ರಾಜ್ಯ

ಧಾರವಾಡದ ದೀನ ದಯಾಳ್ ಉಪಾಧ್ಯಾಯ ಸೌಹಾರ್ದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕಳೆದ ಎರಡು ತಿಂಗಳಿಂದ ಮಧ್ಯಾಹ್ನದ ಊಟವಿಲ್ಲ…..!

ನೂರಾರು ವಿದ್ಯಾರ್ಥಿಗಳ ಗೋಳು ಬಯಲಿಗೆ ತಂದ ಜನಜಾಗೃತಿ ಸಂಘ

ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಗಮನ ಸೆಳೆದು ನೋವಿಗೆ ಸ್ಪಂದಿಸುವಂತೆ ಬಸವರಾಜ ಕೊರವರ ಮನವಿ

ಧಾರವಾಡ prajakiran. com : ನಗರದ ಹೊರವಲಯದಲ್ಲಿರುವ ಕೃಷಿನಗರದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ದೀನ ದಯಾಳ್ ಉಪಾಧ್ಯಾಯ ಸೌಹಾರ್ದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ 230ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಳೆದ ಎರಡು ತಿಂಗಳಿಂದ ಮಧ್ಯಾಹ್ನದ ಊಟವಿಲ್ಲದೆ ಅಕ್ಷರಶಃ ಪರದಾಟ ನಡೆಸುತ್ತಿದ್ದಾರೆ‌.

ಇಷ್ಟೆಲ್ಲಾ ಅವ್ಯವಸ್ಥೆಯಿದ್ದರೂ ಇದಕ್ಕೆ ಸ್ಪಂದಿಸಬೇಕಾದ ಧಾರವಾಡ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವರ್ಗದವರು ಜಾಣಕುರುಡು ತೋರಿಸುತ್ತಿದ್ದಾರೆ.

ಅಲ್ಲದೆ, ಹಲವಾರು ಬಾರಿ ಕರೆ ಮಾಡಿ ಹಾಸ್ಟೆಲ್ ಗೆ ಆಗಮಿಸುವಂತೆ ಜನಜಾಗೃತಿ ಸಂಘ ದ ಪದಾಧಿಕಾರಿಗಳು ಕರೆದರೂ ಕುಂಟು ನೆಪ ಹೇಳಿ ದೂರ ಉಳಿದರು.

ಹಾಸ್ಟೆಲ್ ಗೆ ಆಗಮಿಸದೆ ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನವನ್ನು ತೋರಿಸುತ್ತಿರುವ ಅಧಿಕಾರಿಗಳ ವಿರುದ್ದವೂ ಕ್ರಮ ಜರುಗಿಸಬೇಕು ಎಂದು ಜನಜಾಗೃತಿ ಸಂಘ ಆಗ್ರಹಿಸಿದೆ.

ಈ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರೊಂದಿಗೆ ಮಾತನಾಡಿದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ, ದಿನನಿತ್ಯ ನೂರಾರು ವಿದ್ಯಾರ್ಥಿಗಳ ಪರದಾಟ, ಹಲವು ಬಸ್ ಹತ್ತಿ ಇಳಿದು ಪಡುವ ಪರಿಪಾಟಲು, ಅಧಿಕಾರಿಗಳ‌ ಕಣ್ಣಾ ಮುಚ್ಚಾಲೆ ಬಗ್ಗೆ ಮಾಹಿತಿ ನೀಡಿದರು.

ಈ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮ ಜರುಗಿಸುವುದಾಗಿ ಸಚಿವರು ಭರವಸೆ ನೀಡಿದರು.

ಕಳೆದ ಎರಡು ತಿಂಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಬೆಳಗ್ಗೆ ಹಾಗೂ ರಾತ್ರಿ ಹೊರಗಡೆಯಿಂದ ಉಪಹಾರ, ಊಟ ತಂದು ಕೊಡುತ್ತಿದ್ದಾರೆ.

ಹೊರಗಡೆಯಿಂದ ಸರಬರಾಜು ಮಾಡಲಾಗುತ್ತಿರುವುದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಉಪಹಾರ ಹಾಗೂ ಊಟ ಸಾಕಾಗುತ್ತಿಲ್ಲ.

ಇದರಿಂದಾಗಿ ಅನೇಕ ವಿದ್ಯಾರ್ಥಿಗಳು ಅರೆಬರೆ ಹೊಟ್ಟೆಯಲ್ಲಿ ದಿನದೂಡಬೇಕಾಗುತ್ತಿದೆ. ಇನ್ನೂ ಮಧ್ಯಾಹ್ನದ ಊಟವಂತೂ ಗಗನಕುಸುಮವಾಗಿದೆ.

ಮಧ್ಯಾಹ್ನದ ಊಟ ಮಾಡಬೇಕಾದರೆ ವಿದ್ಯಾರ್ಥಿಗಳು ದಾಸನಕೊಪ್ಪ ವೃತ್ತದಲ್ಲಿರುವ ಹಾಸ್ಟೆಲ್ ಗೆ ಹೋಗಬೇಕು.

ಅಲ್ಲಿಗೆ ಹೋಗಲು ಸಕಾಲಕ್ಕೆ ಬಸ್ ಸಿಗುವುದಿಲ್ಲ. ಸಿಕ್ಕರೂ ಹೊರಗಡೆ ಊಟ ಸಿಗುವಷ್ಟು ಹಣ ಸಂಚಾರಕ್ಕೆ ವೆಚ್ಚ ಮಾಡಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ತಮ್ಮ ನೋವನ್ನು ತೋಡಿಕೊಂಡರು.

ಇದರಿಂದಾಗಿ ನೂರಾರು ವಿದ್ಯಾರ್ಥಿಗಳು ದಿನನಿತ್ಯ ಊಟವಿಲ್ಲದೆ, ಬಿಸ್ಕೆಟ್ ಹಾಗೂ ಲಘು ಉಪಹಾರ ಸೇವಿಸುವ ಮೂಲಕ ಕಾಲ ಕಳೆಯುತ್ತಿದ್ದಾರೆ.

ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ವಿಚಾರಿಸಿದರೆ ಅನುದಾನ ಕೊರತೆ ನೆಪ ಹೇಳಿ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟ ವಾಡುತ್ತಿದ್ದಾರೆ.

ಇದನ್ನು ಸೋಮವಾರದ ಒಳಗೆ ಸರಿಪಡಿಸದಿದ್ದರೆ ಧಾರವಾಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಎಚ್ಚರಿಸಿದ್ದಾರೆ.

ಧಾರವಾಡದ ಕಿಟೆಲ್, ಆರ್ ಎಲ್ ಎಸ್, ಕೆಸಿಡಿ, ಜೆ ಎಸ್ ಎಸ್ ಕಾಲೇಜು ಸೇರಿದಂತೆ ವಿವಿಧ ಪಿಯು ಕಾಲೇಜಿನಲ್ಲಿ ಓದುವ ನೂರಾರು ವಿದ್ಯಾರ್ಥಿಗಳು ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಯಿಂದ ಆಗಮಿಸಿದ್ದಾರೆ.

ಹಾಸ್ಟೆಲ್ ವಾರ್ಡನ್ ಹಾಗೂ
ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈವರೆಗೆ ಅವರಿಗೆ ಕಿಟ್ ವಿತರಣೆ ಮಾಡಿಲ್ಲ.

ಜೊತೆಗೆ ಹಾಸ್ಟೆಲ್ ನಲ್ಲಿ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ, ಸ್ನಾನ ಗೃಹ ಹಾಗೂ ಶೌಚ ಗೃಹ ಒದಗಿಸಿಲ್ಲ.

ಈ ಬಗ್ಗೆ ವಿಚಾರಿಸಿದರೆ ಹಾಸ್ಟೆಲ್ ನಿಂದ ಹೊರಹಾಕುವುದಾಗಿ ವಿದ್ಯಾರ್ಥಿಗಳಿಗೆ ಹೆದರಿಸುವ ಕೆಲಸ ಮಾಡಿದರೆ ಸಹಿಸುವುದಿಲ್ಲ
ಎಂದು ಜನಜಾಗೃತಿ ಸಂಘ ದ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ ತಿಳಿಸಿದರು.

ಈಗಲಾದರೂ ಸಮಾಜ ಕಲ್ಯಾಣ ಇಲಾಖೆ ತನ್ನ ಯಡವಟ್ಟು ಸರಿಪಡಿಸಿಕೊಂಡು ಬ್ರಹ್ಮಾಂಡ ಭ್ರಷ್ಟಾಚಾರದಿಂದ ಹೊರಬರಬೇಕಿದೆ.

ಬಡ ವಿದ್ಯಾರ್ಥಿಗಳ ಊಟವನ್ನು ಕೂಡ ಕಿತ್ತು ತಿನ್ನಬಾರದು ಎಂದು ಅನೇಕ ವಿದ್ಯಾರ್ಥಿಗಳು ತಮ್ಮ ಅಳಲನ್ನು ಮಾಧ್ಯಮದ ಮುಂದೆ ತೋಡಿಕೊಂಡರು.

ಈ ಸಂದರ್ಭದಲ್ಲಿ ಜನಜಾಗೃತಿ ಸಂಘ ದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ವಿದ್ಯಾರ್ಥಿ ಮುಖಂಡರಾದ
ಲಾಲ್ ಸಾಬ, ಚೇತನ, ಮನೋಜ, ತಿಮ್ಮಣ್ಣ, ಮೊಹ್ಮದ ರಫಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *