ಅಪರಾಧ

ಫ್ರೂಟ್ ಇರ್ಫಾನ್ ಕೊಲೆ : ಐವರು ಆರೋಪಿಗಳ ಬಂಧನ

ಹುಬ್ಬಳ್ಳಿ prajakiran.com :  ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹಾಗೂ ಧಾರವಾಡ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದ್ದ ರೌಡಿಶೀಟರ್ ಫ್ರೂಟ್ ಇರ್ಫಾನ್ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಹುಬ್ಭಳ್ಳಿ-ಧಾರವಾಡ ಮಹಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಪ್ರಕರಣ ಭೇದಿಸಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ ಅವರು ಡಿಸಿಪಿ ಆರ್. ಬಿ. ಬಸರಗಿ ಅವರ ನೇತೃತ್ವದಲ್ಲಿ ಎಸಿಪಿ ಎಂ.ವಿ. ಮಲ್ಲಾಪುರ ಅವರ ಮಾರ್ಗದರ್ಶನದಲ್ಲಿ ಆರು ಅಧಿಕಾರಿಗಳ ತಂಡವನ್ನು ರಚಿಸಿದ್ದರು.

ಹಳೆ ಹುಬ್ಬಳ್ಳಿ ಇನ್ಸಪೆಕ್ಟರ್ ಮಾರುತಿ ಗುಳ್ಳಾರಿ, ಪೊಲೀಸ್ ಇನ್ಸಪೆಕ್ಟರ್ ಗಳಾದ ಅಲ್ತಾಫ್ ಮುಲ್ಲಾ, ಭರತ ರಡ್ಡಿ, ಕಾಡದೇವರಮಠ, ಸುರೇಶ ಕುಂಬಾರ ಹಾಗೂ ಇತರರು ಕಾರ್ಯಾಚರಣೆಯಲ್ಲಿದ್ದರು.

ಬಂಧಿತ ಆರೋಪಿಗಳನ್ನು ಧಾರವಾಡದ ಆಫ್ತಾಬ್ ಬೇಪಾರಿ, ತೌಸಿಫ್ ನಿಪ್ಪಾಣಿ, ಅಮೀರ ತಮಟಗಾರ, ಹತ್ತಿಯಾಬ್ ತಡಕೋಡ, ಮೋಹಿನ್ ಪಟೇಲ್ ಎಂದು ಗುರುತಿಸಲಾಗಿದೆ.

ಅಲ್ಲದೆ, ಬಂಧಿತರಿಂದ ಕೊಲೆಗೆ ಬಳಸಿದ್ದ ಎರಡು ಪಿಸ್ತೂಲ್, ಒಂದು ಡಿಯೋ ಬೈಕ್, ಜೈಲೋ ಕಾರ್ ಬುಲೆಟ್ ಗಾಡಿ ಹಾಗೂ ಹೋಂಡಾ ಎಕ್ಟಿವಾ ವಶಪಡಿಸಿಕೊಳ್ಳಲಾಗಿದೆ.

ಇನ್ನಿಬ್ಬರು ಸುಪಾರಿ ಹಂತಕರು ಮುಂಬೈನವರು ಎಂದು ತಿಳಿದುಬಂದಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ.

ಇದಲ್ಲದೆ, ಫ್ರೂಟ್ ಇರ್ಫಾನ್ ಕೊಲೆಗೆ ಸುಪಾರಿ ಕೊಟ್ಟವರು ಯಾರು, ಹಣಕಾಸು ಸಹಾಯ ಮಾಡಿದವಾರು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಈ ಕೊಲೆಗೆ ರಾಜಕೀಯ ನಂಟು ಜೊತೆಗೆ ಭೂಗತ ಪಾತಕಿ ಬಚ್ಚಾಖಾನ್ ಹೆಸರು ಕೂಡ ಕೇಳಿಬಂದಿತ್ತು.  

ಈ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಹತ್ತು ಹಲವರ ವಿಚಾರಣೆ ನಡೆಸಿ ಮಹತ್ವದ ಮಾಹಿತಿ ಕಲೆ ಹಾಕಿದ್ದ ಹುಬ್ಬಳ್ಳಿ-ಧಾರವಾಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.  

 ಹಾಡಹಗಲೇ ಗುಂಡಿನ ದಾಳಿ :

ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರಕನ್ನಡ ಮತ್ತು ಧಾರವಾಡ ಜಿಲ್ಲೆಯ ಪೊಲೀಸರಿಗೆ ತಲೆ ನೋವಾಗಿದ್ದ ರೌಡಿಶೀಟರ್ ಫ್ರೂರ್ಟ್ ಇರ್ಫಾನ್ ಮೇಲೆ ಆ. 6ರಂದು ಗುರುವಾರ ಕಾರವಾರ ರಸ್ತೆಯಲ್ಲಿರುವ ಆಲ್ ತಾಜ್ ನಲ್ಲಿ ಮಗನ ವಲೀಮಾ ದಿನದಂದು ಹಾಡಹಗಲೇ ಗುಂಡಿನ ದಾಳಿ ನಡೆದಿತ್ತು.

ಇದರಿಂದಾಗಿ ರಕ್ತದ ಮಡುವಿನಿಂದ ಬಿದ್ದು ಹೊರಳಾಡುತ್ತಿದ್ದ ಫ್ರೂಟ್ ಇರ್ಫಾನ್ ನನ್ನು ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಫಲಿಸದೆ ಮಧ್ಯರಾತ್ರಿ ಮೃತಪಟ್ಟಿದ್ದ.

ಇತನ ಮೇಲೆ ಮೀಟರ್ ಬಡ್ಡಿ, ಕೊಲೆ ಯತ್ನ, ಜೀವ ಬೆದರಿಕೆ,  ಭೂ ಅತಿಕ್ರಮ ಹಾಗೂ ಕೊಲೆ  ಸೇರಿದಂತೆ ಅನೇಕ ಪ್ರಕರಣಗಳಿದ್ದು, ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಓಪನ್ ಆಗಿತ್ತು.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್ ದಿಲೀಪ್ ಅವರು ಅವನ ಉಪಟಳ ತಾಳಲಾರದೆ ಚಾಮರಾಜನಗರ ಜಿಲ್ಲೆಯ ಕೋಳ್ಳೆಗಾಲ ತಾಲೂಕಿನ ಹನೂರು ಪೊಲೀಸ್ ಠಾಣೆ ವ್ಯಾಪ್ತಿಗೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಗಡಿ ಪಾರು ಮಾಡಿದ್ದರು.

 ಆತ ನ್ಯಾಯಾಲಯದ ಮೊರೆ ಹೋಗಿ ಅದಕ್ಕೆ ತಡೆಯಾಜ್ಞೆ ತಂದಿದ್ದ. ಅಲ್ಲದೆ, ಧಾರವಾಡದಿಂದ ಕಾರವಾರದ ದಾಂಡೇಲಿಯಲ್ಲಿ ರೆಸಾರ್ಟ್ ಖರೀದಿಸಿ ಅಲ್ಲಿಗೆ ಸ್ಥಳಾಂತರಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *