ಆಧ್ಯಾತ್ಮ

ಪ್ರಾರ್ಥನೆ ನಿತ್ಯ ಜೀವನದ ಭಾಗವಾಗಿಸಿಕೊಳ್ಳೋಣ

ಪ್ರಾರ್ಥನೆ ಒಂದು ಅತ್ಯಮೂಲ್ಯ ಭಾವನೆ, ಹೃದಯವಂತಿಕೆಯ ಲಕ್ಷಣ, ಒಂದು ಸಾತ್ವಿಕ ವಿಚಾರ, ಪ್ರೀತಿಯ ಮತ್ತು ಕಾಳಜಿಯ ಧ್ವನಿ, ಸಜ್ಜನಿಕೆಯ ಸಂಬMಧ, ನಿಷ್ಕಲ್ಮಶ ಗೆಳೆತನ ಎಲ್ಲವೂ ಆಗಿದೆ.

ಪ್ರಾರ್ಥನೆ ಮೌನದ, ಪ್ರೀತಿ ಪ್ರೇಮದ, ಸಜ್ಜನಿಕೆಯ ಮತ್ತು ಶುದ್ಧಾಂತಕರಣದ ಅಂತರಂಗದ ಭಾಷೆ ಯಾಗಿದೆ. ಸಾಮಾನ್ಯವಾಗಿ ಮುಖಮಾರ್ಜನ ಮಾಡಿ ಅಥವಾ ಸ್ನಾನ ಮಾಡಿ ದೇವರ ಮೂರ್ತಿ ಎದುರು ಮಂಡಿಯೂರಿ, ಸಾಷ್ಟಾಂಗ ನಮಸ್ಕಾರ ಮಾಡಿ, ಅಥವಾ ಕಣ್ಮುಚ್ಚಿ ಎರಡೂ ಕೈಜೋಡಿಸಿ ಆರೋಗ್ಯ , ಆಯಸ್ಸು, ಸಂಪತ್ತು, ಕೀರ್ತಿ, ಸಂತಾನ ಮುಂತಾದವುಗಳನ್ನು ಬೇಡಿಕೊಳ್ಳುವುದನ್ನು ಮಾತ್ರ ಪ್ರಾರ್ಥನೆ ಎನ್ನುತ್ತಾರೆ.

ಆದರೆ ಪ್ರಾರ್ಥನೆ ಅರ್ಥ ಮತ್ತು ವ್ಯಾಪ್ತಿ ವಿಶಾಲವಾಗಿದೆ. ಪ್ರಾರ್ಥನೆಯು ಶುದ್ಧ ಮನಸ್ಸಿನದ್ದಾಗಿರಬೇಕು. ಶುದ್ಧ ಉಚ್ಚಾರಣೆಯಿಂದ ಕೂಡಿರಬೇಕು. ತಂದೆ-ತಾಯಿ, ಗುರುಗಳ ಮತ್ತು ಹಿರಿಯರ, ಜ್ಞಾನಿಗಳ, ಸಾಧು ಸಂತರ, ಅತಿಥಿಗಳ ಸೇವೆಯೂ ಸಹ ಪ್ರಾರ್ಥನೆಯಾಗಿದೆ.



ನಿಜ ಅರ್ಥದಲ್ಲಿ ಪ್ರಾರ್ಥನೆ ಎಂದರೆ ಸಜ್ಜನ ಸಂಗ, ಸ್ವಾಧ್ಯಾಯ, ರಚನಾತ್ಮಕ ಚಿಂತನೆ, ಪರಹಿತ ಕಾರ್ಯ, ತನ್ನಂತೆ ಪರರ ಬಗೆವುದು, ತೃಪ್ತಿಯುತ ಜೀವನ ಎಲ್ಲವೂ ಒಳಗೊಂಡಿವೆ. ವಾಲ್ಮಿಕಿ ಮಹರ್ಷಿಗಳು ರಾಮಾಯಣ ಮಹಾಗ್ರಂಥದ ಒಟ್ಟು ಸಾರವನ್ನು ಸಂಕೀಪ್ತದಲ್ಲಿ ಪರಪೀಡನೆ ಪಾಪ, ಪರೋಪಕಾರವೇ ಪುಣ್ಯ ಎಂದು ಹೇಳಿದ್ದನ್ನು ಆಚರಿಸುವುದು ಪ್ರಾರ್ಥನೆ ಅನ್ನಿಸಿಕೊಳ್ಳುತ್ತದೆ.

ಒ ನಾ ಮಾ ಕಲಿರಿ ನಾನೆಂಬುದ ಬಿಡಿರಿ ಎಂಬ ಭಜನೆಯಲ್ಲಿ ನಾನು ಎಂಬುದನ್ನು ತ್ಯಜಿಸುವುದು ಪ್ರಾರ್ಥನೆ ಆಗುತ್ತದೆ. ನಿಸ್ವಾರ್ಥ ಭಾವನೆಯ ಸೇವೆ, ರಚನಾತ್ಮಕ ಚಿಂತನೆಯಿಂದ ಮಾಡುವ ಪರೋಪಕಾರವೂ ಸಹ ನಿಜ ಅರ್ಥದಲ್ಲಿ ಪ್ರಾರ್ಥನೆ ಆಗುತ್ತದೆ.

ಪ್ರೀತಿಯಿಂದ ಸಿದ್ಧಪಡಿಸಿದ ಭೋಜನ ಹಾಗೂ ಗೌರವಪೂರ್ಣ ಅತಿಥಿಸತ್ಕಾರವೂ ಸಹ ಪ್ರಾರ್ಥನೆಯ ಭಾಗವಾಗಿದೆ., ಶುಭಸಂದರ್ಭದಲ್ಲಿ ಶುಭ ಹಾರೈಸುವುದು. ದು:ಖದ ಸಂದರ್ಭದಲ್ಲಿ ಶುದ್ಧಮನಸ್ಸಿನಿಂದ ಸಾಂತ್ವನ ಹೇಳುವುದು ಪ್ರಾರ್ಥನೆಯ ಭಾಗವಾಗಿದೆ.



ಅಮೂಲ್ಯ ಸಮಯವನ್ನು ಪರಹಿತಕ್ಕಾಗಿ ವ್ಯಯಿಸುವುದು ಪ್ರಾರ್ಥನೆಯಾಗುತ್ತದೆ. ಉದಾರ ಮನಸ್ಸಿನಿಂದ ಎದುರಾಳಿಯ ತಪ್ಪನ್ನು ಕ್ಷಮಿಸುವುದು ಪ್ರಾರ್ಥನೆ ಆಗುತ್ತದೆ. ಮಾಡುವ ಕೆಲಸದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವುದು ಸಹ ಪ್ರಾರ್ಥನೆ ಆಗುತ್ತದೆ.

ಕಾಯಕದಲ್ಲಿ ನಿರತನಾದೊಡೆ ಗುರು, ಲಿಂಗ, ಜಂಗಮವ ಮರೆಯಬೇಕು ಎಂಬ ವಚನ ಮತ್ತು  ಕಾಯಕವೇ ಕೈಲಾಸ ಎಂಬ ಶರಣರ ಅಮೃತವಾಣಿಯಂತೆ ಸತ್ಯಶುದ್ಧ ಕಾಯಕ ಮಾಡುವುದು ಸಹ ಒಂದು ಅರ್ಥದಲ್ಲಿ ಪ್ರಾರ್ಥನೆ ಆಗಿದೆ ಎಂಬ ಭಾವವಿದೆ.ಹೀಗಾಗಿ ಪ್ರಾರ್ಥನೆಯನ್ನು ನಿತ್ಯ ಜೀವನದ ಭಾಗವಾಗಿಸಿ ಕೊಳ್ಳೋಣ.

ಮಹಾದೇವಯ್ಯ ಕರದಳ್ಳಿ

ಕಲಬುರ್ಗಿ 



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *