮೌಲ್ಯಗಳನ್ನು ಒಳಗೊಂಡಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಅನ್ನ, ಆಶ್ರಯ, ಆರೋಗ್ಯದಂತಹ ಸಾಮಾಜಿಕ ನ್ಯಾಯ ಸಿಗಬೇಕೆಂಬ ಸಂವಿಧಾನದ ಆಶಯಗಳನ್ನು ನಾವೆಲ್ಲ ಮುಂದೂವರೆಸಿಕೊಂಡು ಹೋಗಬೇಕಿದೆ ಎಂದರು.

ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ ಎನ್ನದೇ ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಕೆಲಸವೇ ನಿಜವಾದ ದೇಶಭಕ್ತಿಯಾಗಿದೆ.

ಇಂದಿನ ಸಂಕಟದ ದಿನಗಳಲ್ಲಿ ಇಂತಹ ಅರ್ಥ ಪೂರ್ಣ ಕಾರ್ಯಕ್ರಮ ಸಂಘಟಿಸುವ ಮೂಲಕ ಭವ್ಯ ಭಾರತದ ಪರಿಕಲ್ಪನೆಗೆ ಹೊಸಬೆಳಕು ನೀಡುವಂತಹ ಪ್ರಯತ್ನ ಮಾಡಿರುವ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರಂತಹ ಯುವನಾಯಕರ ಸಂಖ್ಯೆ ಹೆಚ್ಚಬೇಕಿದೆ.ಅದಕ್ಕೆ ನಾವೆಲ್ಲ ಕೈ ಜೋಡಿಸಬೇಕು ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ಡಾ. ಮೀರಾ ನಾಯಕ್ ಮಾತನಾಡಿ, ಯಾವುದೇ ಧರ್ಮ ಯಾರಿಗೂ, ಎಂದಿಗೂ ಪರಸ್ಪರ ಕಚ್ಚಾಡುವುದನ್ನು ಕಲಿಸುವುದಿಲ್ಲ. ಶಾಂತಿ, ಸೌಹರ್ದತೆ, ಸಮಾನತೆ, ಸಹೋದರತೆ ಎತ್ತಿ ಹಿಡಿಯುವಂತೆ ಸಾರುತ್ತದೆ.

ಕುರಾನ್ ಕೇವಲ ಮುಸ್ಲಿಂ ಸಮುದಾಯಕ್ಕೆ ಸೀಮಿತವಲ್ಲ. ಇದು ಇಡೀ ಮನುಕುಲಕ್ಕೆ ಅನ್ವಯಿಸುತ್ತದೆ. ಸೌಹಾರ್ದತೆ ಎಂದರೆ ವಿವಿಧತೆಯಲ್ಲಿ ಏಕತೆ ಸಾರುವುದಾಗಿದೆ. ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ.

ಹೀಗಾಗಿ ಎಲ್ಲರೂ ಸ್ನೇಹ, ಪ್ರೀತಿ, ವಾತ್ಸಲ್ಯದಿಂದ ಜೀವನ ಸಾಗಿಸಬೇಕು. ಭಾರತದಲ್ಲಿ ಬದುಕುವ ಪ್ರತಿಯೊಬ್ಬರೂ ಭಾರತೀಯರು ಎನ್ನುವ ಭಾವನೆ ಬೆಳೆಯಬೇಕು.

ನಾವು ನಮ್ಮ ಧರ್ಮವನ್ನು ಆಚರಿಸುತ್ತಲೇ ದೇಶಕ್ಕೆ ನಿಷ್ಠರಾಗಿರಬೇಕು. ನಾವೆಲ್ಲರೂ ಒಂದು ಎನ್ನುವ ಭಾವನೆ ದೇಶವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.

ಸಂವಿಧಾನದ ಇಂತಹ ಆಶಯಗಳ ಸಾಕಾರಗೊಳಿಸುವ ನಿಟ್ಟಿನಲ್ಲಿ ಧಾರವಾಡದಲ್ಲಿ ಸೌಹಾರ್ದ ಕೂಟ ಆಯೋಜಿಸುವ ಮೂಲಕ ಬಸವರಾಜ ಕೊರವರ ಮಾದರಿಯಾಗಿದ್ದಾರೆ. ಅವರಿಗೆ ಮುಸ್ಲಿಂ ಸಮಾಜದ ವತಿಯಿಂದಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಮಾತನಾಡಿ, ನಾವು ಹೇಗೆ ಬದುಕುತ್ತಿದ್ದೇವೆ ಎನ್ನುವುದು ಮುಖ್ಯವಲ್ಲ. ನಾವು ಸಂವಿಧಾನಯುತವಾಗಿ, ಸಂವಿಧಾನಕ್ಕೆ ಗೌರವ ಕೊಡುವ ರೀತಿಯಲ್ಲಿ ಬದುಕುತ್ತಿದ್ದೇವೆಯೇ ಇಲ್ಲವೇ ಎನ್ನುವುದು ಮುಖ‍್ಯವಾಗಿದೆ.

ಇವತ್ತು ದಿನ ಬೆಳಗಾದರೆ ಮಾಧ್ಯಮಗಳಲ್ಲಿ ಅವರು ಹೀಗೆ ಎಂದರು. ಇವರು ಹೀಗೆಂದರು ಎನ್ನುವುದು ನೋಡುವುದಾಗಿದೆ. ಅದು ಧಾರವಾಡದಂತಹ ನೆಲದಲ್ಲಿ ಆಗಬಾರದು. ಧಾರವಾಡದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದಾಗಿ ಬಾಳುತ್ತಿದ್ದೇವೆ.

ರಾಜಕೀಯ ನಾಯಕರ ಮಾತುಗಳಿಗೆ ಕಿವಿ ಕೊಡದೆ, ನಾವೆಲ್ಲ ಒಂದಾಗಿ ಬಾಳುತ್ತಿದ್ದೇವೆ ಎಂಬ ಸಂದೇಶ ಅವರಿಗೆ ರವಾನಿಸುವ ಉದ್ದೇಶಕ್ಕಾಗಿ ಈ ಸೌಹಾರ್ದ ಕೂಟ ಆಯೋಜಿಸಿದ್ದೇವೆ ಎಂದು ಹೇಳಿದರು.

ನಾವು ನೀವು ಯಾವುದೇ ಧರ್ಮ, ಪಕ್ಷದವರೊಂದಿಗೆ ಗುರುತಿಸಿಕೊಂಡಿದ್ದರೂ, ಮೊದಲು ಮಾನವರು. ಮಾನವರಾಗಿ ಹುಟ್ಟಿದ ಮೇಲೆ ಒಬ್ಬರಿಗೊಬ್ಬರು ಪ್ರೀತಿಸುವ ಕೆಲಸವಾಗಬೇಕು ಹೊರತು ದ್ವೇಷಿಸುವ ಕೆಲಸ ಮಾಡಬಾರದು ಎಂದರು.

ನಾನು ಬಸವರಾಜ ಕೊರವರ ಹಿಂದೂ ಆಗಿ ಹುಟ್ಟಿರಬಹುದು. ನನಗೆ ಹಿಂದೂ ಧರ್ಮದ ಮೇಲೆ ಹೆಮ್ಮೆಯಿದೆ.

ಆದರೆ ನನ್ನ ಗೆಳೇಯರಾದ ಸಮೀರ್ ಪಾಗೆ, ನಯೀಮ್ ಹುಲಗೇರಿ ಅವರು ಮುಸ್ಲಿಂರಾಗಿ ಹುಟ್ಟಿದ್ದಾರೆ. ಅವರ ಬಗ್ಗೆಯೂ ನನಗೆ ಹೆಮ್ಮೆಯಿದೆ. ಯಾಕೆಂದರೆ ನಾನು ಧರ್ಮವನ್ನು ಪ್ರೀತಿಸುವ ಜೊತೆಗೆ ನನ್ನಜೊತೆಗೆ ಇರುವವರ ಧರ್ಮವನ್ನು ಪ್ರೀತಿಸಿದರೆ ಮಾತ್ರ ನಾನು ನಿಜವಾದ ಭಾರತೀಯನಾಗುತ್ತೇನೆ. ಇಲ್ಲದಿದ್ದರೆ ನಾನು ಭಾರತೀಯನಾಗಲಾರೆ ಎಂದರು.

ಈ ಕಾರ್ಯಕ್ರಮಕ್ಕೆ ಹಿಂದೂ, ಮುಸ್ಲಿಂ ಸಮುದಾಯದ ಸಾವಿರಾರು ಜನತೆ ಸೇರಿರುವುದು ನಮಗೆ ದೊಡ್ಡ ಶಕ್ತಿಯನ್ನು ಕೊಟ್ಟಿದ್ದಿರಿ. ಅದಕ್ಕೆ ನಾನು ನಿಮಗೆ ಋಣಿಯಾಗಿದ್ದೇನೆ ಎಂದು ಹೇಳಿದರು.

ಬೇರೆ ಬೇರೆ ವಿಚಾರಧಾರೆಗಳನ್ನು ಹೊಂದಿರುವವರು ಬೇರೆ ಬೇರೆ ಸಂದೇಶಗಳನ್ನು ಸಾರುತ್ತಲೇ ಬಂದಿದ್ದಾರೆ. ಆದರೆ ಈ ನಾಡಿನಲ್ಲಿ ಬುದ್ದ, ಬಸವ,ಅಂಬೇಡ್ಕರ್ ಅಂತಹ ಮಹಾನ್ ನಾಯಕರು ಹುಟ್ಟಿ ಎಲ್ಲರಿಗೂ ಸಮಾನತೆ ಸಂದೇಶ ಸಾರಿದ್ದಾರೆ.

ಈ ದೇಶಕ್ಕೆ ರಾಮ ಎಷ್ಟು ಅವಶ್ಯನೋ, ರಹೀಮನೂ ಅಷ್ಟೇ ಅವಶ್ಯ ಎಂಬುದನ್ನು ನಾವೆಲ್ಲ ತೋರಿಸಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲ ಬದುಕಿ ಬಾಳಬೇಕಿದೆ ಎಂದು ವಿವರಿಸಿದರು.

ಈ ಸೌಹಾರ್ದ ಕೂಟದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎ.ಎ. ಹುಲಗೇರಿ, ಬಿ.ಜಿ. ಕೆಂಚನಹಳ್ಳಿ, ಆರ್ ಎಂ. ದರ್ಗಾದ ,
ರಾಕೇಶ ದೊಡ್ಡಮನಿ, ನಾಗರಾಜ ಕಿರಣಗಿ, ಚಂದ್ರು ತೇಗೂರ, ಸಮೀರ್ ಪಾಗೆ, ನಯೀಮ್ ಹುಲಗೇರಿ, ಸಾಧೀಕ್ ಹುಲಗೂರ, ಆನಂದ ಪಾಟೀಲ, ಕುಮಾರ ಅಗಸಿಮನಿ ಸೇರಿದಂತೆ ಅನೇಕರು ಇದ್ದರು.

ಕಾರ್ಯಕ್ರಮದ ನಂತರ ಎರಡು ಸಾವಿರಕ್ಕೂ ಅಧಿಕ ಹಿಂದೂ-ಮುಸ್ಲಿಂ ಸಹೋದರರು ಒಟ್ಟಿಗೆ ಕುಳಿತು ಸೌಹಾರ್ದ ಕೂಟದಲ್ಲಿ ಭಾಗಿಯಾಗಿ ಐಕ್ಯತೆಯನ್ನು ಸಾರಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *