ಜಿಲ್ಲೆ

ಗಜೇಂದ್ರಗಡದಲ್ಲಿ ವರಾಹ ಕಾಟಕ್ಕೆ ಸುಸ್ತಾದ ಜನತೆ…!

ಕಡಿವಾಣ ಹಾಕದ ಪುರಸಭೆ ಅಧಿಕಾರಿಗಳಿಗೆ ಜನತೆ ಹಿಡಿ ಶಾಪ
ದಾವಲಸಾಬ ತಾಳಿಕೋಟಿ
ಗಜೇಂದ್ರಗಡ : ಸರ್ಕಾರ ಸ್ವಚ್ಛತೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ಕೋಟೆನಾಡು ಗಜೇಂದ್ರಗಡ ಮಾತ್ರ ಹಂದಿಗಳ ತಾಣವಾಗಿ ಮಾರ್ಪಟ್ಟಿದೆ.

ಪಟ್ಟಣದ ಬಹುತೇಕ ಬಡಾವಣೆಗಳು ಸೇರಿದಂತೆ ಸಾರ್ವಜನಿಕ ಉದ್ಯಾನ, ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳಲ್ಲಿ ಹಂದಿಗಳ ಕಾಟ ಹೆಚ್ಚಾಗಿದೆ.

ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ.

ನಗರದಲ್ಲಿ ಇತ್ತಿಚಿನ ದಿನಗಳಲ್ಲಿ ಹಂದಿಗಳ ಕಾಟ ವಿಪರೀತವಾಗಿದ್ದು, ಇದರಿಂದ ಸ್ಥಳೀಯ ಜನತೆ ಬೇಸತ್ತು ಹೋಗಿದ್ದಾರೆ.

ಗಜೇಂದ್ರಗಡ ಪುರಸಭೆ ವ್ಯಾಪ್ತಿಯ ೧೬ ನೇ ವಾರ್ಡಿನ ಮಾಲ್ದರ್ ಓಣಿಯಲ್ಲಿ ಹಂದಿಗಳ ಹಾವಳಿಯಿಂದ ನಾಲ್ಕೈದು ಚಿಕ್ಕಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹಂದಿಗಳ ಕಾಟದಿಂದ ಬೇಸತ್ತಿರುವ ಓಣಿಯ ನಿವಾಸಿಗಳು ಇದೀಗ ಪುರಸಭೆಯ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ.

ಕೊಳಚೆ ಪ್ರದೇಶವಿರಲಿ ಅಥವಾ ಅಭಿವೃದ್ಧಿ ಪ್ರದೇಶವಿರಲಿ ಎಲ್ಲ ಕಡೆಯೂ ಹಂದಿಗಳದ್ದೆ ಸಾಮ್ರಾಜ್ಯ.

ಹೀಗಾಗಿ ಹಂದಿಗಳ ಹಾವಳಿಯಿಂದಾಗಿ ಎಲ್ಲಿ ನೋಡಿದರಲ್ಲಿ ಕೊಳಚೆ ಜಾಸ್ತಿಯಾಗುತ್ತಿದ್ದು ಅನೇಕ ರೋಗಗಳಿಗೆ ಎಡೆಮಾಡಿಕೊಡುತ್ತಿದೆ.

ಸೊಳ್ಳೆಗಳ ಕಾಟ ವಿಪರೀತವಾಗಿದ್ದು ಸ್ಥಳೀಯ ಜನತೆಯನ್ನು ಕಂಗಾಲಾಗಿಸಿದೆ. ಮನೆಯಲ್ಲಿ ಕಸ ಮುಸುರಿ ಚೆಲ್ಲಲು ಮಹಿಳೆಯರು ಮನೆಯಿಂದ ಹೊರ ಹೋಗಲು ಹೆದರುವಂತಾಗಿದೆ.

ಏಕೆಂದರೆ ಯಾವ ಸಮಯದಲ್ಲಿ ಹಂದಿಗಳು ದಾಳಿ ಮಾಡುತ್ತವೆಯೋ ಎಂಬ ಭೀತಿ ಅವರದ್ದಾಗಿದೆ.

ಇದಲ್ಲದೆ ಬೆಳಗಿನ ವೇಳೆ ವಾಯುವಿಹಾರಕ್ಕೆ ತೆರಳುವವರು, ಆಟವಾಡಲು ತೆರಳುವವರನ್ನು ಕೂಡ ಹಂದಿಗಳು ಬೆನ್ನಟ್ಟುತ್ತಿವೆ.

ಖರ್ಚಿಲ್ಲದೆ ನಡೆಯುವ ಉದ್ಯಮ : ನಗರದಲ್ಲಿ ಬೇಕಾಬಿಟ್ಟಿ ಹಂದಿಗಳನ್ನು ಸಂಚರಿಸುವಂತೆ ನೋಡಿಕೊಳ್ಳುತ್ತಿರುವುದರಿಂದ ಇದೊಂದು ಖರ್ಚಿಲ್ಲದೆ ನಡೆಯುವ ಉದ್ಯಮವಾದಂತಾಗಿದೆ.

ಅವುಗಳನ್ನು ಬೇಕಾಬಿಟ್ಟಿಯಾಗಿ ಬಿಟ್ಟು ಹೋಗೊ ಮಾಲೀಕರು ಅವುಗಳಿಂದ ಸಾರ್ವಜನಿಕರಿಗೆ ಹಾನಿಯಾದಾಗ ಎಲ್ಲಿರುತ್ತಾರೆ?

ಹಂದಿಗಳಿಂದಾಗೋ ಅನಾಹುತಗಳಿಗೇ ಯಾರು ಹೊಣೆ? ಅನ್ನೊದು ತಿಳಿಯದಾಗಿದೆ.
ಅನೇಕ ಸಾಂಕ್ರಾಮಿಕ ಮಾರಕ ರೋಗಗಳ ಮೂಲ ಹಂದಿಗಳೆ ಎನ್ನಲಾಗಿದೆ.

ಕೊರವರ ಓಣಿ ಬದಿಯ ಅನೇಕ ವಾರ್ಡುಗಳು ಇವುಗಳಿಂದ ಗಬ್ಬೆದ್ದು ನಾರುತ್ತಿವೆ,

ಸತ್ತ ಹಂದಿಗಳ ಸೂಕ್ತ ವಿಲೇವಾರಿಯಿಲ್ಲದಿರುವುದರಿಂದ 18ನೇ ವಾರ್ಡಿನ ಸಾರ್ವಜನಿಕ ಪಾಳು ಬಿದ್ದ ಹೊಂಡದಲ್ಲಿ ಸತ್ತ ಹಂದಿಗಳನ್ನು ಎಸೆದು ಹೊಗ್ತಾರೆ.

ಇದರಿಂದ ಅಲ್ಲಿನ ಸ್ಥಳೀಯರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಬೆಳಗಿನ ಜಾವ ನಾವು ಕಸ ಚೆಲ್ಲಲು ಮನೆಯಿಂದ ಹೊರಗೆ ಹೊರಟರೇ ಸಾಕು ಹಂದಿಗಳು ಗುಂಪಾಗಿ ನಮ್ಮನ್ನು ಹಿಂಬಾಲಿಸುತ್ತವೆ.

ಹೀಗಾಗಿ ಕಸ ಮತ್ತು ಮುಸುರೆಯನ್ನು ಚೆಲ್ಲಲು ತೆರಳುವಾಗ ಕೈಯಲ್ಲೊಂದು ಬಡಿಗೆ ಹಿಡಿದುಕೊಂಡೇ ಹೋಗಬೇಕು.

ನಮ್ಮ ಮಕ್ಕಳಿಗೆ ಹಂದಿಗಳು ಕಡಿದು ಗಾಯಗಳಾಗಿವೆ. ಇದಕ್ಕೆಲ್ಲ ಯಾರು ಹೊಣೆ. ಆದಷ್ಟು ಬೇಗನೇ ಪುರಸಭೆಯವರು ಇದಕ್ಕೊಂದು ಕೊನೆ ಹಾಡಬೇಕು.

ಇಲ್ಲವಾದ್ರೆ ಪುರಸಭೆಯ ಮುಂದೆ ಧರಣಿ ಕೂಡಲಾಗುತ್ತದೆ.
ಮಾಬುಬಿ ಮಾಲ್ದರ ಹಾಗೂ ಹಸೀನಾಬಿ ರಾಂಪೂರ
ಮಾಲ್ದರ್ ಓಣಿಯ ನಿವಾಸಿಗಳು

ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಹಂದಿಗಳನ್ನು ಬೇಕಾಬಿಟ್ಟಿಯಾಗಿ ಅಲೆಯಲು ಬಿಡದೇ ನಗರದ ಹೊರವಲಯದಲ್ಲಿ ಅವುಗಳನ್ನು ಸಾಕಲು ಪರ್ಯಾಯ ವ್ಯವಸ್ಥೆ ಮಾಡಬೇಕು.

ಹೀಗಾದಲ್ಲಿ ಮಾತ್ರ ಜನರಿಗೆ ವರಾಹ ಕಾಟದಿಂದ ಮುಕ್ತಿ ದೊರಕಬಹುದಾಗಿದೆ.

ಇಲ್ಲವಾದ್ರೆ ಜನರಿಗೆ ಇವುಗಳಿಂದಾಗುತ್ತಿರುವ ತೊಂದರೆ ಇನ್ನಷ್ಟು ಹೆಚ್ಚಾಗುತ್ತದೆ.

೧೬ ನೇ ವಾರ್ಡಿನಲ್ಲಿ ಇಷ್ಟೆಲ್ಲಾ ಆದ್ರೂ ಕೂಡಾ ಇಲ್ಲಿನ ಪುರಸಭಾ ಸದಸ್ಯರಾದ ಲೀಲಾವತಿ ಸವಣೂರು ಮಾತ್ರ ಇತ್ತ ತಲೆ ಹಾಕದೆ ಇರೋದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ಟಾರೆ ಸ್ಥಳೀಯ ಪುರಸಭೆಯ ಸಿಬ್ಬಂದಿ ವರಾಹ ಕಾಟವನ್ನು ತಪ್ಪಿಸಲು ಏನಾದರೂ ತುರ್ತು ಕ್ರಮ ಕೈಗೊಳ್ಳಬೇಕು.

ಇಲ್ಲವಾದರೆ ಯಾವುದಾದರೂ ಅನಾಹುತ ಸಂಭವಿಸಿದಲ್ಲಿ ಅದಕ್ಕೆ ಅವರೇ ಹೊಣೆ ಹೊರಬೇಕಾಗುತ್ತದೆ. ಎನ್ನೊದು ಇಲ್ಲಿನ ನಾಗರೀಕರ ಎಚ್ಚರಿಕೆಯಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *