ರಾಜ್ಯ

ಮಾ. 20ರಂದು ಕಂದಾಯ ಸಚಿವ ಆರ್. ಅಶೋಕ ಛಬ್ಬಿಯಲ್ಲಿ ಗ್ರಾಮ ವಾಸ್ತವ್ಯ

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ”

ತಹಸಿಲ್ದಾರರಿಂದ ತಾಲೂಕಿನ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ

ಧಾರವಾಡ prajakiran.com : ರಾಜ್ಯ ಸರಕಾರದ ನಿರ್ದೇಶನದಂತೆ ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ಮತ್ತು ತಾಲೂಕುಗಳ ತಹಶೀಲ್ದಾರರು ಜಿಲ್ಲೆಯ ಗ್ರಾಮಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ಅದರಂತೆ, ಮಾರ್ಚ್ 20 ರಂದು ಜಿಲ್ಲೆಯಲ್ಲಿ “ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ” ಎಂಬ ಘೋಷ ವಾಕ್ಯದಡಿ ಆಯೋಜಿಸಿರುವ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಕಂದಾಯ ಸಚಿವ ಆರ್. ಅಶೋಕ ಅವರು ಗ್ರಾಮ ವಾಸ್ತವ್ಯ ಮಾಡಲಿದ್ದು, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ ಅವರೊಂದಿಗೆ ಇರುತ್ತಾರೆ.

ಮಾ.20 ರ ಗ್ರಾಮವಾಸ್ತವ್ಯದ ಅಂಗವಾಗಿ ಅಳ್ನಾವರ ತಹಶೀಲ್ದಾರ ಅಮರೇಶ ಪಮ್ಮಾರ ಅವರು ತಾಲೂಕಿನ ಹಿಂಡಸಗೇರಿ ಗ್ರಾಮದಲ್ಲಿ, ಹುಬ್ಬಳ್ಳಿ ನಗರ ತಹಶೀಲ್ದಾರ ಶಶಿಧರ ಮಾಡ್ಯಾಳ ಅವರು ಸುತಗಟ್ಟಿ ಗ್ರಾಮದಲ್ಲಿ, ಕುಂದಗೋಳ ತಹಶೀಲ್ದಾರ ಬಸವರಾಜ ಮೆಳವಂಕಿ ಅವರು ತಾಲೂಕಿನ ಗೌಡಗೇರಿ ಗ್ರಾಮದಲ್ಲಿ, ನವಲಗುಂದ ತಹಶೀಲ್ದಾರ ನವೀನ ಹುಲ್ಲೂರ ಅವರು ತಾಲೂಕಿನ ಕರ್ಲವಾಡ ಗ್ರಾಮದಲ್ಲಿ, ಅಣ್ಣಿಗೇರಿ ತಹಶೀಲ್ದಾರ ಕೊಟ್ರೇಶ ಗಾಳಿ ಅವರು ತಾಲೂಕಿನ ಶಿಶ್ವಿನಹಳ್ಳಿ ಗ್ರಾಮದಲ್ಲಿ, ಧಾರವಾಡ ತಹಶೀಲ್ದಾರ ಸಂತೋಷ ಬಿರಾದಾರ ಅವರು ತಾಲೂಕಿನ ಬೇಲೂರು ಗ್ರಾಮದಲ್ಲಿ ಮತ್ತು ಕಲಘಟಗಿ ತಹಶೀಲ್ದಾರ ಅಶೋಕ ಶಿಗ್ಗಾಂವಿ ಅವರು ಶಿವನಾಪುರ ಗ್ರಾಮದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಾಸ್ತವ್ಯ ಮಾಡಿ, ಸಾರ್ವಜನಿಕರಿಗೆ ಸ್ಪಂದಿಸಲಿದ್ದಾರೆ.

ಗ್ರಾಮವಾಸ್ತವ್ಯದಲ್ಲಿನ ಕಾರ್ಯಗಳು: ತಹಶೀಲ್ದಾರರು ಭೇಟಿ ನೀಡಿ, ಗ್ರಾಮದ ಪಹಣಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದು.

ಗ್ರಾಮದಲ್ಲಿ ಪೌತಿ ಹೊಂದಿದ ಖಾತೆದಾರರ ಹೆಸರನ್ನು ಪಹಣಿಯ ಕಾಲಂ 9 ರಿಂದ ತೆಗೆದು ನೈಜ ವಾರಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮವಹಿಸುವರು.

ಗ್ರಾಮದ ಎಲ್ಲಾ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಪರಿಶೀಲಿಸುವರು ಮತ್ತು ಬಿಟ್ಟು ಹೋದಂತಹ ಅರ್ಹ ಪ್ರಕರಣಗಳಿಗೆ ಸ್ಥಳದಲ್ಲಿಯೇ ಆದೇಶ ನೀಡುವರು.

ಗ್ರಾಮದಲ್ಲಿ ಸ್ಮಶಾನ ಲಭ್ಯತೆಯ ಬಗ್ಗೆ ಪರಿಶೀಲಿಸುವರು ಹಾಗೂ ಸ್ಮಶಾನವಿಲ್ಲದಿದ್ದಲ್ಲಿ ಸರ್ಕಾರದ ಆದೇಶದಂತೆ ಕ್ರಮವಹಿಸುವರು. ಗ್ರಾಮದಲ್ಲಿ ಆಶ್ರಯ ಯೋಜನೆಗೆ ಅವಶ್ಯಕತೆ ಇದ್ದಲ್ಲಿ ಲಭ್ಯ ಜಮೀನನ್ನು ಕಾಯ್ದಿರಿಸಲು ಕ್ರಮ ವಹಿಸುವರು.

ಸರ್ಕಾರಿ ಜಮೀನು ಅಕ್ರಮ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳುವರು. ಆಧಾರ್ ಕಾರ್ಡ್‍ನ ಅನೂಕೂಲತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.

ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯಬಹುದಾದ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು. ಮತದಾರರ ಪಟ್ಟಿ ಪರಿಷ್ಕರಣೆ, ಬರ, ಪ್ರವಾಹ ಇದ್ದಲ್ಲಿ ಪರಿಹಾರ ಒದಗಿಸಲು ಕ್ರಮ, ಪ್ರವಾಹದ ಹಾನಿ ತಡೆಗಟ್ಟಲು ಕ್ರಮ, ಅತಿವೃಷ್ಠಿ, ಅನಾವೃಷ್ಠಿ ಎದುರಿಸಲು ಮುಂಜಾಗೃತೆ ಕ್ರಮವಹಿಸುವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವರು.

ಹದ್ದು ಬಸ್ತು, ಪೋಡಿ ಮುಕ್ತಗ್ರಾಮ, ದರಕಾಸ್ತು ಡಿ, ಕಂದಾಯ ಗ್ರಾಮಗಳ ರಚನೆ, ಗ್ರಾಮದಲ್ಲಿ ಎಸ್.ಸಿ., ಎಸ್.ಟಿ., ಬಿ.ಸಿ.ಎಂ. ವಸತಿ ನಿಲಯಗಳಿದ್ದಲ್ಲಿ ಭೇಟಿ ನೀಡಿ ಸುಸ್ಥಿಯಲ್ಲಿರುವ ಬಗ್ಗೆ ಕ್ರಮ ವಹಿಸುವರು.

ಶಾಲೆ ಹಾಗೂ ಅಂಗನವಾಡಿಗಳಿಗೆ ಭೇಟಿ ನೀಡಿ ಆಹಾರ, ಕಲಿಕಾ ಕ್ರಮ ಇತ್ಯಾದಿ ಬಗ್ಗೆ ಪರಿಶೀಲಿಸುವರು.

ಎಲ್ಲಾ ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ದೊರೆತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಹಾಗೂ ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದಲ್ಲಿ ಅವರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಆದೇಶಿಸುವುದು.

ಗುಡಿಸಲು ರಹಿತ ವಾಸದ ನಿರ್ಮಾಣ ಗ್ರಾಮಗಳಿಗೆ ಭೇಟಿ ನೀಡಿದ ಸಮಯದಲ್ಲಿ ಗುಡಿಸಲುಗಳು ಇರುವ ವಾಸದ ಮನೆಗಳನ್ನು ಪತ್ತೆಹಚ್ಚಿ ಲಭ್ಯವಿರುವ ಸರ್ಕಾರದ ವಿವಿಧ ಯೋಜನೆಗಳಡಿ ಮನೆ ಕಟ್ಟಲು ಅನುದಾನ ನೀಡುವಂತೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗೆ ನಿರ್ದೇಶನ ನೀಡುವುದು.

ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಉನ್ನತ ಅಧಿಕಾರಿಗಳು ಖುದ್ದಾಗಿ ಸ್ಪಂಧಿಸಲು ಹಾಗೂ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಅವರ ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುವಂತೆ ರಾಜ್ಯಸರ್ಕಾರವು ನೀಡಿರುವ ಮಾರ್ಗಸೂಚಿಗಳನ್ನು ಗ್ರಾಮವಾಸ್ತವ್ಯದಲ್ಲಿ ಅನುಸರಿಸಲು ಎಲ್ಲ ತಹಶೀಲ್ದಾರರಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *