ರಾಜ್ಯ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಕೋವಿಡ್ ಸೋಂಕಿತರ ಮೃತ ದೇಹ ಸಾಗಾಣಿಕೆಗೆ ಉಚಿತ ವಾಹನ

ಸಂಸ್ಕಾರಕ್ಕೆ ಉಚಿತ ನೆರವು*

ಧಾರವಾಡ prajakiran.com : ಅವಳಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಚಿಕಿತ್ಸೆ ಫಲಿಸದೇ ಮೃತರಾಗುವ ಸೋಂಕಿತರ ಮೃತ ದೇಹವನ್ನು ಕೋವಿಡ್-19 ರ ನಿಯಮಾವಳಿಗಳನ್ವಯ ಅಂತ್ಯಸಂಸ್ಕಾರಕ್ಕೆ ಕೇವಲ 5 ಜನರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ, ಸರ್ಕಾರವು ನಿರ್ದಿಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಸೋಂಕಿತರ ಸಾವಿನಿಂದ ತೊಂದರೆಯಲ್ಲಿರುವ ಕುಟುಂಬಗಳಿಗೆ ನೆರವಾಗಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಮಾರ್ಗದರ್ಶನದಲ್ಲಿ ಮಹಾನಗರ ಪಾಲಿಕೆಯು ಸೋಂಕಿತರ ಮೃತ ದೇಹ ಸಾಗಾಣಿಕೆಗೆ ಉಚಿತವಾಗಿ ವಾಹನ ಸೌಲಭ್ಯ, ಸಂಸ್ಕಾರಕ್ಕೆ ತಗಲುವ ವೆಚ್ಚವನ್ನು ಪಾಲಿಕೆಯಿಂದ ಭರಿಸಿ ಉಚಿತವಾಗಿ ಶವಸಂಸ್ಕಾರ ನೆರವೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೊಂಕಿನಿಂದ ಮೃತಪಟ್ಟ ದೇಹಗಳನ್ನು ಸಾಗಿಸಲು ಅಂಬ್ಯೂಲೆನ್ಸ್ ಮಾಲೀಕರು ಮೃತರ ಕುಟುಂಬದವರಿಂದ ಹೆಚ್ಚಿನ ಹಣ ಸಂಗ್ರಹಣೆ ಮಾಡುತ್ತಿರುವುದು ಕಂಡು ಬಂದಿರುತ್ತದೆ.

ಇದರಿಂದ ಮೃತರ ಕುಟುಂಬದವರು ಶವ ಸಂಸ್ಕಾರಕ್ಕಾಗಿ ಕಷ್ಟಪಡುತ್ತಿರುವುದು ಕಂಡುಬರುತ್ತಿದೆ.

ಆದ್ದರಿಂದ ಇಂತಹ ಘಟನೆಗಳು ಮರುಕಳಿಸದಂತೆ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಕೋವಿಡ್-19 ಸೋಂಕಿನಿಂದ ಮೃತಪಟ್ಟ ದೇಹಗಳನ್ನು ಕಿಮ್ಸ್, ಜಿಲ್ಲಾಸ್ಪತ್ರೆ ಹಾಗೂ ಎಸ್‍ಡಿಎಂ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಂದ ನಿಗದಿತ ಹೆಗ್ಗೇರಿ ಸ್ಮಶಾನಕ್ಕೆ ಸಾಗಿಸುವ ಕಾರ್ಯವನ್ನು ಹಾಗೂ ಸದರಿ ಮೃತದೇಹಗಳನ್ನು ಗೌರವಯುತವಾಗಿ ಕೋವಿಡ್-19 ರ ನಿಯಮಾವಳಿಗಳನ್ವಯ ಅಂತ್ಯಸಂಸ್ಕಾರ ಮಾಡಲು ಕ್ರಮ ಜರುಗಿಸಲಾಗುತ್ತಿದೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ, ಧಾರವಾಡದ ಜಿಲ್ಲಾಸ್ಪತ್ರೆ ಹಾಗೂ ಎಸ್‍ಡಿಎಂ ಆಸ್ಪತ್ರೆಗಳಿಗೆ ಮೂರು ಪ್ರತ್ಯೇಕ ವಾಹನಗಳನ್ನು ಸೋಂಕಿತರ ಶವಗಳ ಸಾಗಾಣಿಕೆಗೆ ಮೀಸಲಿಟ್ಟಿದ್ದು, ನಿಧನರಾದ ಸೋಂಕಿತರ ಕುಟುಂಬದ ಸದಸ್ಯರು ಮಹಾನಗರ ಪಾಲಿಕೆಯ ಸಹಾಯವಾಣಿ – 0836-2213888, 9141051611 ಹಾಗೂ 0836-2213898 ಕ್ಕೆ ಕರೆ ಮಾಡಿ ತಿಳಿಸಿದರೆ ತಕ್ಷಣ ಆಯಾ ಆಸ್ಪತ್ರೆಗೆ ನೀಡಿರುವ ವಾಹನದಲ್ಲಿ ಸೋಂಕಿತರ ಮೃತ ದೇಹವನ್ನು ಹೆಗ್ಗೇರಿಯಲ್ಲಿರುವ ರುದ್ರಭೂಮಿಯಲ್ಲಿ ಶವಸಂಸ್ಕಾರ ಮಾಡಲಾಗುವುದು.

ಸೋಂಕಿತರ ಶವ ಸಂಸ್ಕಾರವು ನಿರ್ಧಿಷ್ಟ ಮಾರ್ಗಸೂಚಿಗಳ ಪ್ರಕಾರ ಮಾಡಬೇಕಿರುವುದರಿಂದ ಶವ ಸಂಸ್ಕಾರ ಮಾಡಲು ಐದು ಜನ ಸಿಬ್ಬಂದಿಗಳಿಗೆ ತರಬೇತಿ ನೀಡಿ, ಪಿಪಿಇ ಕಿಟ್ ಸೇರಿದಂತೆ ಎಲ್ಲ ಸುರಕ್ಷತಾ ಸಾಮಗ್ರಿಗಳನ್ನು ಅವರಿಗೆ ನೀಡಲಾಗಿದೆ.

ತರಬೇತಿ ಹೊಂದಿರುವ ಸಿಬ್ಬಂದಿಗಳು ಮೃತರಾಗಿರುವ ಸೋಂಕಿತನ ಸಂಪ್ರದಾಯದಂತೆ ಶವಸಂಸ್ಕಾರ ಮಾಡುತ್ತಾರೆ.

ಇದಕ್ಕಾಗಿ ಪ್ರತಿ ಶವ ಸಂಸ್ಕಾರಕ್ಕೆ ಸುಮಾರು 6,000/-ರೂ.ಗಳನ್ನು ಪಾಲಿಕೆಯಿಂದ ವೆಚ್ಚ ಮಾಡಲಾಗುತ್ತದೆ.

ಸೋಂಕಿತ ಮುಸ್ಲಿಂ ವ್ಯಕ್ತಿಗಳ ಮೃತದೇಹ ಸಾಗಾಣಿಕೆಗೆ ಖಬರ್‍ಸ್ಥಾನ ಕಮೀಟಿಯವರು ಅಥವಾ ಕುಟುಂಬಸ್ಥರು ಪಾಲಿಕೆಯ ಸಹಾಯವಾಣಿಗೆ ಕರೆ ಮಾಡಿ ನೆರವು ಕೇಳಿದರೆ, ಮೃತದೇಹ ಸಾಗಾಣಿಕೆಗೆ ಉಚಿತವಾಗಿ ವಾಹನ ಸೌಲಭ್ಯ ಹಾಗೂ ಖಬರ್‍ಸ್ಥಾನದಲ್ಲಿ ಶವ ಸಂಸ್ಕಾರಕ್ಕೆ ಖಬರ್ (ತಗ್ಗು) ತೆಗೆಯಲು ಬಳಸುವ ಜೆಸಿಬಿಯಂತ್ರ ಬಳಕೆಯ ಖರ್ಚನ್ನು ಪಾಲಿಕೆಯಿಂದಲೇ ಭರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ದು:ಖದಲ್ಲಿರುವ ಕುಟುಂಬಗಳಿಗೆ ಆರ್ಥಿಕ ಹೊರೆಯಾಗದಂತೆ ಸಹಾಯ ನೀಡುವುದು ಜಿಲ್ಲಾಡಳಿತ ಮತ್ತು ಪಾಲಿಕೆಯ ಉದ್ದೇಶವಾಗಿದೆ. ಖಾಸಗಿ ವಾಹನಗಳು ಸೋಂಕಿತರ ಶವ ಸಾಗಾಣಿಕೆಗೆ ಒಪ್ಪದೇ ಇರುವ ಸಾಧ್ಯತೆ ಇರುತ್ತದೆ.

ಮತ್ತು ಒಪ್ಪಿದರೂ ಹೆಚ್ಚಿನ ದರ ಕೇಳುತ್ತಾರೆ. ಆದ್ದರಿಂದ ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಸಾರ್ವಜನಿಕರು ಯಾವುದೇ ತರಹದ ಹಣವನ್ನು ನೀಡಬಾರದು.

ಒಂದು ವೇಳೆ ಮೃತ ದೇಹಗಳನ್ನು ಸಾಗಿಸಲು ಹಾಗೂ ಅಂತ್ಯ ಸಂಸ್ಕಾರಕ್ಕಾಗಿ ಯಾರಾದರು ಹಣವನ್ನು ಕೇಳಿದ್ದಲ್ಲಿ ಪಾಲಿಕೆಯ ಸಹಾಯವಾಣಿ 0836-2213888, 9141051611 ಹಾಗೂ 0836-2213898 ಕ್ಕೆ ದೂರು ದಾಖಲಿಸಬಹುದಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *